ಕುಶಾಲನಗರ, ಅ. ೩೦: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರನ್ನು ಯಾವುದೇ ಜನಾಂಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಜಿಲ್ಲೆಯ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರಕ್ಕೆ ಆಗಮಿಸಿದ ಕೆಂಪೇಗೌಡರ ರಥಯಾತ್ರೆಯನ್ನು ಸ್ವಾಗತಿಸಿದ ಮಡಿಕೇರಿ ಕ್ಷೇತ್ರ ಶಾಸಕ ಎಂ ಪಿ ಅಪ್ಪಚು ರಂಜನ್, ವೀರಾಜಪೇಟೆ ಶಾಸಕರಾದ ಕೆ ಜಿ ಬೋಪಯ್ಯ ಅವರುಗಳು ಮಾತನಾಡಿ, ಮೂಲ ಬೆಂಗಳೂರು ನಿರ್ಮಾಣಕ್ಕೆ ಕಾರಣಕರ್ತರಾದ ಕೆಂಪೇಗೌಡರ ೧೦೮ ಅಡಿಗಳ ಕಂಚಿನ ಪ್ರತಿಮೆಯನ್ನು ನವೆಂಬರ್ ೧೧ರಂದು ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಗುತ್ತಿದೆ. ನಾಡಪ್ರಭುವಿಗೆ ರಾಜ್ಯದ ಎಲ್ಲಾ ಜನರು ಗೌರವ ಸಲ್ಲಿಸುವಂತಾಗಬೇಕು ಎಂದರು.

ಕುಶಾಲನಗರ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಯ ವರ್ಧನ್ ಮತ್ತಿತರರು ಕುಶಾಲನಗರ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಪವಿತ್ರ ಮಣ್ಣನ್ನು ರಥಕ್ಕೆ ಹಸ್ತಾಂತರಿಸಿದರು.

ರಥಯಾತ್ರೆ ಕುಶಾಲನಗರಕ್ಕೆ ಆಗಮಿಸುತ್ತಿದ್ದ ವೇಳೆ ಮಹಿಳೆಯರು ಪೂರ್ಣ ಕುಂಭದೊAದಿಗೆ ಸ್ವಾಗತಿಸಿದರು.

ಅಸಮಾಧಾನ

ಕೆಂಪೇಗೌಡರ ರಥಯಾತ್ರೆ ಸಂದರ್ಭ ರಥಕ್ಕೆ ಸರಿಯಾದ ಯಾವುದೇ ರೀತಿಯ ಅಲಂಕಾರ ಮಾಡದೆ ಇರುವ ಬಗ್ಗೆ ತಾಲೂಕು ಒಕ್ಕಲಿಗರ ಸಂಘದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.

ರಥಯಾತ್ರೆ ಕೇವಲ ಸರಕಾರಿ ಕಾರ್ಯಕ್ರಮ ಆಗಬಾರದು. ಅದ್ದೂರಿಯಾಗಿ ರಥ ಯಾತ್ರೆ ಸಾಗಬೇಕಾಗಿದೆ ಎಂದು ತಾಲೂಕು ಅಧ್ಯಕ್ಷ ಎಂ.ಕೆ. ದಿನೇಶ್ ಮತ್ತು ಸಂಘದ ಪ್ರಮುಖರು ಆಗ್ರಹಿಸಿದರು. ಜಿಲ್ಲೆಗೆ ಆಗಮಿಸಿದ ರಥದಲ್ಲಿ ಕೆಂಪೇಗೌಡರ ಭಾವಚಿತ್ರ ಇಲ್ಲದಿರುವುದನ್ನು ಗಮನಿಸಿದ ಶಾಸಕ ರಂಜನ್ ಅವರು ಕುಶಾಲನಗರದಲ್ಲಿ ರಥಕ್ಕೆ ಅಳವಡಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

ಈ ಸಂದರ್ಭ ಕುಶಾಲನಗರದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಇದ್ದರು.