ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ
ಲಾಹೋರ್, ನ. ೩: ಪಾಕಿಸ್ತಾನದ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ತೆಹ್ರೀಕ್ ಇ ಪಾಕಿಸ್ತಾನ ಪಕ್ಷದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಆ ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಕೂಡ ಗಾಯಗೊಂಡಿದ್ದಾರೆ. ಅವರಲ್ಲದೆ, ಇನ್ನೂ ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ವಜೀರಾಬಾದ್‌ನ ಅಲ್ಲಾ ಹೋ ಚೌಕ್ ಬಳಿ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರ ಕಂಟೈನರ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಬಲಗಾಲಿಗೆ ಗುಂಡು ತಗುಲಿದ್ದು, ಅವರನ್ನು ಕೂಡ ತೀವ್ರ ಭದ್ರತೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪೊಲೀಸರು ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಸಹ ಬಂಧಿಸಿದ್ದು, ಅಜ್ಞಾತ ಸ್ಥಳದಲ್ಲಿ ಆತನನ್ನು ಭದ್ರತಾ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ
ನವದೆಹಲಿ, ನ. ೩: ಗುಜರಾತ್‌ನಲ್ಲಿ ಡಿಸೆಂಬರ್ ೧ ಮತ್ತು ೫ ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ ೮ ರಂದು ಗುಜರಾತ್ ವಿಧಾನಸಭೆ ಹಾಗೂ ಹಿಮಾಚಲಪ್ರದೇಶ ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಕುಮಾರ್ ಪ್ರಕಟಿಸಿದ್ದಾರೆ. ಗುಜರಾತ್‌ನ ಒಟ್ಟು ೧೮೨ ವಿಧಾನಸಭಾ ಸ್ಥಾನಗಳ ಪೈಕಿ ೮೯ ಸ್ಥಾನಗಳಿಗೆ ಡಿಸೆಂಬರ್ ೧ ರಂದು ಮತ್ತು ಉಳಿದ ೯೩ ಸ್ಥಾನಗಳಿಗೆ ಡಿಸೆಂಬರ್ ೫ ರಂದು ಮತದಾನ ನಡೆಯಲಿದೆ. ಗುಜರಾತ್ ೧೮೨ ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ೯೯ ಸ್ಥಾನಗಳನ್ನು ಗೆದ್ದು ಸತತ ಆರನೇ ಬಾರಿ ಗೆಲುವನ್ನು ಸಾಧಿಸಿತ್ತು. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ೭೭ ಸ್ಥಾನಗಳನ್ನು ಗಳಿಸಿತ್ತು.
ಶಾಸಕ ರೇಣುಕಾಚಾರ್ಯ ಸಹೋದರ ಪುತ್ರನ ಶವ ಪತ್ತೆ
ದಾವಣಗೆರೆ, ನ. ೩: ಐದು ದಿನಗಳಿಂದ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಶವ ಗುರುವಾರ ಪತ್ತೆಯಾಗಿದೆ. ದಾವಣಗೆರೆಯ ಕಡದಕಟ್ಟೆ ಗ್ರಾಮದ ಬಳಿಯ ತುಂಗಾ ಕಾಲುವೆಯಲ್ಲಿ ಶವ ಪತ್ತೆಯಾಗಿದ್ದು, ಕಾರನ್ನು ಮೇಲೆತ್ತಿ ಪರಿಶೀಲಿಸಿದಾಗ ಕಾರಿನೊಳಗೆ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಅವರದ್ದೇ ಎಂದು ಹೇಳಲಾಗಿದೆ. ಮೊದಲಿಗೆ ಕಡದಕಟ್ಟೆಯ ತುಂಗಾ ಕಾಲುವೆ ಬಳಿ ಕಾರು ಸಂಚರಿಸಿರುವ ಕುರುಹುಗಳು ಪತ್ತೆಯಾಗಿದ್ದವು. ಇದನ್ನು ಪೊಲೀಸರು ಪರಿಶೀಲನೆ ಮಾಡಿದ ಬಳಿಕ ಕಾರು ಸಹ ತುಂಗ ಕಾಲುವೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಕಾರಿನಲ್ಲಿ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಮೃತದೇಹ ಸಿಕ್ಕಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆಯಲ್ಲಿ ಕಾರು ಪತ್ತೆಯಾಗಿದ್ದು, ಕ್ರೇನ್ ಬಳಸಿ ಕಾರನ್ನು ಮೇಲೆತ್ತಲಾಗಿದೆ. ಬಳಿಕ ಕಾರಿನ ಹಿಂಬದಿ ಸೀಟ್‌ನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ. ಚಂದ್ರು ತೆಗೆದುಕೊಂಡು ಹೋಗಿದ್ದ ಕ್ರೇಟಾ ಕಾರು ಭಾನುವಾರ ಮಧ್ಯರಾತ್ರಿ ಶಿವಮೊಗ್ಗದಿಂದ ಸುರಹೊನ್ನೆ ಬಳಿ ಪಾಸ್ ಆಗಿತ್ತು. ಬಳಿಕ ಚಂದ್ರಶೇಖರ್ ತೆಗೆದುಕೊಂಡು ಹೋಗಿದ್ದ ಕಾರು ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆ ಬಳಿ ಸಂಚರಿಸಿರುವ ಕುರುಹು ಪತ್ತೆಯಾಗಿತ್ತು. ಇದೀಗ ಕಾರು ಕಾಲುವೆಯಲ್ಲಿ ಬಿದ್ದಿದೆ. ಕಾರಿನಲ್ಲಿ ಚಂದ್ರಶೇಖರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವೈದ್ಯರ ನಿರ್ಲಕ್ಷö್ಯಕ್ಕೆ ಮೂರು ಜೀವಗಳು ಬಲಿ
ತುಮಕೂರು, ನ. ೩: ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷö್ಯಕ್ಕೆ ಮೂವರು ಜೀವ ಕಳೆದುಕೊಂಡಿದ್ದಾರೆ. ಅವಳಿ ಮಕ್ಕಳು ಹಾಗೂ ತಾಯಿ ಮೃತ ದುರ್ದೈವಿಗಳಾಗಿದ್ದು, ಜಿಲ್ಲೆಯ ಭಾರತಿನಗರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ವಾಸವಿದ್ದ ಅನಾಥ ಬಾಣಂತಿ ಮಹಿಳೆಯನ್ನು ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಆಟೋ ಮೂಲಕ ಕಳಿಸಿದ್ದರು. ಮಹಿಳೆಯೊಂದಿಗೆ ಪಕ್ಕದ ಮನೆಯ ವೃದ್ಧೆಯೊಬ್ಬರು ತೆರಳಿದ್ದರು ಎಂದು ತಿಳಿದುಬಂದಿದೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಕಾರ್ಡ್ ಇಲ್ಲ ಎಂಬ ಕಾರಣ ನೀಡಿ, ಆಸ್ಪತ್ರೆಯಿಂದ ವಾಪಸ್ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈದ್ಯೆಯ ಬಳಿ ಅಂಗಲಾಚಿ ಕೇಳಿದ್ರೂ ಚಿಕಿತ್ಸೆ ಕೊಡದೆ ವೈದ್ಯೆ ನಿರ್ಲಕ್ಷö್ಯ ಮಾಡಿದ್ದರಿಂದ ಮಕ್ಕಳು ಹಾಗೂ ತಾಯಿ ಮೂವರೂ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲದೇ ತಾವು ಚಿಕಿತ್ಸೆ ಕೊಡುವ ಬದಲು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುತ್ತೇವೆ ಅಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಮಹಿಳೆಗೆ ಹೇಳಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ತಮ್ಮ ಬಳಿ ಹಣ ಇಲ್ಲದ ಕಾರಣ ಮಹಿಳೆ ಮನೆಗೆ ವಾಪಸ್ ಬಂದಿದ್ದರು. ಈ ಘಟನೆ ಬಳಿಕ ಬೆಳಗ್ಗಿನ ಜಾವ ಮಹಿಳೆ ಅನಾರೋಗ್ಯದ ನಡುವೆ ಒಂದು ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ. ಬಳಿಕ, ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ೩ ಜೀವಗಳು ಬಲಿಯಾಗಿವೆ.
