ಕಣಿವೆ, ಅ. 21 : ನಾಡಿನ ಕಲೆ, ಸಂಸ್ಕøತಿ ಪರಂಪರೆಯೊಂದಿಗೆ ಕೋಟ್ಯಂತರ ಜೀವಿಗಳ ಜೀವದಾತೆ, ಲಕ್ಷಾಂತರ ರೈತರ ಜೀವನಾಡಿ ಕಾವೇರಿ ನದಿಯ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕರೆಕೊಟ್ಟರು.

ಜಲ ಸಂಪನ್ಮೂಲ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾವೇರಿ ನದಿ ಉತ್ಸವ ಕಾರ್ಯ ಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನದಿಯ ನೀರು ಒಂದು ನೈಸರ್ಗಿಕವಾದ ಅಮೂಲ್ಯ ಸಂಪತ್ತು. ಜಲಮೂಲಗಳಾದ ಹಳ್ಳ - ಕೊಳ್ಳ, ಕೆರೆ, ತೊರೆ, ಜಲಾಶಯಗಳನ್ನು ಸಂರಕ್ಷಿಸಬೇಕಾದ ತುರ್ತು ಅನುವಾರ್ಯತೆಯ ಬಗ್ಗೆ ಶಾಸಕ ರಂಜನ್ ಮಾತನಾಡಿದರು.

ಕಾವೇರಿ ಕೊಡಗಿಗೆ ಮಾರಿ ಪರ ಜಿಲ್ಲೆಯವರಿಗೆ ಉಪಕಾರಿಯಾಗಿದೆ. ಪ್ರತಿ ಮಳೆಗಾಲದಲ್ಲಿ ಕಾವೇರಿ ನದಿಯ ಪ್ರವಾಹದಿಂದ ಇಲ್ಲಿನ ಜನರು ಅನುಭವಿಸುವ ನರಕ ಯಾತನೆ ನಿಜಕ್ಕೂ ಬೇಸರವಾಗುತ್ತದೆ. ಆದಾಗ್ಯೂ ಕೊಡಗಿನ ಜನರ ಪಾಲಿಗೆ ಕಾವೇರಿ ಕುಲದೈವ. ನಾವು ಕಾವೇರಿಯನ್ನು ಕಾಪಾಡಿದರೆ - ಕಾವೇರಿ ನಮ್ಮನ್ನು ಕಾಪಾಡುತ್ತಾಳೆ ಎಂದರು. ಪ್ರಬಾರ ಜಿಲ್ಲಾಧಿಕಾರಿ

(ಮೊದಲ ಪುಟದಿಂದ) ಭಂವರ್ ಸಿಂಗ್ ಮೀನಾ ಮಾತನಾಡಿ, ಸ್ವಚ್ಛ ಭಾರತ ಯೋಜನೆ ಸಂಪೂರ್ಣ ಸಾಕಾರವಾದಲ್ಲಿ ನದಿಯ ಸ್ವಚ್ಛತೆ ಸುಧಾರಿಸುತ್ತದೆ. ಹಾಗಾಗಿ ಮನೆ ಬಾಗಿಲಿಗೆ ಬರುವ ಕಸದ ವಾಹನಗಳಿಗೆ ಕಡ್ಡಾಯವಾಗಿ ಕಸ ತ್ಯಾಜ್ಯಗಳನ್ನು ಹಾಕಿದಲ್ಲಿ ಜಲಮೂಲಗಳ ರಕ್ಷಣೆ ಸಾಧ್ಯವಾಗುತ್ತದೆ ಎಂದರು. ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಆರ್.ಎಲ್. ವೆಂಕಟೇಶ್ ಮಾತನಾಡಿ, ಬೆಳೆದ ನದಿ ದಂಡೆ ಹಾಗೂ ಜಲಮೂಲಗಳು ಉಳಿದರೆ ಮಾತ್ರ ಮಾನವನ ಉಳಿವು. ತಲಕಾವೇರಿಯಲ್ಲಿ ಹುಟ್ಟಿ ಸುಮಾರು 800 ಕಿಮೀ ದೂರ ಕ್ರಮಿಸಿ ಸಾಗರ ಸೇರುವ ಕಾವೇರಿ ನದಿಯ ಉಳಿವು ಪ್ರತಿ ನಾಗರಿಕರ ಕರ್ತವ್ಯವಾಗಬೇಕಿದೆ ಎಂದರು.

ಕಾವೇರಿ ನದಿ ಸಂರಕ್ಷಣಾ ಅಭಿಯಾನ ಸಮಿತಿಯ ಪ್ರಮುಖರಾದ ರೀನಾ ಪ್ರಕಾಶ್ ಮಾತನಾಡಿ, ಗಂಗಾ ನದಿ ಮಾದರಿಯಲ್ಲಿ ಕಾವೇರಿ ನದಿಯ ಶುದ್ಧೀಕರಣ ಆಗಬೇಕು. ನದಿಯ ಸ್ವಚ್ಛತೆ ಹಾಗೂ ಸಂರಕ್ಷಣೆಗೆ ಸರ್ಕಾರ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಕಳೆದ 13 ವರ್ಷಗಳಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಮೂಲಕ ನದಿ ನೀರಿನ ಬಗ್ಗೆ ನದಿ ಸಂರಕ್ಷಣಾ ಅಭಿಯಾನದ ತಂಡ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಯಾರಿಂದಲೂ ಉತ್ಪಾದಿಸಲಾಗದ ದೇವರು ಕೊಟ್ಟ ವರವಾದ ನೀರನ್ನು ಸಂರಕ್ಷಿಸ ಬೇಕಾದ್ದು ಪ್ರತಿ ಜನರ ಕರ್ತವ್ಯ.

