ಸುಂಟಿಕೊಪ್ಪ, ಅ. 21: ದೇಶದ ಸತ್ಪ್ರಜೆಗಳನ್ನು ರೂಪಿಸುವ ಅಧ್ಯಾಪಕರು ಆರೋಗ್ಯವನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಸಂತಮೇರಿ ಶಾಲಾ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ 2022-23ನೇ ಸಾಲಿನ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸುಜ್ಞಾನ ಕಲ್ಪಿಸಿಕೊಡುವ ಶಿಕ್ಷಕರು ದೇಶದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೆಗೌಡ, ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಶಿಸ್ತುಬದ್ಧವಾಗಿ ಕಲಿಸುವ ಕಾಯಕವನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರ ಸ್ನೇಹಿಯಾಗಿ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು. ಶಿಕ್ಷಕರು ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸಲು ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರಲ್ಲದೆ ಗುಣಾತ್ಮಕ ಶಿಕ್ಷಣದೊಂದಿಗೆ ಮಕ್ಕಳಿಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸ್ಸನ್ನು ನನಸು ಮಾಡುವ ನಿಟ್ಟಿನಲ್ಲಿ ಶ್ರಮಿಸುವಂತೆ ಕರೆ ನೀಡಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ಧಬಸಪ್ಪ ಮಾತನಾಡಿ, ಶಿಕ್ಷಕರ ಹಿತ ಕಾಪಾಡುವಲ್ಲಿ ಸಂಘಟಿತ ಹೋರಾಟ ನಡೆಸುತ್ತೇವೆ. ಹಾಗೆಯೇ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಬೋಧಿಸುವಾಗ ಅವರ ಮನಸ್ಸನ್ನು ಅರ್ಥೈಸಿ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮುಡಿತ್ತಾಯ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಹೆಚ್.ಎನ್. ಚೇತನ, ಕೂಡಿಗೆ ಡಯಟ್ ಉಪನಿರ್ದೇಶಕ ಮಲ್ಲೇಶಪ್ಪ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕೊಡಗು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಪಿಲಿಫ್‍ವಾಸ್, ಕೊಡಗು ಜಿಲ್ಲಾ ಅನುದಾನಿತ ನೌಕರರ ಸಂಘದ ಅಧ್ಯಕ್ಷ ಪ್ರಭುಕುಮಾರ್, ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ. ಕುಮಾರ್, ಸಂತ ಮೇರಿ ಆಂಗ್ಲ ಶಾಲೆಯ ಮುಖ್ಯೋಪಾಧ್ಯಾಯ ಸೆಲ್ವರಾಜ್, ಸೋಮವಾರಪೇಟೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಂ. ಹೇಮಂತ್, ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎ. ಧರ್ಮಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಿ.ಪಿ. ಉತ್ತಪ್ಪ, ರಾಜ್ಯದ ವಿವಿಧ ಜಿಲ್ಲೆಗಳ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮಗಳೊಂದಿಗೆ ಅಪರಾಹ್ನ ಶಿಕ್ಷಕರಿಗೆ ಮೌಲ್ಯಮಾಪನ ಬಗ್ಗೆ ಕಾರ್ಯಾಗಾರ ನಡೆಯಿತು. ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಾಡಿದರು. ಸಂತಮೇರಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.