ಮಡಿಕೇರಿ, ಅ. ೨೪: ಜಿಲ್ಲೆಯಲ್ಲಿ ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ವಾಸವಿರುವ ೪ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಆದಷ್ಟು ಶೀಘ್ರ ನಿವೇಶನಗಳನ್ನು ನೀಡಬೇಕು. ಇಲ್ಲವಾದರೆ ಜಿಲ್ಲೆ ಮತ್ತು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾ ಗುತ್ತದೆ ಎಂದು ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಕಾರ್ಯದರ್ಶಿ ಶೈಲೇಂದ್ರ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಜಿಲ್ಲೆಯ ಮೂರು ತಾಲೂಕುಗಳಲ್ಲಿರುವ ನಿವೇಶನ ರಹಿತ ಲೈನ್‌ಮನೆಯ ಕಾರ್ಮಿಕರನ್ನು ಗುರುತಿಸಿದೆ. ಹೀಗಿದ್ದೂ ನಮ್ಮ ಅಂದಾಜಿನAತೆ ಜಿಲ್ಲಾ ವ್ಯಾಪ್ತಿಯಲ್ಲಿ ೧೦ ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಲೈನ್‌ಮನೆಗಳಲ್ಲಿ ಸಂಕಷ್ಟದ ಬದುಕನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ನಿವೇಶನಕ್ಕೆ ಆಗ್ರಹಿಸಿ ಮಾಯಮುಡಿಯಲ್ಲಿ ೩೧ ಕಾರ್ಮಿಕ ಕುಟುಂಬಗಳು ನಡೆಸುತ್ತಿರುವ ಹೋರಾಟಕ್ಕೆ ೮೪ ದಿನಗಳು ಕಳೆದಿದೆ. ಆದರೂ ಕೂಡ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಸ್ಪಂದಿಸಿಲ್ಲ. ಲೈನ್ ಮನೆಗಳಲ್ಲಿರುವ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರ ಸಂಕಷ್ಟಗಳಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರಿಗೆ ನೀಡಲು ಜಿಲ್ಲಾಡಳಿತ ೩೫೯ ಎಕರೆ ಜಾಗವನ್ನು ಗುರುತಿಸಿದೆ. ಆದರೆ, ಇದನ್ನು ವಿತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಕಳೆದ ೨೦೧೬-೧೭ ನೇ ಸಾಲಿನಲ್ಲಿ ೧೧೬ ಕುಟುಂಬಗಳಿಗೆ ಕುಂದ ಗ್ರಾಮದಲ್ಲಿ ನಿವೇಶನಗಳನ್ನು ವಿತರಿಸಿದ್ದನ್ನು ಹೊರತುಪಡಿಸಿದರೆ, ಉಳಿದ ಸಹಸ್ರಾರು ಮಂದಿ ಕಾರ್ಮಿಕರಿಗೆ ನೆಲೆ ಒದಗಿಸಲು ಅಗತ್ಯ ಕ್ರಮಕೈಗೊಂಡಿಲ್ಲ ವೆಂದು ಆರೋಪಿಸಿದರು.

ಲೈನ್ ಮನೆಯ ಕಾರ್ಮಿಕರ ‘ನಿವೇಶನ’ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ. ಬಡ ಕೂಲಿ ಕಾರ್ಮಿಕರಿಗೆ ನಿವೇಶನಗಳನ್ನು ಒದಗಿಸಲು ಜಾತಿ, ವಾಸದ ದೃಢೀಕರಣ, ಆದಾಯ ದೃಢೀಕರಣ ಸೇರಿದಂತೆ ಹತ್ತು ಹಲವು ದಾಖಲೆಗಳನ್ನು ಕೇಳಲಾಗುತ್ತಿದೆ. ಒಂದು ಹೊತ್ತಿನ ಕೂಳಿಗೆ ಪರದಾಡುತ್ತಾ ಕೂಲಿ ಕೆÀಲಸದಲ್ಲಿ ತೊಡಗಿರುವ ಕಾರ್ಮಿಕರು ಈ ಎಲ್ಲಾ ದಾಖಲೆಗಳನ್ನು ಒದಗಿಸುವುದಾದರು ಹೇಗೆ ಎಂದು ಅವರು ಪ್ರಶ್ನಿಸಿದರು.

ಸ್ಥಳ ಪರಿಶೀಲನೆ ಮತ್ತು ಹೇಳಿಕೆ ಆಧಾರದಲ್ಲಿ ಬುಡಕಟ್ಟು ಸಮುದಾಯ ದವರು ಎನ್ನುವುದನ್ನು ಖಚಿತಪಡಿಸಿ ಕೊಂಡು, ಅಂತಹ ಬಡ ಕಾರ್ಮಿಕ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲೆಯ ವಿವಿಧೆಡೆ ಅತಿಕ್ರಮಣಕ್ಕೆ ಒಳಗಾದ ಸರ್ಕಾರಿ ಜಾಗವನ್ನು ತೆರವುಗೊಳಿಸಿ ನಿವೇಶನಕ್ಕೆ ಕಾಯ್ದಿರಿಸಬೇಕು. ಭೂಮಿ ಲಭ್ಯವಿಲ್ಲದ ಪ್ರದೇಶದಲ್ಲಿ ಖಾಸಗಿಯವರಿಂದ ಸರ್ಕಾರ ಭೂಮಿ ಖರೀದಿಸಿ ನಿವೇಶನ ಒದಗಿಸಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಸಂಚಾಲಕ ಬೆಳ್ಳಿ, ಸಂಚಾಲಕಿ ಮಲ್ಲಿಗೆ, ಬುಡಕಟ್ಟು ಕಾರ್ಮಿಕ ಸಂಘÀದ ಅಧ್ಯಕ್ಷ ವೈ.ಬಿ. ಗಪ್ಪು ಉಪಸ್ಥಿತರಿದ್ದರು.