ಸೋಮವಾರಪೇಟೆ, ನ. ೬: ಇಂದು ಬೆಳ್ಳಂಬೆಳಗ್ಗೆ ೪ ಗಂಟೆಯ ಜಾವದಲ್ಲಿ ಪಟ್ಟಣದ ಮಾರ್ಕೆಟ್ ಏರಿಯಾದಲ್ಲಿ ಆರ್ಭಟ ಶುರುಮಾಡಿದ ಜೆಸಿಬಿ ಹಾಗೂ ಹಿಟಾಚಿ.., ಪಟ್ಟಣ ಪಂಚಾಯಿತಿಯ ಅಧಿಕಾರಿಗಳೊಂದಿಗೆ ೫೦ಕ್ಕೂ ಅಧಿಕ ಪೊಲೀಸರು.., ಸೋಮವಾರಪೇಟೆ, ಕುಶಾಲನಗರ ಹಾಗೂ ಶನಿವಾರಸಂತೆಯ ಪೊಲೀಸ್ ಇನ್ಸ್ಪೆಕ್ಟರ್ಗಳ ಉಪಸ್ಥಿತಿ.., ಸ್ಥಳೀಯರು ಎಲ್ಲಿ ಏನಾಗುತ್ತಿದೆ ಎಂದು ಕಣ್ಣುಜ್ಜಿಕೊಂಡು ನೋಡುತ್ತಿದ್ದಂತೆ ಮಾರ್ಕೆಟ್ ಏರಿಯಾದಲ್ಲಿದ್ದ ೧೫ ಅಂಗಡಿಗಳು ನೆಲಸಮ..!
ಕಳೆದ ಅನೇಕ ವರ್ಷಗಳಿಂದ ಪಟ್ಟಣ ಪಂಚಾಯಿತಿಯ ಎದುರಿಗಿದ್ದ ಪ್ರಸ್ತಾಪವನ್ನು ಕೊನೆಗೂ ಕಾರ್ಯಗತ ಗೊಳಿಸುವಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಯಶಸ್ಸು ಕಂಡಿದ್ದು, ಹಲವು ಅಡೆತಡೆಗಳ ನಡುವೆಯೂ ಮಾರ್ಕೆಟ್ ಏರಿಯಾದಲ್ಲಿರುವ ಅನಧಿಕೃತ (ಪ.ಪಂ. ದಾಖಲೆಗಳ ಪ್ರಕಾರ) ಅಂಗಡಿಗಳನ್ನು ತೆರವು ಮಾಡಿತು.
ಇಂದು ಬೆಳಿಗ್ಗೆ ೪ ಗಂಟೆಯಿAದಲೇ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು, ಮಾರ್ಕೆಟ್ ಏರಿಯಾದಲ್ಲಿರುವ ಸುಮಾರು ೩೯ ಅಂಗಡಿಗಳ ಪೈಕಿ ೧೫ ಅಂಗಡಿಗಳನ್ನು ಕೆಡವಲು ಕ್ರಮಕೈಗೊಂಡರು. ಈ ಸಂದರ್ಭ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ನರಗುಂದ, ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಶನಿವಾರಸಂತೆಯ ಪರಶಿವಮೂರ್ತಿ, ಕುಶಾಲನಗರದ ಬಿ.ಜಿ. ಮಹೇಶ್ ಸೇರಿದಂತೆ ೫೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.
ನಸುಕಿನ ಜಾವದಿಂದ ನಡೆದ ಕಾರ್ಯಾಚರಣೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಮುಖ್ಯಾಧಿಕಾರಿ ನಾಚಪ್ಪ, ವಾರ್ಡ್ ಸದಸ್ಯ ಬಿ.ಆರ್. ಮಹೇಶ್, ಪಂಚಾಯಿತಿ ಅಧಿಕಾರಿಗಳಾದ ಜಾಸಿಂಖಾನ್, ರಫೀಕ್, ಜೀವನ್ಕುಮಾರ್ ಸೇರಿದಂತೆ ಪೌರಕಾರ್ಮಿಕರು ಉಪಸ್ಥಿತರಿದ್ದರು.
