ಸೋಮವಾರಪೇಟೆ, ಅ. 21: ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ವಿವಿಧೋದ್ದೇಶ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಏಲಕ್ಕಿ ಸಹಕಾರಿ ಮಾರ್ಕೆಟಿಂಗ್ ಸೊಸೈಟಿ ಲಿಮಿಟೆಡ್ನಲ್ಲಿ ಕೀಟನಾಶಕ ನಿಯಂತ್ರಣ ಕಾಯ್ದೆ 1985 ಮತ್ತು ಅಗತ್ಯ ವಸ್ತುಗಳ ಕಾಯ್ದೆ 1955ರ ಉಲ್ಲಂಘನೆಯ ಬಗ್ಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಕೊಡಗು ಏಲಕ್ಕಿ ಸಹಕಾರಿ ಮಾರ್ಕೆಟಿಂಗ್ ಸೊಸೈಟಿ ಲಿಮಿಟೆಡ್ನ ರಸಗೊಬ್ಬರ/ಕೀಟನಾಶಕ ಮಾರಾಟಗಾರರಿಗೆ ನೋಟೀಸ್ ಜಾರಿಗೊಳಿಸಿರುವ ಕೃಷಿ ಅಧಿಕಾರಿ ನವ್ಯ ನಾಣಯ್ಯ ಅವರು, ಮುಂದಿನ 7 ದಿನಗಳ ಒಳಗೆ ಸಮಜಾಯಿಷಿಕೆ ನೀಡದಿದ್ದರೆ ಪರವಾನಗಿಯನ್ನು ರದ್ದುಗೊಳಿಸುವುದಾಗಿ ನೋಟೀಸ್ನಲ್ಲಿ ಎಚ್ಚರಿಸಿದ್ದಾರೆ.
ಮಾರಾಟ ಮಳಿಗೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಪರವಾನಗಿಯನ್ನು ಪ್ರಮುಖ ಜಾಗದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಿಲ್ಲ. ಕೀಟನಾಶಕ ದಾಸ್ತಾನು ಮತ್ತು ದರಪಟ್ಟಿಯನ್ನು ಪ್ರದರ್ಶಿಸದೇ ಕೀಟನಾಶಕ ಕಾಯ್ದೆ 1985ರ ಸೆಕ್ಷನ್ 3 ಮತ್ತು 4ನ್ನು ಉಲ್ಲಂಘಿಸಲಾಗಿದೆ. ವಿವಿಧ ಸಂಸ್ಥೆಗಳಿಂದ ಕೀಟನಾಶಕ ಖರೀದಿಸಿದ ಬಗ್ಗೆ ದಾಖಲಾತಿ ಇಟ್ಟಿಲ್ಲ. ಪ್ರಮುಖವಾಗಿ ರಶೀದಿ ಹಾಕಿಲ್ಲ. ರೈತರ ಹೆಸರು, ಊರಿನ ಮಾಹಿತಿಯಿಲ್ಲ. ರೈತರ ಸಹಿಯನ್ನೂ ಪಡೆದಿಲ್ಲ ಎಂದು ನೋಟೀಸ್ನಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ದಾಸ್ತಾನು ಪುಸ್ತಕದಲ್ಲಿನ ಶಿಲ್ಕಿಗೂ, ದಾಸ್ತಾನು ಮಳಿಗೆಯ ದಾಸ್ತಾನಿಗೂ ತಾಳೆ ಇಲ್ಲ. ಮಾಸಿಕ ದಾಸ್ತಾನು (ವ್ಯಾಪಾರ ತಃಖ್ತೆ)ಯನ್ನು ಕಳುಹಿಸಿಲ್ಲ. ಕೀಟನಾಶಕ ಪ್ಯಾಕೇಟ್/ಬಾಟಲ್ಗಳನ್ನು ಎಣಿಸಲು ಅನುಕೂಲವಾಗುವಂತೆ ಇಟ್ಟಿರುವುದಿಲ್ಲ ಎಂದು ಕೃಷಿ ಅಧಿಕಾರಿ ನವ್ಯ ನಾಣಯ್ಯ ಅವರು ಕೊಡಗು ಏಲಕ್ಕಿ ಸಹಕಾರಿ ಮಾರ್ಕೆಟಿಂಗ್ ಲಿಮಿಟೆಡ್ನ ರಸಗೊಬ್ಬರ/ಕೀಟನಾಶಕ ಮಾರಾಟಗಾರರು-ಸೋಮವಾರಪೇಟೆ ಶಾಖೆಯ ವ್ಯವಸ್ಥಾಪಕರಿಗೆ ನೋಟೀಸ್ ನೀಡಿದ್ದಾರೆ.