ಲಷ್ಕರ್-ಎ-ತೊಯ್ಬಾದ ಉಗ್ರರ ಹತ್ಯೆ
ಶ್ರೀನಗರ, ನ. ೩: ಭದ್ರತಾ ಪಡೆ ಮತ್ತು ಜಮ್ಮು - ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವಂತಿಪೋರಾದಲ್ಲಿ ಮೂವರು ಲಷ್ಕರ್-ಎ-ತೊಯ್ಬಾದ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಸಚಿವಾಲಯದ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಖಂಡಿಪೋರಾ, ಅವಂತಿಪೋರಾದ ಸಾಮಾನ್ಯ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ವಾಹನದಲ್ಲಿ ಓಡಾಡುವ ಖಚಿತ ಮಾಹಿತಿಯನ್ನು ಪಡೆದಿದ್ದರು. ಅದರಂತೆ ಸೇನೆ ಮತ್ತು ಪೊಲೀಸರು ಜಂಟಿ ಸಂಚಾರಿ ವಾಹನ ಚೆಕ್‌ಪೋಸ್ಟ್ ಸ್ಥಾಪಿಸಿದ್ದಾರೆ. ಚೆಕ್‌ಪೋಸ್ಟ್ ಬಳಿ ಅನುಮಾನಾಸ್ಪದ ವಾಹನ ಬರುತ್ತಿರುವುದನ್ನು ಗಮನಿಸಲಾಗಿದೆ. ವಾಹನವನ್ನು ತಡೆದ ಬಳಿಕ, ಉಗ್ರರು ಮನಬಂದAತೆ ಗುಂಡಿನ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿದಾಳಿ ನಡೆಸಿದ ತಂಡವು, ಓರ್ವ ಉಗ್ರನನ್ನು ಎನ್‌ಕೌಂಟರ್ ಮಾಡಿದೆ. ಆದರೆ, ಇತರ ಇಬ್ಬರು ಪಕ್ಕದ ಹೊಲಗಳಿಗೆ ಓಡಿಹೋಗಿದ್ದಾರೆ. ಓಡಿಹೋದ ಉಗ್ರರನ್ನು ಹಿಡಿಯಲು ಭದ್ರತಾ ಪಡೆಗಳು ಶೋಧಕಾರ್ಯಾಚರಣೆಯನ್ನು ಮುಂದುವರಿಸಿದವು ಮತ್ತು ಆ ಪ್ರದೇಶವನ್ನು ಸುತ್ತುವರಿಯಲಾಯಿತು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರೂ ಉಗ್ರರನ್ನು ಎನ್‌ಕೌಂಟರ್ ಮಾಡಿದ್ದಾರೆ. ಎನ್‌ಕೌಂಟರ್ ಸ್ಥಳದಿಂದ ಎರಡು ಎಕೆ ಸರಣಿಯ ರೈಫಲ್‌ಗಳು, ಒಂದು ಪಿಸ್ತೂಲ್ ಮತ್ತು ಶಸ್ತಾçಸ್ತçಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಮೂವರು ಭಯೋತ್ಪಾದಕರು ಎಲ್‌ಇಟಿಗೆ ಸೇರಿದವರಾಗಿದ್ದು, ಓರ್ವನನ್ನು ಪಾಕಿಸ್ತಾನದ ನಿವಾಸಿ ಅಲಿ ಅಲಿಯಾಸ್ ಮುಬಾಸಿರ್ ಮತ್ತು ಪುಲ್ವಾಮಾ ನಿವಾಸಿಗಳಾದ ಮುಖ್ತಾರ್ ಅಹ್ಮದ್ ಭಟ್ ಮತ್ತು ಸಕ್ಲೇನ್ ಮುಷ್ತಾಕ್ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಗಳಿಗೆ ೧೦ ನಿಮಿಷ ಧ್ಯಾನ ಕಡ್ಡಾಯ
ಬೆಂಗಳೂರು, ನ. ೩: ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ವೃದ್ಧಿ, ಒತ್ತಡ ಮುಕ್ತವಾಗಿಸಲು ಶಿಕ್ಷಣ ಇಲಾಖೆ ಧ್ಯಾನದ ಮೊರೆ ಹೋಗಿದೆ. ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ ೧೦ ನಿಮಿಷ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬAಧ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಧ್ಯಾನ ಮಾಡುವ ಸಂಬAಧ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ. ನಿತ್ಯ ಶಾಲಾ-ಕಾಲೇಜುಗಳಲ್ಲಿ ೧೦ ನಿಮಿಷ ವಿದ್ಯಾರ್ಥಿಗಳು ಕಡ್ಡಾಯವಾಗಿ ಧ್ಯಾನ ಮಾಡಬೇಕು. ಇದಕ್ಕಾಗಿ ಸಮಯ ನಿಗದಿ ಮಾಡುವಂತೆ ಸೂಚನೆ ನೀಡಿದ್ದಾರೆ.