ವೀರಾಜಪೇಟೆ, ನ. ೧೪: ಸಮಾಜ ಸೇವೆಗಳಿಂದ ವ್ಯಕ್ತಿಗಳು ಉತ್ತರೋತ್ತರ ಪ್ರಗತಿಹೊಂದುತ್ತಾರೆ. ಸೇವೆ ಎಂಬುದು ನಿಂತ ನೀರಾಗಬಾರದು ಹರಿಯುವ ನದಿಯಂತಾಗಬೇಕು ಎಂದು ವೀರಾಜಪೇಟೆ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಯಶೋಧಾ ಮಂದಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಆರ್ಥಿಕ ಸ್ಪಂದನ ಸಂಘ ಸುಂಕದಕಟ್ಟೆ ಮತ್ತು ಲಯನ್ಸ್ ಬ್ಲಡ್ ಸೆಂಟರ್ ಮೈಸೂರು ಸಂಯುಕ್ತ ಆಶ್ರಯದಲ್ಲಿ ಸಂಘದ ೨ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸುಂಕದ ಕಟ್ಟೆಯ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಕ್ತದಾನಿ ಗಳಿಗೆ ಹಣ್ಣುಹಂಪಲು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಯೋಶೋಧ ಮಂದಣ್ಣ ಅವರು ಯುವ ಸಮೂಹವು ದುಶ್ಚಟಗಳಿಗೆ ದಾಸರಾಗದೆ, ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಸಂಘ ಸಂಸ್ಥೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಸಮಸ್ಯೆಗಳಿಗೆ ಸ್ಪಂದಿಸಿದಲ್ಲಿ ಸಮಾಜವು ಉತ್ತಮ ಸಮಾಜವಾಗಿ ರೂಪಿತ ವಾಗುತ್ತದೆ. ಇಂತಹ ಕಾರ್ಯಕ್ರಮ ಗಳನ್ನು ಎಲ್ಲಾ ವಾರ್ಡ್ಗಳಲ್ಲಿ ಆಯೋಜಿಸುವಂತಾಗಬೇಕು ಎಂದು ಹೇಳಿದರು.

ಪುರಸಭೆಯ ಮಾಜಿ ಅಧ್ಯಕ್ಷರು ಮತ್ತು ಹಾಲಿ ನಾಮನಿರ್ದೇಶಿತ ಸದಸ್ಯರಾದ ಕೂತಂಡ ಸಚಿನ್ ಕುಟ್ಟಯ್ಯ ಅವರು ಮಾತನಾಡಿ ಅರ್ಥಿಕ ಸ್ಪಂದನ ಸಂಘವು ತನ್ನ ಸದಸ್ಯರಿಂದ ಸಂಗ್ರಹಿಸಿದ ಧನವನ್ನು ಸಮಾಜದ ಒಳಿತಿಗಾಗಿ ವಿನಿಯೋಗ ಮಾಡುತ್ತಾ ಜನಮಾನಸದಲ್ಲಿ ಹೆಸರುಗಳಿಸುತ್ತಾ ಬಂದಿದೆ. ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನವನ್ನು ಸಂಘ ನೀಡಿದೆ. ಇದು ಸದ್ಬಳಕೆಯಾಗಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಪ್ರಗತಿಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿರುವ ಆರಕ್ಷಕ ಇಲಾಖೆಯ ವೀರಾಜಪೇಟೆ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಸ್ಟೇಬಲ್ ಬಿ.ಎಂ. ರಾಮಪ್ಪ, ನಗರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಟಿ.ಎಸ್. ಗಿರೀಶ್ ಮತ್ತು ಚೆಸ್ಕಾಂ ಉದ್ಯೋಗಿಯಾಗಿರುವ ಎ.ಕೆ. ರವಿಶಂಕರ್ ಅವರನ್ನು ಸನ್ಮಾನಿ ಸಲಾಯಿತು. ರಕ್ತದಾನ ಶಿಬಿರದಲ್ಲಿ ಸುಮಾರು ೫೦ ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ೩೨ ಮಂದಿ ವಿದ್ಯಾರ್ಥಿ ವೇತನ ನೀಡಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಆರ್ಥಿಕ ಸ್ಪಂದನ ಸಂಘದ ಅಧ್ಯಕ್ಷರಾದ ಆರುಣಾ ಹೆಚ್.ಪಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಶಭೀರ್, ಸರ್ವ ಸಿದ್ದಿವಿನಾಯಕ ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಉಪಸ್ಥಿತರಿದ್ದರು.

ಲಯನ್ಸ್ ಬ್ಲಡ್ ಸೆಂಟರ್ ಮೈಸೂರಿನ ಡಾ. ಶ್ವೇತಾ, ತಂತ್ರಜ್ಞರಾದ ಪ್ರಭು, ಜಯಂತ್, ಗಿರೀಶ್, ರೆಜಿತ್, ಚಂದನ್ ಮತ್ತು ಪಿ.ಆರ್.ಓ ಸುರೇಶ್ ಹಾಗೂ ಆರ್ಥಿಕ ಸ್ಪಂದನ ಸಂಘದ ಪದಾಧಿಕಾರಿಗಳು, ಸದಸ್ಯರು ವಿದ್ಯಾರ್ಥಿ ಗಳು ಸಾರ್ವಜನಿಕರು ಹಾಜರಿದ್ದರು.