ಕುಶಾಲನಗರ, ಅ. 21: ಭ್ರಷ್ಟಾಚಾರದ ಆರೋಪ ಹಿನ್ನೆಲೆಯಲ್ಲಿ ಕೊಡಗಿನ ಕೆಲವು ಅಧಿಕಾರಿಗಳಿಗೆ ಲೋಕಾಯುಕ್ತ ದಾಳಿಯ ಬಿಸಿ ಮುಟ್ಟಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಮಡಿಕೇರಿ ಮತ್ತು ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರು ಮೂರು ತಂಡಗಳಾಗಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದರು. ಕೊಡಗು ಜಿಲ್ಲಾ ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಡಿ. ನಾಗರಾಜು ಬಿನ್ ದೇವೇಗೌಡ ಅವರ ಮನೆ ಮೈಸೂರಿನಲ್ಲಿದ್ದು, ಅಲ್ಲಿಗೆ ಒಂದು ತಂಡ ದಾಳಿ ನಡೆಸಿದೆ.

ಕೊಡಗು ಸಣ್ಣ ನೀರಾವರಿ ಇಲಾಖೆಯ ಜೂನಿಯರ್ ಇಂಜಿನಿಯರ್ ರಫೀಕ್ ಬಿನ್ ಬೀರನ್‍ಕುಟ್ಟಿ ಅವರ ಮನೆ ಕುಶಾಲನಗರ ಸನಿಹದ ಬೈಚನಹಳ್ಳಿಯಲ್ಲಿದ್ದು, ಅಲ್ಲಿಗೆ ಒಂದು ತಂಡ ತೆರಳಿ ದಿಢೀರ್ ದಾಳಿ ನಡೆಸಿದೆ.

ಇನ್ನೊಂದೆಡೆ ರಾಜ್ಯ ಗುಪ್ತ ವಾರ್ತಾ ಇಲಾಖೆಗೆ ವರ್ಗಾವಣೆಗೊಂಡಿರುವ ಕುಶಾಲನಗರ ಪೊಲೀಸ್ ನಿರೀಕ್ಷಕರಾಗಿದ್ದ ಮಹೇಶ್ ದೇವರು ಬಿನ್ ಮುದ್ದಪ್ಪ ಅವರ ಮನೆಗೂ ದಾಳಿ ನಡೆದಿದೆ. ಅವರು ಇತ್ತೀಚೆಗಷ್ಟೇ ಕುಶಾಲನಗರ ನಿಸರ್ಗಧಾಮದ ಬಳಿ ಇರುವ ಮಾದಾಪಟ್ಟಣದ ಬಡಾವಣೆಯೊಂದರಲ್ಲಿ ಬೃಹತ್ ಮನೆ ನಿರ್ಮಿಸಿಕೊಂಡಿದ್ದರು.

ಪತ್ತೆಯಾದ ಅಧಿಕ ಆಸ್ತಿಗಳು

ಈ ಅಧಿಕಾರಿಗಳು ತಮ್ಮ ನಿರ್ದಿಷ್ಟ ಸಂಪಾದನೆ, ಸರಕಾರಿ ವೃತ್ತಿಯಲ್ಲಿರುವ ಬರುವ ವೇತನ ಪ್ರಮಾಣಕ್ಕೆ ಹೋಲಿಸಿದರೆ, ಅದಕ್ಕಿಂತ ಅಧಿಕ ಆಸ್ತಿ, ಚಿನ್ನಾಭರಣ ಮತ್ತು ಆದಾಯ ಹೊಂದಿರುವುದು ದಾಳಿ ಸಂದರ್ಭ ಪತ್ತೆಯಾಗಿರುವುದಾಗಿ ಮೈಸೂರು ವಿಭಾಗದ ಪೊಲೀಸ್ ಅಧೀಕ್ಷಕ ಎಸ್.ಎಸ್. ಸುರೇಶ್ ಬಾಬು ‘ಶಕ್ತಿ’ಗೆ ಮಾಹಿತಿಯಿತ್ತಿದ್ದಾರೆ.

