ಪೊನ್ನಂಪೇಟೆ, ಅ. ೨೪: ಪೊನ್ನಂಪೇಟೆಯ ಶ್ರೀ ನಾರಾಯಣ ಧರ್ಮ ಪರಿಪಾಲನಾ ಸಂಸ್ಥೆ ವತಿಯಿಂದ, ಪೊನ್ನಂಪೇಟೆ ಎಸ್‌ಎನ್ ಪಿ ಶಾಖೆ, ಎಸ್‌ಎನ್‌ಡಿಪಿ ವನಿತಾ ಸಂಘ, ಶ್ರೀ ಬಸವೇಶ್ವರ ಪುರುಷ ಸ್ವಸಹಾಯ ಸಂಘ, ವನಿತಾ ಸ್ವ ಸಹಾಯ ಸಂಘಗಳ ಸಹಯೋಗದಲ್ಲಿ ೧೬೮ ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಕಾರ್ಯಕ್ರಮ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ನಡೆಯಿತು.

ಗುರುಪೂಜೆ ನಂತರ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿ ಧರ್ಮನಾಥಾನಂದ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿ, ನಾರಾಯಣ ಗುರುಗಳ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದರು.

ರಾಮಕೃಷ್ಣ ಶಾರದಾಶ್ರಮದಿಂದ ಪಟ್ಟಣದ ರಾಜಬೀದಿಯಲ್ಲಿ ರಥದಲ್ಲಿ ಹೊರಟ ಮೆರವಣಿಗೆಯಲ್ಲಿ ಚಂಡೆಯೊAದಿಗೆ, ಸಿಂಗಾರಿ ಮೇಳ, ವೀರಗಾಸೆ, ಮಹಾಬಲಿ ವೇಷಧಾರಿ ಗಮನ ಸೆಳೆದರು. ಮಹಿಳೆಯರು ಕಳಸ ಮತ್ತು ದೀಪದೊಂದಿಗೆ ಹೆಜ್ಜೆ ಹಾಕಿದರು. ಪೊನ್ನಂಪೇಟೆ ಎಸ್‌ಎನ್‌ಡಿಪಿ ಶಾಖೆ ಅಧ್ಯಕ್ಷ ವಿ.ಬಿ. ರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿ ಧರ್ಮನಾಥಾನಂದಾಜಿ ಆಶೀರ್ವಚನ ನೀಡಿದರು.

ಈ ಸಂದರ್ಭ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಸಮಾಜ ಸುಧಾರಣೆಯಲ್ಲಿ ನಾರಾಯಣ ಗುರುಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಯಾವುದೇ ಒಂದು ಜನಾಂಗದ ಆಚಾರ, ವಿಚಾರ, ಪರಂಪರೆಯನ್ನು ಆಚರಣೆಯ ಮೂಲಕ ಉಳಿಸಿ, ಬೆಳೆಸಿಕೊಂಡು ಮುನ್ನಡೆದಾಗ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಪೊನ್ನಂಪೇಟೆ ತಾಲೂಕಿನಲ್ಲಿ ಗುರು ಮಂದಿರ ಕಟ್ಟಲು ಸರ್ಕಾರಿ ಸ್ಥಳವನ್ನು ಗುರುತು ಮಾಡಿಕೊಟ್ಟರೆ, ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಅನುದಾನ ಒದಗಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.

ಹೈಕೋರ್ಟ್ನ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಮಾತನಾಡಿ, ನಾರಾಯಣ ಗುರುಗಳು ಜನರಲ್ಲಿ ಸ್ವಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಎಲ್ಲಾ ವರ್ಗದ ಜನರು ಒಟ್ಟಿಗೆ ಕಲಿಯಬೇಕು ಎಂದು ಪ್ರೇರೇಪಿಸಿದ್ದರು. ಇಂದು ಕೇರಳ ರಾಜ್ಯ ಸಾಕ್ಷರತೆಯಲ್ಲಿ ಯಶಸ್ಸು ಸಾಧಿಸಿದೆ ಎಂದರು. ಎಸ್‌ಎನ್‌ಡಿಪಿ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ ನಾರಾಯಣ ಗುರುಗಳು ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಮಾನತೆಯನ್ನು ಪ್ರತಿಪಾದಿಸಿದ ಮಹಾನ್ ಚೇತನ ಎಂದರು. ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರು ಶಾಂತಪ್ಪ ಗುರುಗಳ ಸಂದೇಶದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಮಕ್ಕಳು ಭರತ ನಾಟ್ಯ, ಹಾಗೂ ಹಾಡುಗಾರಿಕೆ ನಡೆಸಿಕೊಟ್ಟರು. ಸದಸ್ಯರಿಗೆ ಪೂಕಳಂ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾ ಯಿತು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆ ಎಸ್‌ಎನ್‌ಡಿಪಿ ಶಾಖೆ ಸ್ಥಾಪಕ ಅಧ್ಯಕ್ಷ ಕೆ.ಜಿ. ಪದ್ಮನಾಭ, ಉಪಾಧ್ಯಕ್ಷ ರಾಮಕೃಷ್ಣ, ಎಸ್‌ಎನ್‌ಡಿಪಿ ವನಿತಾ ಸಂಘದ ಅಧ್ಯಕ್ಷೆ ಜಯಶ್ರೀ ಕರುಣಾಕರ, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಲಿಧಿನ ಸ್ವಾಗತ ನೃತ್ಯ ಮಾಡಿದರು. ಸಂಘದ ಸದಸ್ಯ ಎಂ.ಎA. ದಿಲೀಪ್ ಸ್ವಾಗತಿಸಿ, ಸುದರ್ಶನ್ ವಂದಿಸಿದರು. ಕೆ.ಬಿ.ವಿನು ಸಂಘದ ವರದಿ ವಾಚಿಸಿದರು. ಸುಷ್ಮಾ ಹಾಗೂ ಗೀತ ನಿರೂಪಿಸಿದರು. -ಚನ್ನನಾಯಕ