ಮಡಿಕೇರಿ, ಅ. ೨೪: ಸಾರ್ವಜನಿಕರಿಗೆ ಪಲ್ಸ್ ಪೋಲಿಯೋ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ನಗರದ ಹಲವು ಕಡೆಗಳಲ್ಲಿ ಬ್ಯಾನರ್‌ಗಳನ್ನು ಆಳವಡಿಸಲಾಯಿತು. ನಗರದ ಸುದರ್ಶನ ವೃತ್ತ, ನಗರ ಸಭೆಯ ಎದುರುಗಡೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆವರಣ, ಮಹದೇವಪೇಟೆಯ ಮಾರ್ಕೆಟ್ ಆವರಣದ ಬಳಿ ಜನ ಜಾಗೃತಿ ಮೂಡಿಸುವ ಬ್ಯಾನರ್‌ಗಳನ್ನು ಅಳವಡಿಸಲಾಯಿತು.

ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಈ ಸಂದರ್ಭ ಹಾಜರಿದ್ದು, ರೋಟರಿಯ ಮಹತ್ವ ಯೋಜನೆಯಾದ ‘ಪಲ್ಸ್ ಪೋಲಿಯೋ' ವಿಶ್ವದಲ್ಲಿಯೇ ಪ್ರಖ್ಯಾತವಾಗಿದೆ. ಈ ವಿಚಾರದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಜನಜಾಗೃತಿ ಮೂಡಿಸಲು ಹಮ್ಮಿ ಕೊಂಡಿರುವ ಈ ಕಾರ್ಯಕ್ರಮ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು. ರೋಟರಿ ಸಂಸ್ಥೆಯ ಓರಿಯಂಟೇಷನ್ ವೈಸ್ ಛೇರ್ಮನ್ ಬಿ.ಜಿ. ಅನಂತಶಯನ ಮಾತನಾಡಿ ಈಗಾಗಲೇ ಭಾರತ ಪೋಲಿಯೋ ಮುಕ್ತವಾಗಿದ್ದರೂ ಕೂಡ ಈ ಬಗ್ಗೆ ಜನಜಾಗೃತಿ ಮೂಡಿಸಲು ಇಂತಹ ಯೋಜನೆಗಳು ಮುಖ್ಯ. ಈ ಉದ್ದೇಶದಿಂದ ಇಂದು ಮಡಿಕೇರಿ ರೋಟರಿ ವುಡ್ಸ್ ಕೈಗೆತ್ತಿಕೊಂಡಿರುವ ಈ ಯೋಜನೆ ಶ್ಲಾಘನೀಯ ಎಂದು ಹೇಳಿದರು.

ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಮಾತನಾಡಿ, ರೋಟರಿಯಲ್ಲಿ ಆರೋಗ್ಯಸಿರಿಯಂತಹ ಹಲವು ಯೋಜನೆಗಳಿದ್ದು, ಪೋಲಿಯೋ ಮುಕ್ತ ಜನಜಾಗೃತಿಯ ಮೂಲಕ, ಜನಸಾಮಾನ್ಯರ ಆರೋಗ್ಯದ ಬಗ್ಗೆ ವಿಶೇಷ ಅರಿವು ಮೂಡಿಸಲು ಈ ವರ್ಷದಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಮಡಿಕೇರಿ ರೋಟರಿ ವುಡ್ಸ್ ಹಮ್ಮಿಕೊಂಡಿದೆ ಎಂದರು.

ಈ ಸಂದರ್ಭ ವುಡ್ಸ್ ಕಾರ್ಯದರ್ಶಿ ವಸಂತಕುಮಾರ್, ಸದಸ್ಯರಾದ ಡಾ. ಅನುಶ್ರೀ, ಉದಯಕುಮಾರ್, ಕಶ್ಯಪ್, ಬಾಲಸುಬ್ರಮಣ್ಯಮ್, ವೀಣಾಕ್ಷಿ ಹಾಜರಿದ್ದರು.