ಗೋಣಿಕೊಪ್ಪಲು, ನ. ೧೪: ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾ.೨೧ರಂದು ಮಡಿಕೇರಿಯ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಗೋಣಿಕೊಪ್ಪಲುವಿನ ರೈತ ಸಂಘದ ಕೇಂದ್ರ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ರೈತ ಸಂಘದ ವಿವಿಧ ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಉಪಯುಕ್ತ ಸಲಹೆ ನೀಡಿದರು. ಇದೇ ತಾ.೨೧ರ ಅರಣ್ಯ ಭವನ ಮುತ್ತಿಗೆಯನ್ನು ಯಶಸ್ವಿಯಾಗಿ ನಡೆಸಲು ಸಭೆಯು ಒಮ್ಮತದ ತೀರ್ಮಾನ ಕೈಗೊಂಡಿತ್ತು. ರೈತರು, ಕಾರ್ಮಿಕರು, ಆದಿವಾಸಿಗಳು ಸೇರಿದಂತೆ ಇನ್ನಿತರ ಸಂಘ ಸಂಸ್ಥೆಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪದಾಧಿಕಾರಿಗಳು ವಿವರ ನೀಡಿದರು.

ವನ್ಯ ಪ್ರಾಣಿಗಳ ಹಾವಳಿಯಿಂದ ಜಿಲ್ಲೆಯಲ್ಲಿ ಅನೇಕ ಮಾನವನ ಜೀವಕ್ಕೆ ಹಾನಿ ಆಗಿದೆ; ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ಅರಣ್ಯ ಇಲಾಖೆಯು ಸಂಪೂರ್ಣ ವಿಫಲವಾಗುತ್ತಿರುವ ಹಿನೆÀ್ನಲೆಯಲ್ಲಿ ರೈತ ಸಂಘ ಮಡಿಕೇರಿಯ ಅರಣ್ಯ ಭವನ ಮುತ್ತಿಗೆ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ ಎಂದು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಸಭೆಗೆ ಮಾಹಿತಿ ಒದಗಿಸಿದರು.

ಕೊಡಗಿನಲ್ಲಿ ಇನ್ನು ಮುಂದೆ ವನ್ಯ ಜೀವಿಗಳಿಂದ ಮಾನವನ ಮೇಲೆ ಯಾವುದೇ ರೀತಿಯ ಅನಾಹುತಗಳು ನಡೆಯದಂತೆ ಅರಣ್ಯ ಇಲಾಖೆ ಆಧುನಿಕ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ರೈತರ ತೋಟಗಳಿಗೆ ವನ್ಯ ಪ್ರಾಣಿಗಳು ನುಸುಳದಂತೆ ಎಚ್ಚರಿಕೆ ವಹಿಸಬೇಕು. ಆ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಕೊಡಗಿನ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತ ಪಡಿಸಬೇಕು ಎಂದು ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ತಿಳಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ನಲ್ಲೂರು ಅಧ್ಯಕ್ಷ ತೀತರಮಾಡ ರಾಜ, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಸೇರಿದಂತೆ ವಿವಿಧ ಭಾಗದ ಅಧ್ಯಕ್ಷರು ಗಳು ಸಭೆಯಲ್ಲಿ ಭಾಗವಹಿಸಿದ್ದರು.

