ಸುಂಟಿಕೊಪ್ಪ, ಅ.21: 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಗ್ರಾ.ಪಂ.ಸದಸ್ಯ ಮುಸ್ತಾಫಾರನ್ನು ಬಂದಿಸಿ ಗಡಿಪಾರು ಮಾಡಬೇಕೆಂದು ಬಿಜೆಪಿ ವತಿಯಿಂದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ತಾ.20 ರಂದು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಅಭಿವೃದ್ಧಿ ಪರ ಚರ್ಚೆ ನಡೆಸದೆ ವಿನಾಃಕಾರಣ ಅಧ್ಯಕ್ಷ ರಮೇಶ ಅವರನ್ನು ನಿಂದಿಸಿ ಕುರ್ಚಿಯಿಂದ ಹಲ್ಲೆ ನಡೆಸಿದ ಅದೇ ಗ್ರಾ.ಪಂ. ಸದಸ್ಯ ಮುಸ್ತಾಫಾ ಅವರ ಬಗ್ಗೆ ದೂರು ನೀಡಿದರೂ ಬಂಧಿಸಿ ಕ್ರಮ ಕೈಗೊಳ್ಳಲಿಲ್ಲ ಬದಲಾಗಿ ರೌಡಿ ಶೀಟರ್ ಆದ ಮುಸ್ತಾಫಾ ಅವರ ದೂರನ್ನು ಸ್ವೀಕರಿಸಿ ದೂರುದಾರರ ಬಗ್ಗೆ ಎಫ್ಐಆರ್ ದಾಖಲಿಸಿದ್ದಾರೆ. ಸುಳ್ಳು ದೂರು ನೀಡಿದ್ದನ್ನು ವಾಪಸ್ ಪಡೆಯಬೇಕು ಈ ಪಂಚಾಯಿತಿಯಲ್ಲಿ ಹಿಂದಿನ 2 ಪಿ.ಡಿ.ಓ.ಗಳನ್ನು, ಈಗಿನ ಪಿಡಿಓ ಅವರನ್ನು, ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳನ್ನು ಹೆದರಿಸಿದನ್ನು ಹಲವಾರು ಸಮಾಜ ಘಾತುಕ ಚಟುವಟಕೆಯಲ್ಲಿ ತೊಡಗಿಸಿಕೊಂಡು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆದ ಮುಸ್ತಾಫಾ ಅವರನ್ನು ಕೂಡಲೇ ಬಂಧಿಸದಿದ್ದಲ್ಲಿ ಒಂದು ವಾರದ ಬಳಿಕ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಕೊಡಗು ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಎಚ್ಚರಿಕೆ ನೀಡಿದರು.
ಸುಂಟಿಕೊಪ್ಪ ಹೋಬಳಿ ಬಿಜೆಪಿ ಅಧ್ಯಕ್ಷ ದಾಸಂಡ ರಮೇಶ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾನಾಡಿ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದರು.
ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ದೂರವಾಣಿಯಲ್ಲಿ ಪ್ರತಿಭಟನಾರರೊಂದಿಗೆ ಮಾತನಾಡಿ ತಾ.20 ರಂದು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ನಡೆದ ಪ್ರತಿಭಟನೆಯ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಿ ದೂರುದಾರರು ನೀಡಿರುವ ವೀಡಿಯೋ ತುಣುಕನ್ನು ಪರಿಶೀಲಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಕೈಬಿಡಲಾಯಿತು.
7ನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಸಿ.ಜೆ. ಜೋಸೆಫ್, ಹರದೂರು ಗ್ರಾ.ಪಂ. ಅಧ್ಯಕ್ಷ ಪದ್ಮನಾಭ, ನಾಕೂರು ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಮಂದೋಡಿ ಜಗನ್ನಾಥ್, ಕೆದಕಲ್ ಗ್ರಾ.ಪಂ. ಉಪಾಧ್ಯಕ್ಷ ಸಂಜು ಪೊನ್ನಪ್ಪ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ, ನಾಕೂರು ಶಿರಂಗಾಲ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಜಿ.ರಮೇಶ್, ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ್, ಸಹ ಪ್ರಮುಖ್ ರಂಜಿತ್ ಪೂಜಾರಿ, ಬಿಜೆಪಿ ಉಪಾಧ್ಯಕ್ಷ ಬಿ.ಕೆ.ಮೋಹನ್, ಸೋಮವಾಪೇಟೆ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಕಾರ್ಯದರ್ಶಿ ಗೌತಮ್, ಕೆದಕಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮಯ್ಯ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹರೀಶ್, ಸುಂಟಿಕೊಪ್ಪ ಒಬಿಸಿ ಅಧ್ಯಕ್ಷ ಸಿ.ಸಿ.ಸುನಿಲ್ ಕುಮಾರ್ ಹಾಗೂ ವಿವಿಧ ಪಂಚಾಯಿತಿಗಳ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ ಪೊಲೀಸ್ ಠಾಣೆ ಉಪನಿರೀಕ್ಷಕ ಮಂಜು ಮನವಿ ಸ್ವೀಕರಿಸಿದರು.