ಈ ಮೇಲಿನ ಕಾಯ್ದೆಗಳನ್ನು ಉಲ್ಲಂಘಿಸಿರುವ ನಿಮ್ಮ ಪರವಾನಗಿ ಯನ್ನು ಏಕೆ ಸ್ಥಗಿತಗೊಳಿಸಬಾರದು? ಎಂದು ಪ್ರಶ್ನಿಸಿರುವ ಅಧಿಕಾರಿಗಳು, ನೋಟೀಸ್ ತಲುಪಿದ 7 ದಿನಗಳ ಒಳಗೆ ಎಲ್ಲಾ ದಾಖಲಾತಿಗಳೊಡನೆ ಸಮಜಾಯಿಷಿಕೆಯೊಂದಿಗೆ ಪರಿಶೀಲನೆಗೆ ಸಲ್ಲಿಸಲು ಆದೇಶಿಸಿದ್ದಾರೆ. ತಪ್ಪಿದಲ್ಲಿ ಮಾರಾಟ ಪರವಾನಗಿಯನ್ನು ರದ್ದುಪಡಿಸುವುದಾಗಿಯೂ ಎಚ್ಚರಿಸಿದ್ದಾರೆ.
ನಷ್ಟದಲ್ಲಿ ಶಾಖೆ: ಸೋಮವಾರಪೇಟೆಯಲ್ಲಿರುವ ಕೊಡಗು ಏಲಕ್ಕಿ ಸಹಕಾರಿ ಮಾರ್ಕೆಟಿಂಗ್ ಲಿಮಿಟೆಡ್ನ ಶಾಖೆಯು ಕಳೆದ ಹಲವು ಸಮಯಗಳಿಂದ ನಷ್ಟದಲ್ಲಿಯೇ ನಡೆಯುತ್ತಿದೆ. ಕಳೆದ ಸಾಲಿನಲ್ಲಿ ರೂ. 8.67 ಲಕ್ಷ ನಷ್ಟ ಉಂಟಾಗಿದೆ. ವರದಿ ಸಾಲಿನಲ್ಲಿ 1.94ಲಕ್ಷ ಹೆಚ್ಚು ನಷ್ಟವಾಗಿದ್ದು, ವರ್ಷದಿಂದ ವರ್ಷಕ್ಕೆ ನಷ್ಟ ಹೆಚ್ಚಾಗುತ್ತಲೇ ಇದೆ. ಇದು ಸಂಘದ ಮೂಲ ಬಂಡವಾಳದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶಾಖೆಯ ಸಿಬ್ಬಂದಿ ವೇತನ ಹಾಗೂ ಇನ್ನಿತರೆ ಖರ್ಚುಗಳಿಗೆ ಹೋಲಿಸಿದಾಗ ಆದಾಯ ಕಡಿಮೆಯಾಗಿರುವುದೇ ನಷ್ಟಕ್ಕೆ ಕಾರಣವಾಗಿದೆ.
7 ವರ್ಷದಲ್ಲಿ 26 ಲಕ್ಷ ನಷ್ಟ: ಕಳೆದ 7 ವರ್ಷಗಳಿಂದ ಸತತವಾಗಿ ನಷ್ಟದ ಹಾದಿ ಹಿಡಿದಿರುವ ಈ ಶಾಖೆಯು ಈವರೆಗೆ ಒಟ್ಟು 26 ಲಕ್ಷ ನಷ್ಟದಲ್ಲಿದೆ. ಶಾಖಾ ಸಿಬ್ಬಂದಿಗಳ ಕರ್ತವ್ಯಲೋಪದಿಂದಾಗಿ ಗ್ರಾಹಕರಿಗೆ ನಿರೀಕ್ಷಿತ ಮಟ್ಟದಲ್ಲಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಪರಿಕರಗಳಿಗೆ ಹೆಚ್ಚು ಬೆಲೆ ನಿಗದಿ ಮಾಡಿರುವ ಹಿನ್ನೆಲೆ ಖರೀದಿಯೂ ಕಡಿಮೆಯಾಗಿದೆ. ಇದರಿಂದಾಗಿ ಶಾಖೆಯು ನಷ್ಟದ ಹಾದಿ ಹಿಡಿದಿದೆ ಎಂದು ಆಡಳಿತ ಮಂಡಳಿಯ ಕೆಲ ನಿರ್ದೇಶಕರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.
ಈ ಶಾಖೆಯು ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಮುಚ್ಚುವ ಸ್ಥಿತಿಗೆ ತಲುಪುವುದು ನಿಸ್ಸಂಶಯವಾಗಿದೆ. ಇದು ಆಡಳಿತ ಮಂಡಳಿಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಸರ್ ಚಾರ್ಜ್ ಬೀಳುವುದರಿಂದ ಶಾಖೆಯನ್ನು ಮುಚ್ಚುವುದೇ ಸೂಕ್ತ ಎಂದು ಆಡಳಿತ ಮಂಡಳಿಯ ಕೆಲವರು ಅಭಿಪ್ರಾಯಿಸಿದ್ದಾರೆ.