೫೦ಕ್ಕೂ ಅಧಿಕ ಸಂಘಟನೆಗಳು

ಸಿದ್ದಾಪುರ : ಜಿಲ್ಲೆಯಲ್ಲಿ ವನ್ಯ ಜೀವಿಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿ ತಾ. ೨೧ ರಂದು ಜಿಲ್ಲೆಯ ವಿವಿಧ ಸಂಘಟನೆಗಳ ಬೆಂಬಲದಿAದ ಮಡಿಕೇರಿ ಅರಣ್ಯ ಭವನದ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ವನ್ಯ ಜೀವಿಗಳ ಹಾವಳಿ ಮಿತಿಮೀರಿದ್ದು, ಅದರಲ್ಲಿ ಮುಖ್ಯವಾಗಿ ಆನೆ-ಮಾನವ ಸಂಘರ್ಷ ನಿರಂತರವಾಗಿದೆ. ಇದಕ್ಕೆ ಸರಕಾರಗಳು ಶಾಶ್ವತ ಯೋಜನೆಯನ್ನು ರೂಪಿಸಲು ವಿಫಲವಾಗಿವೆ. ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖಾಧಿಕಾರಿಗಳು ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಇದನ್ನು ಪ್ರತಿಭಟಿಸಿ ಹಾಗೂ ಇವರುಗಳ ಕಾರ್ಯವೈಖರಿಯನ್ನು ಖಂಡಿಸಿ ತಾ. ೨೧ ರಂದು ವಿವಿಧ ಬೇಡಿಕೆಗಳನ್ನು ಈಡೇರಿಸಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿ ಅರಣ್ಯ ಭವನದ ಎದುರು ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಕಾರ್ಮಿಕರ ಸಂಘ, ಆದಿವಾಸಿಗಳ ಸಂಘ, ಸೇರಿದಂತೆ ೫೦ಕ್ಕೂ ಅಧಿಕ ಸಂಘಟನೆಗಳು ಭಾಗವಹಿಸಲಿದ್ದಾರೆ ಎಂದರು. ೨೧ ರಂದು ಬೆಳಿಗ್ಗೆ ೧೦.೩೦ ಕ್ಕೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಸುಮಾರು ೫೦೦೦ಕ್ಕೂ ಅಧಿಕ ಮಂದಿ ಪ್ರತಿಭಟನೆ ಮೆರವಣಿಗೆಯಲ್ಲಿ ತೆರಳಿ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಲಾಗುವುದೆಂದರು. ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ ಪತ್ರ ವ್ಯವಹಾರಗಳನ್ನು ಸರ್ಕಾರಕ್ಕೆ ಕಳುಹಿಸ ಲಾಗಿದ್ದು, ಅಲ್ಲದೇ ಹೋರಾಟಗಳನ್ನು ಮಾಡಲಾಗಿದ್ದರೂ ಕೂಡ ಸರ್ಕಾರಗಳಾಗಿ ಜನಪ್ರತಿನಿಧಿಗಳಿಗೆ ಹಾಗೂ ಅರಣ್ಯ ಅಧಿಕಾರಿಗಳು ಸೂಕ್ತ ರೀತಿಗೆ ಸ್ಪಂದಿಸದೇ ನಿರ್ಲಕ್ಷö್ಯ ವಹಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆಗಳ ದಾಳಿಗೆ ಸಿಲುಕಿ ಹಲವಾರು ಮಂದಿ ಬಲಿಯಾಗಿದ್ದಾರೆ. ಹಾಗೂ ಕೋಟ್ಯಂತರ ರೂಪಾಯಿ ಕೃಷಿ ಫಸಲುಗಳು ನಾಶಗೊಂಡಿವೆೆ. ಆದರೂ ಕೂಡ ಸರ್ಕಾರಗಳು ಸೂಕ್ತ ರೀತಿಯ ಪರಿಹಾರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಸಿದ್ದಾಪುರ ಶಾಖೆಯ ಅಧ್ಯಕ್ಷ ದೇವಣೀರ ಬೋಪಣ್ಣ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಬೆಳೆಗಾರರು ಕೂಡ ಕಾಫಿ ತೋಟದ ಒಳಗೆ ತೆರಳದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು. ಹಾಗೂ ಸಂತಾನ ಹರಣ ಮಾಡುವ ಮೂಲಕ ಆನೆಗಳ ಸಂಖ್ಯೆಗಳನ್ನು ಕಡಿಮೆಗೊಳಿಸ ಬೇಕೆಂದರು. ಕಾಡಿನಿಂದ ನಾಡಿಗೆ ಕಾಡಾನೆಗಳು ಬಾರದಂತೆ ಕಾಡಾನೆ ಗಳನ್ನು ಸೆರೆ ಹಿಡಿದು ಜಿಲ್ಲೆಯಲ್ಲಿ ೧೦ ಸಾಕಾನೆ ಶಿಬಿರವನ್ನು ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಅರಣ್ಯದಲ್ಲಿ ಕಾಡಾನೆಗಳಿಗೆ ಬೇಕಾದಂತಹ ಆಹಾರಗಳನ್ನು ಒದಗಿಸಿಕೊಡ ಬೇಕೆಂದು ಆಗ್ರಹಿಸಿದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ; ತಾ. ೨೧ ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಕಾರ್ಮಿಕರು ಬೆಂಬಲ ಸೂಚಿಸಿ ಆ ದಿನ ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಆ ದಿನ ಸರ್ಕಾರಕ್ಕೆ ಗಡುವು ನೀಡುವ ದಿನವಾಗಿದ್ದು, ಕಾಡಾನೆಗಳ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದೆಂದರು. ಇದು ಜಿಲ್ಲೆಯ ಅಳಿವು-ಉಳಿವಿನ ವಿಚಾರವಾಗಿದ್ದು, ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾನೂನು ಸಲಹೆಗಾರ ಕೆ.ಬಿ. ಹೇಮಚಂದ್ರ ಮಾತನಾಡಿ, ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ವ್ಯಕ್ತಿಗೆ ಅಲ್ಲಿನ ಶಾಸಕರ ಮುತುವರ್ಜಿಯಿಂದ ಸರ್ಕಾರದ ವತಿಯಿಂದ ರೂ. ೧೫ ಲಕ್ಷ ಪರಿಹಾರ ನೀಡಲಾಗಿದೆ. ಆದರೆ ಕೊಡಗಿನ ಶಾಸಕರು ಪರಿಹಾರ ಮೊತ್ತ ಹೆಚ್ಚಿಸಲು ಶ್ರಮ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ೨೧ ರಂದು ಜಿಲ್ಲೆಯ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ರೈತ ಭವನ ಎದುರು ಹಮ್ಮಿಕೊಂಡಿರುವ ಪ್ರತಿಭಟನೆಗೆ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಭಾಗವಹಿಸುವಂತೆ ಸಂಘಟನೆಯ ವತಿಯಿಂದ ಅವರಿಗೆ ಪತ್ರವನ್ನು ಕಳುಹಿಸಲಾಗಿತ್ತು. ಆದರೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಚೆ ಮುಖಾಂತರ ಕಳುಹಿಸಿದ್ದ ಪತ್ರವನ್ನು ಸ್ವೀಕರಿಸದೇ ಹಿಂತಿರುಗಿಸಿ ಕಳುಹಿಸಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು. ಸಂಘಟನೆಗಳಿಗೆ ಮಾಡಿರುವ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕೋಶಾಧಿಕಾರಿ ಇಟ್ಟೀರ ಸಬಿತ ಬೀಮಯ್ಯ, ಸಿದ್ದಾಪುರ ಶಾಖೆಯ ಕೋಶಾಧಿಕಾರಿ ಎಂ.ವಿ ಸಜೀವನ್, ಹಳಗದ್ದೆ ಮಾದಪ್ಪ, ಸಂಚಾಲಕ ಚೇನಂಡ ಪೂಣಚ್ಚ, ಕಾರ್ಮಿಕ ಮುಖಂಡ ಹೆಚ್.ಬಿ ರಮೇಶ್ ಇನ್ನಿತರರು ಹಾಜರಿದ್ದರು.