ಹಾಗಿದ್ದರೆ ಈ ಅಧಿಕಾರಿಗಳು ಹೊಂದಿರುವ ಅಧಿಕ ಆಸ್ತಿ ಇತ್ಯಾದಿ ವಿವರಗಳೇನು ಎನ್ನುವ ಕುತೂಹಲಕ್ಕೆ ಲೋಕಾಯುಕ್ತ

(ಮೊದಲ ಪುಟದಿಂದ) ಅಧಿಕಾರಿಗಳ ದಾಳಿ ಸಂದರ್ಭ ಪತ್ತೆಯಾಗಿರುವ ಈ ಕೆಳಗಿನ ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

ಜಿಲ್ಲಾ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಬಿ. ನಾಗರಾಜು ಅವರಿಗೆ ಎರಡು ಮನೆ ಇರುವುದು ಪತ್ತೆಯಾಗಿದೆ. ಮೈಸೂರಿನ ಮನೆಯಲ್ಲಿ 1,089 ಗ್ರಾಂ. ಚಿನ್ನ, 9,928 ಗ್ರಾಂ. ಬೆಳ್ಳಿ, ನಗದು ಹಣ ರೂ. 23,91,000, ಕುಟುಂಬದ ಸದಸ್ಯರ ಹೆಸರಿನಲ್ಲಿ ಬ್ಯಾಂಕ್‍ನ 11 ಅಕೌಂಟ್‍ಗಳಲ್ಲಿ ಒಟ್ಟು ರೂ. 59,36,399 ಪತ್ತೆಯಾಗಿದೆ. ಜೊತೆಗೆ ಒಂದು ಕಿಯಾ ಕಾರು, ಒಂದು ಸೆಲಾರಿಯೋ ಕಾರು, ಒಂದು ಸ್ಕೂಟರ್ ಹಾಗೂ ಇತರ ಹಲವು ದಾಖಲಾತಿಗಳು ಪತ್ತೆಯಾಗಿವೆ.

ಜಿಲ್ಲಾ ಸಣ್ಣ ನೀರಾವರಿ ಇಲಾಖೆಯ ಜೂನಿಯರ್ ಇಂಜಿನಿಯರ್ ರಫೀಕ್ ಅವರ ಬೈಚನಹಳ್ಳಿ ಮನೆಗೆ ದಾಳಿ ಮಾಡಿದ ಸಂದರ್ಭ ಆ ಮನೆಯಲ್ಲದೆ 2 ಎಕರೆ ಕಾಫಿ ತೋಟ ಇರುವುದು ಪತ್ತೆಯಾಗಿದೆ. ಜೊತೆಗೆ 680 ಗ್ರಾಂ. ಚಿನ್ನ, 250 ಗ್ರಾಂ. ಬೆಳ್ಳಿ, ರೂ 2,82,000 ನಗದು ಹಣ ಪತ್ತೆಯಾಗಿದೆ. ಅಲ್ಲದೆ, ಒಂದು ಇನ್ನೋವಾ ಕಾರು, ಒಂದು ಬೊಲೆರೋ ಜೀಪ್ ಹಾಗೂ ಒಂದು ಸ್ಕೂಟರ್ ಮತ್ತಿತರ ದಾಖಲಾತಿಗಳು ಪತ್ತೆಯಾಗಿವೆ.

ಕುಶಾಲನಗರ ಪೊಲೀಸ್ ಅಧಿಕಾರಿ ಮಹೇಶ್ ದೇವರು ಅವರ ಕುಶಾಲನಗರದ ಸುಮಾರು ರೂ. ಎರಡೂವರೆ ಕೋಟಿ ಮೌಲ್ಯದ ಮನೆ ಅಲ್ಲದೆ, 200 ಗ್ರಾಂ. ಚಿನ್ನ, 2.5 ಕೆ.ಜಿ. ಬೆಳ್ಳಿ, ರೂ. 5500 ನಗದು ಹಣ ಹಾಗೂ ಕುಟುಂಬದ ಸದಸ್ಯರುಗಳ ಹೆಸರಿನಲ್ಲಿ ಬ್ಯಾಂಕ್‍ನ 4 ಅಕೌಂಟ್‍ಗಳಲ್ಲಿ ಒಟ್ಟು ರೂ. 4,99,747 ಪತ್ತೆಯಾಗಿದೆ. ಜೊತೆಗೆ ಒಂದು ಕಾರು, ಒಂದು ಸ್ಕೂಟರ್ ಮತ್ತು ದಾಖಲಾತಿಗಳು ಪತ್ತೆಯಾಗಿವೆ.

