ಮಡಿಕೇರಿ, ಅ. ೨೪: ಕಾರೊಂದು ಸ್ಕೂಟಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಂಭವಿಸಿದೆ.
ಇಂದು ಮಧ್ಯಾಹ್ನ ನಗರದ ಟರ್ಫ್ ಮೈದಾನದ ಬಳಿಯ ತಿರುವಿನಲ್ಲಿ ಮುತ್ತಪ್ಪ ದೇವಾಲಯದ ಬಳಿಯ ನಿವಾಸಿ ವಿ.ವಿ. ಪ್ರಕಾಶ್ ಎಂಬವರು ಚಾಲಿಸುತ್ತಿದ್ದ ಸ್ಕೂಟಿಗೆ (ಕೆ.ಎ. ೧೨ ಎಸ್. ೩೬೭೪) ಎದುರು ಬದಿಯಿಂದ ಬಂದ, ಮೂಲತಃ ಗಣಪತಿ ಬೀದಿ ನಿವಾಸಿ, ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುವ ಉಮ್ಮರ್ ಎಂಬವರು ಚಾಲಿಸುತ್ತಿದ್ದ ಮಾರುತಿ-೮೦೦ ಕಾರು (ಕೆ.ಎ. ೦೧ ಝಡ್ ೪೬೩೮) ಡಿಕ್ಕಿಯಾಗಿದೆ. ಪ್ರಕಾಶ್ ಎಂಬವರ ತಲೆ ರಸ್ತೆಗೆ ಬಡಿದಿದ್ದು, ತಲೆಯ ಹಿಂಬದಿಗೆ ಗಂಭೀರ ಗಾಯವಾಗಿದೆ. ಅಲ್ಲದೆ, ಕಾಲು ಹಾಗೂ ಬೆನ್ನಿನ ಮೂಳೆಗೂ ಪೆಟ್ಟಾಗಿದೆ. ಘಟನೆ ನಡೆದ ಕೂಡಲೇ ಉಮ್ಮರ್ ಅವರೇ ಗಾಯಾಳುವನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ಬಳಿಕ ತುರ್ತು ನಿಗಾ ಘಟಕಕ್ಕೆ ಸಾಗಿಸಲಾಗಿದೆ.
ಸ್ಥಳಕ್ಕೆ ನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ದೇವರಾಜು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.