ಸೋಮವಾರಪೇಟೆ, ನ. ೧೪: ಮಕ್ಕಳ ದಿನಾಚರಣೆಯಂದು ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿದ ಶಿಕ್ಷಣ ಇಲಾಖೆಯ ಕ್ರಮದ ಬಗ್ಗೆ ಹಲವಷ್ಟು ಮುಖ್ಯ ಶಿಕ್ಷಕರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ನಡೆಸಬೇಕು. ಆದರೆ ಖಜಾನೆ ಇಲಾಖೆಯವರು ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಮಡಿಕೇರಿಯ ಜಿ.ಪಂ. ಸಭಾಂಗಣದಲ್ಲಿ ಕಾರ್ಯಾಗಾರ ಏರ್ಪಡಿಸುವ ಮೂಲಕ ಮುಖ್ಯ ಶಿಕ್ಷಕರು ಕಾರ್ಯ ಕ್ರಮದಿಂದ ಹೊರಗುಳಿಯು ವಂತಾಯಿತು.
ಹಲವು ಶಾಲೆಗಳಲ್ಲಿ ಮುಖ್ಯ ಶಿಕ್ಷಕರೂ ಸಹ ಹಲವು ಕಾರ್ಯಕ್ರಮಗಳ ಕುರಿತು ತಯಾರಿ ನಡೆಸಿದ್ದರು. ಆದರೆ ಭಾನುವಾರ ದಂದು ರಾತ್ರಿ ಖಜಾನಾಧಿಕಾರಿಗಳು ಮತ್ತು ಖಜಾನೆ ೨ರಲ್ಲಿ ಪಬ್ಲಿಕ್ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಸಿಸ್ಟಮ್ ಕುರಿತಾದ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಇದರಿಂದಾಗಿ ಹಲವು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಸಮರ್ಪಕವಾಗಿ ನಡೆಸಲು ಸಾಧ್ಯವಾಗಲಿಲ್ಲ ಎಂದು ಹಲವು ಮುಖ್ಯ ಶಿಕ್ಷಕರು ಪತ್ರಿಕೆಯೊಂದಿಗೆ ಅಸಮಾಧಾನ ಹೊರಹಾಕಿದ್ದಾರೆ.