ಆರೋಪಿತ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲಿನ ದಾಳಿಯ ಕಾರ್ಯಾಚರಣೆಯು ಕರ್ನಾಟಕ ಲೋಕಾಯುಕ್ತ ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ ನಡೆದಿದೆ. ಕಾರ್ಯಾಚರಣೆಯನ್ನು ಮೈಸೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್. ಸುರೇಶ್ ಬಾಬು, ಡಿವೈಎಸ್‍ಪಿಗಳಾದ ಪವನಕುಮಾರ್, ಕೃಷ್ಣಯ್ಯ, ಮಾಲತೀಶ್, ಎಸ್.ಟಿ. ಒಡೆಯರ್ ಇವರುಗಳ ನೇತೃತ್ವದಲ್ಲಿ ನಡೆಯಿತು. ಪೊಲೀಸ್ ನಿರೀಕ್ಷಕರುಗಳಾದ ಲೋಕೇಶ್, ಉಮೇಶ್, ಶಶಿಕಲಾ, ರವಿಕುಮಾರ್, ಶಶಿಕುಮಾರ್, ಪ್ರಕಾಶ್, ಜಯರತ್ನ, ರೂಪಶ್ರೀ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕುಶಾಲನಗರ ಪೊಲೀಸ್ ನಿರೀಕ್ಷಕರಾಗಿದ್ದ ಮಹೇಶ್ ದೇವರು ಅವರ ಕಾರ್ಯವೈಖರಿ ಸರಿ ಇಲ್ಲವೆಂದು ಈ ಹಿಂದೆ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಬಳಿಕ ಅವರನ್ನು ರಾಜ್ಯ ಗುಪ್ತವಾರ್ತೆ ಇಲಾಖೆಗೆ ವರ್ಗಾಯಿಸಲಾಗಿತ್ತು. ಆದರೆ, ಅವರು ಅಲ್ಲಿ ಇನ್ನು ಕೂಡ ಅಧಿಕಾರ ಸ್ವೀಕರಿಸಿಲ್ಲ.

ಮತ್ತೊಂದೆಡೆ ಮಡಿಕೇರಿಯ ಜಿಲ್ಲಾಡಳಿತದ ಭವನದ ಕೆಳಭಾಗದಲ್ಲಿ ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ತಡೆಗೋಡೆ ಇತ್ತೀಚೆಗೆ ಕುಸಿದು ಬಿದ್ದಿದ್ದು, ಆ ಸಂದರ್ಭ ಅದರ ಉಸ್ತುವಾರಿ ಹೊತ್ತಿದ್ದ ಜಿಲ್ಲಾ ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ನಾಗರಾಜ್ ಅವರ ವಿರುದ್ಧ ವಿರೋಧ ಪಕ್ಷಗಳು ಮಾತ್ರವಲ್ಲದೆ, ಸರಕಾರಿ ಪ್ರತಿನಿಧಿಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು.

6 ವರ್ಷಗಳ ಬಳಿಕ ಜಿಲ್ಲೆಯಲ್ಲಿ ದಾಳಿ

ಈ ಹಿಂದೆ ಲೋಕಾಯುಕ್ತದ ಬದಲು ಹಿಂದಿನ ಸರಕಾರ ಎಸಿಬಿ ರಚನೆ ಮಾಡಿತ್ತು; ಹೀಗಾಗಿ ಲೋಕಾಯುಕ್ತದ ದಾಳಿ ಸ್ಥಗಿತಗೊಂಡು ಎಸಿಬಿಗೆ ಅಧಿಕಾರಿ ನೀಡಲಾಗಿತ್ತು. ಆದರೆ, ಕೊಡಗು ಜಿಲ್ಲೆಯಲ್ಲಿ ಕಳೆದ 6 ವರ್ಷಗಳಲ್ಲಿ ಎಸಿಬಿ ಕೇವಲ ಒಂದೇ ಒಂದು ದಾಳಿ ನಡೆಸಿದ್ದು, ಇದೀಗ ಲೋಕಾಯುಕ್ತದ ಅಧಿಕಾರಿಗಳು ಈ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಆಗಿಂದಾಗೆ ದಾಳಿ ನಡೆಸುವ ಸಂಕಲ್ಪ ಹೊಂದಿರುವುದಾಗಿ ‘ಶಕ್ತಿ’ಗೆ ಮಾಹಿತಿ ದೊರೆತಿದೆ.

ಲೋಕಾಯುಕ್ತ ರಚನೆಗೊಂಡು 2 ತಿಂಗಳಷ್ಟೇ ಆಗಿದೆ. ಕೊಡಗಿನಲ್ಲಿ ಈಗಾಗಲೇ ಲೋಕಾಯುಕ್ತದಿಂದ 3 ದಾಳಿ ಪ್ರಕರಣಗಳು ನಡೆದಿವೆ. ಅಲ್ಲದೇ ಒಂದು ಭ್ರಷ್ಟಾಚಾರ ಪ್ರಕರಣವನ್ನು ಬಲೆಗೆ ಬೀಳಿಸಲಾಗಿದೆ ಎನ್ನುವುದು ವಿಶೇಷತೆ ಎನ್ನಬಹುದು. - ಸುನಿಲ್ ಪೊನ್ನೇಟಿ