ಮಾರ್ಕೆಟ್ ಏರಿಯಾದಲ್ಲಿ ಕಳೆದ ಅನೇಕ ದಶಕಗಳಿಂದ ನೆಲಬಾಡಿಗೆ ಆಧಾರದಲ್ಲಿ ಅಂಗಡಿ ಮುಂಗಟ್ಟು ಗಳನ್ನು ಕಟ್ಟಿಕೊಂಡು ವ್ಯಾಪಾರ ವಹಿವಾಟು ನಡೆಸಲಾಗುತ್ತಿತ್ತು. ಕೆಲವರು ಮನೆಗಳನ್ನೂ ನಿರ್ಮಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಮಾರ್ಕೆಟ್ ಏರಿಯಾದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ಪಂಚಾಯಿತಿ ಆಡಳಿತ ಮನಸ್ಸು ಮಾಡಿತ್ತು. ಇದರ ಭಾಗವಾಗಿ ಅಂಗಡಿ ಮುಂಗಟ್ಟುಗಳ ಮಾಲೀಕರಿಂದ ನೆಲಬಾಡಿಗೆ ಕಟ್ಟಿಸಿಕೊಳ್ಳುವುದನ್ನು ಸ್ಥಗಿತಗೊಳಿಸಿತ್ತು.
ಕಳೆದ ಮೂರು ತಿಂಗಳ ಹಿಂದೆ ಮಾರ್ಕೆಟ್ ಏರಿಯಾದ ಐದು ಮಂದಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ತೆರವುಗೊಳಿಸುವ ಕ್ರಮವನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಪಟ್ಟಣ ಪಂಚಾಯಿತಿ ಯಿಂದಲೂ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟಿತ್ತು.
(ಮೊದಲ ಪುಟದಿಂದ)
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಸೆಪ್ಟೆಂಬರ್ ೨೨ ರಂದು ಪಟ್ಟಣ ಪಂಚಾಯಿತಿ ಪರವಾಗಿ ತೀರ್ಪು ನೀಡಿದ್ದು, ಇದರಲ್ಲಿ ಮುಂದಿನ ೧೫ ದಿನಗಳ ಒಳಗೆ ಆಕ್ಷೇಪಣೆಗಳಿದ್ದರೆ ಪಂಚಾಯಿತಿಗೆ ಸಲ್ಲಿಸುವಂತೆ ಹಾಗೂ ಮುಂದಿನ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಾಧಿಕಾರಿಗಳಿಗೆ ನೀಡಿ ತೀರ್ಪು ಪ್ರಕಟಿಸಿತ್ತು. ಆದರೆ ೧೫ ದಿನಗಳಾದರೂ ಯಾರೊಬ್ಬರೂ ಸಹ ಆಕ್ಷೇಪಣೆ ಸಲ್ಲಿಸಿಲ್ಲ. ಈ ಹಿನ್ನೆಲೆ ತಾ. ೫ರಂದು ಆಡಳಿತ ಮಂಡಳಿಯ ತುರ್ತು ಸಭೆ ನಡೆಸಿ, ಇಂದು ಅಂಗಡಿ ಮುಂಗಟ್ಟುಗಳ ತೆರವಿಗೆ ಕ್ರಮ ವಹಿಸಲಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಮಾರ್ಕೆಟ್ ಏರಿಯಾದಲ್ಲಿ ಇನ್ನೂ ೨೪ ಅಂಗಡಿಗಳ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ೧೫ ಮಂದಿಯ ತಂಡ ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ನ್ಯಾಯಾಲಯದ ತಡೆಯಾಜ್ಞೆಯ ಅವಧಿ ಮುಗಿದ ನಂತರ ನೋಟೀಸ್ ನೀಡಿ ಅವುಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತದೆ ಎಂದು ನಾಚಪ್ಪ ಅವರು ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಹೈಟೆಕ್ ಮಾರುಕಟ್ಟೆ ಸಮೀಪವೇ ಇರುವ ಮಾರ್ಕೆಟ್ ಏರಿಯಾದ ತೆರವಿಗೆ ಕೊನೆಗೂ ಕಾಲಕೂಡಿ ಬಂದAತಾಗಿದೆ. ಕಳೆದ ಏಳೆಂಟು ವರ್ಷಗಳ ಹಿಂದೆಯೇ ಕೆಲವೊಂದು ವರ್ಕ್ಶಾಪ್ಗಳನ್ನು ಇಲ್ಲಿಂದ ತೆರವುಗೊಳಿಸಲಾಗಿತ್ತು. ಆರ್ಎಂಸಿ ಮಾರ್ಕೆಟ್ ಮುಂಭಾಗ ಹಾಗೂ ನಗರೂರು ರಸ್ತೆಯ ಬದಿಯಲ್ಲಿ ಈಗಾಗಲೇ ವರ್ಕ್ಶಾಪ್ಗಳು ತಲೆ ಎತ್ತಿವೆ. ಇದೀಗ ಉಳಿದುಕೊಂಡಿರುವ ವರ್ಕ್ಶಾಪ್ಗಳನ್ನೂ ತೆರವುಗೊಳಿಸಲು ಪಂಚಾಯಿತಿ ಮುಂದಾಗಿದ್ದು, ಈ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಯಾವ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತವೆ ಎಂಬುದನ್ನು ಕಾದುನೋಡಬೇಕಿದೆ.