ಮಡಿಕೇರಿ, ಅ.21: ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾರಿಕೆ ಲಿಶ್ಮಿತ ಮೇಜರ್ ಹುದ್ದೆಗೆ ಬಡ್ತಿ ಹೊಂದಿದ್ದು, ಪ್ರಸ್ತುತ ನಾಗಾಲ್ಯಾಂಡ್ನ ದಿಮಾಪುರದಲ್ಲಿ ಕರ್ತವ್ಯದಲ್ಲಿದ್ದಾರೆ.
ಮೂಲತಃ ಭಾಗಮಂಡಲದ ತಾವೂರು ಗ್ರಾಮದ ನಿವಾಸಿ, ಪ್ರಸ್ತುತ ಮಡಿಕೇರಿಯ ಕಾವೇರಿ ಬಡಾವಣೆಯಲ್ಲಿ ನೆಲೆಸಿರುವ ಬಾರಿಕೆ ಅಯ್ಯಪ್ಪ ಹಾಗೂ ರತ್ನಶೀಲ ಅವರ ಪುತ್ರಿ ಲಿಶ್ಮಿತ ಬೆಂಗಳೂರಿನ ಎಸ್ಎಂವಿಟಿ ತಾಂತ್ರಿಕ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಔಪಚಾರಿಕ ಶಿಕ್ಷಣವನ್ನು ಮಡಿಕೇರಿಯ ಸಂತ ಜೋಸೆಫರ ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಎಕ್ಸ್ಪರ್ಟ್ ಪ.ಪೂ. ಕಾಲೇಜಿನಲ್ಲಿ ಪೂರೈಸಿದ್ದಾರೆ.
2016ರಲ್ಲಿ ಬಾಂಬೆ ಇಂಜಿನಿಯರಿಂಗ್ ಗ್ರೂಪ್ ರೆಜಿಮೆಂಟ್ ಮೂಲಕ ಲೆಫ್ಟಿನೆಂಟ್ ಆಗಿ ಸೇನೆಗೆ ಸೇರ್ಪಡೆಗೊಂಡ ಲಿಶ್ಮಿತ ಒಟಿಎ ಚೆನ್ನೈನಲ್ಲಿ 11 ತಿಂಗಳು ತರಬೇತಿ ಪಡೆದು ನಂತರ ಕ್ಯಾಪ್ಟನ್ ಆಗಿ ಬಡ್ತಿ ಹೊಂದಿ ರಾಂಚಿಯಲ್ಲಿ ಕರ್ತವ್ಯ ನಿರ್ವಹಿಸಿ, ಬಳಿಕ ದೆಹಲಿಯಲ್ಲಿ ಸೇವೆ ಸಲ್ಲಿಸಿ ಇದೀಗ ಮೇಜರ್ ಆಗಿ ಬಡ್ತಿ ಹೊಂದಿ ದಿಮಾಪುರದಲ್ಲಿ ಕರ್ತವ್ಯದಲ್ಲಿದ್ದಾರೆ.