ಬೆಳೆಯುತ್ತಿರುವ ವಿಜ್ಞಾನ ದೊಂದಿಗೆ ಆರೋಗ್ಯದ ಸಂಜೀವಿನಿ ಯಾದ ನೀರನ್ನು ಸಂರಕ್ಷಿಸದಿದ್ದರೆ ಅಪಾಯವನ್ನು ಕಾಣಬೇಕಾಗುತ್ತದೆ ಎಂದರು. ಕಾವೇರಿ ಎಂಬ ಪದವೇ ಒಂದು ಸಂಸ್ಕಾರ, ಅದನ್ನು ಗೌರವಿಸೋಣ, ನದಿ ತಾಯಿಯ ಸ್ವರೂಪವಾಗಬೇಕು ಎಂದರು.

ಕಾವೇರಿ ನದಿ ಸಂರಕ್ಷಣಾ ಅಭಿಯಾನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ಕಾವೇರಿ ಎಂಬುದು ಅದು ನದಿಯಲ್ಲ. ಅದು ಪ್ರತಿಯೊಬ್ಬರ ತಾಯಿಯ ಸ್ವರೂಪವಾದಾಗ ಅದು ಮಲಿನವಾಗಲ್ಲ. ಕುಶಾಲನಗರದ ಹಲವು ಸಂಘಟನೆಗಳೊಂದಿಗೆ ಕಾವೇರಿ ನದಿಯ ಸ್ವಚ್ಛತೆಗೆ ಮುನ್ನುಡಿ ಬರೆದ ಪರಿಣಾಮ ಇಂದು ಸರ್ಕಾರವೇ ಇದಕ್ಕೆ ಸೂಕ್ತ ವೇದಿಕೆ ಒದಗಿಸಿದೆ. ನದಿಯ ರಕ್ಷಣೆಗೆ ರಿವರ್ ಪೆÇಲೀಸ್ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಪರಿಸರ ಪ್ರೇಮಿ ಭಾನುಗೊಂದಿ ಹರೀಶ್ ಕುಮಾರ್ ಮಾತನಾಡಿ, ಒಂದು ನದಿ ನೋಡುಗರ ದೃಷ್ಟಿಯಲ್ಲಿ ಕೃಷಿಕರಿಗೆ, ಮೀನುಗಾರನಿಗೆ, ಬಟ್ಟೆತೊಳೆವರಿಗೆ, ಇಂಜಿನಿಯರ್‍ಗೆ ಹೀಗೆ ಬೇರೆಯಾಗಿ ಗೋಚರಿಸುತ್ತದೆ. ನದಿಯನ್ನು ಮಗಳಾಗಿ, ತಾಯಿಯಾಗಿ, ತಂಗಿಯಾಗಿ ಕಂಡು ಗೌರವಿಸಿದಾಗ ಆಪತ್ತುಗಳಿಂದ ರಕ್ಷಣೆ ಸಿಗುತ್ತದೆ ಎಂದರು.

ಅಧೀಕ್ಷಕ ಅಭಿಯಂತರ ಹೆಚ್.ಎಸ್.ಮೋಹನಕುಮಾರ್, ಕಬಿನಿ ಯೋಜನೆ ಅಧೀಕ್ಷಕ ಅಭಿಯಂತರ ಶಿವಮಹದೇವಯ್ಯ, ತಮಿಳು ನಾಡಿನಿಂದ ಧಾವಿಸಿದ್ದ ಸಾಧುಗಳ ತಂಡದೊಂದಿಗೆ ಶ್ರೀರಂಗಪಟ್ಟಣದ ಶಾಶ್ವತಿ ಕೇಂದ್ರದ ಮುಖ್ಯಸ್ಥರಾದ ಭಾನುಪ್ರಕಾಶ್ ಶರ್ಮ ಮಾತನಾಡಿ, ಭಾಗಮಂಡಲದಿಂದ ಪುಂಪೂಹಾರ್ ತನಕ 850 ಕಿಮೀ ತನಕ ಕಾವೇರಿ ನದಿಯ ಸ್ನಾನ ಘಟ್ಟಗಳನ್ನು ಸ್ವಚ್ಛತೆ ಮಾಡುವ ಮೂಲಕ ನದಿ ಹಾಗೂ ಜಲಮೂಲಗಳನ್ನು ರಕ್ಷಿಸುತ್ತಿದ್ದೇವೆ. ಮೈಸೂರು ಭಾಗದಲ್ಲಿ 48 ಕಾರ್ಖಾನೆಗಳಿಂದ ತ್ಯಾಜ್ಯ ನೀರು ನದಿಗೆ ಸೇರುತ್ತಿದೆ ಎಂದು ವಿಷಾದಿಸಿದರು. ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಉಪಾಧ್ಯಕ್ಷೆ ಸುರಯ್ಯಾ ಭಾನು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷ ಭಾಸ್ಕರನಾಯಕ್, ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಚರಣ್ ಇದ್ದರು. ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಪರಿಸರ ಪ್ರೇಮಿ ಟಿ.ಜಿ.ಪ್ರೇಮಕುಮಾರ್ ನೀರು ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದ ಬಳಿಕ ಕಾವೇರಿ ನದಿಯಲ್ಲಿ ಸಾಧು ಸಂತರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಮಹಾ ಆರತಿ ನಡೆಯಿತು. -ಕ.ಎಸ್. ಮೂರ್ತಿ