ಮಡಿಕೇರಿ, ಅ. 21 : ಜಲಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮ ವತಿಯಿಂದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಕಾವೇರಿ ನದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ. ಬೋಪಯ್ಯ, ಶಾಸಕ

ಎಂ.ಪಿ. ಅಪ್ಪಚ್ಚು ರಂಜನ್, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷÀ ನಾಪಂಡ ರವಿ ಕಾಳಪ್ಪ, ಅರಮೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಶ್ರೀರಂಗಪಟ್ಟಣದ ಡಾ. ಬಾನುಪ್ರಕಾಶ್ ಶರ್ಮ, ಅಖಿಲ ಭಾರತ ಸನ್ಯಾಸಿಗಳ ಸಂಘದ ಸಂಸ್ಥಾಪಕ ರಮಾನಂದ ಸ್ವಾಮೀಜಿ ಇತರರು ಕಾವೇರಿ ನದಿ ಉತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ಶ್ರೀ ಮಹಾಗಣಪತಿ, ಶ್ರೀ ಅಗಸ್ತ್ಯೇಶ್ವರ ದೇವಾಲಯಗಳಿಗೆ ಪೂಜೆ ಸಲ್ಲಿಸಿ, ಬಳಿಕ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ತಾಯಿ ಕಾವೇರಿ ಮಾತೆಯಲ್ಲಿ ವಿಶೆÉೀಷ ಪ್ರಾರ್ಥನೆ ಸಲ್ಲಿಸಿದರು.

ಗಂಗಾ ನದಿಯಂತೆ ಮಹತ್ವ : ಶಾಸಕ ಕೆ.ಜಿ.ಬೋಪಯ್ಯ ಅವರು ಕಾವೇರಿ ನದಿಯು ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ, ತಮಿಳುನಾಡು ಹಾಗೂ ಪಾಂಡಿಚೇರಿ ಮೂಲಕ ಸುಮಾರು 800 ಕಿ.ಮೀ.ಗೂ ಹೆಚ್ಚು ದೂರ ಹರಿಯುತ್ತದೆ. ಆ ನಿಟ್ಟಿನಲ್ಲಿ ಕಾವೇರಿ ನದಿಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಕಾವೇರಿ ನದಿ ಸ್ವಚ್ಛತೆಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

‘ಉತ್ತರದಲ್ಲಿ ಗಂಗಾ ನದಿಯಂತೆ ದಕ್ಷಿಣದಲ್ಲಿ ಕಾವೇರಿ ನದಿಗೆ ಹೆಚ್ಚಿನ ಮಹತ್ವ ಇದೆ. ಕಾವೇರಿ ನದಿಯ ಪಾವಿತ್ರ್ಯತೆ ಎಲ್ಲರೂ ಕಾಪಾಡಬೇಕು. ಆ ನಿಟ್ಟಿನಲ್ಲಿ ಜನಾಂದೋಲನ ಆಗಬೇಕು. ಕಾವೇರಿ ನದಿ ಪಾತ್ರದ ನಾಪೋಕ್ಲು, ನೆಲ್ಯಹುದಿಕೇರಿ, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಘನ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನದಿ ದಡದಲ್ಲಿನ ಗ್ರಾಮಸ್ಥರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ ಕಾವೇರಿ ನದಿ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು. ಕಾವೇರಿ ನದಿಯು ಕೊಡಗು ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಹುಟ್ಟಿ ಇಡೀ ನಾಡಿಗೆ ಜೀವನದಿ ಆಗಿದೆ. ಕಾವೇರಿ ನದಿಯ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.

ಮನಸ್ಥಿತಿ ಬದಲಿಸಿಕೊಳ್ಳಬೇಕು : ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಭಾರತೀಯ ಸಂಸ್ಕøತಿಯಲ್ಲಿ ಪ್ರಕೃತಿಯನ್ನು ಪೂಜಿಸುತ್ತೇವೆ. ಕಾವೇರಿ ನದಿ ಪಾತ್ರದಲ್ಲಿ ಸ್ವಚ್ಛತಾ ಕಾರ್ಯವು ನಮ್ಮಿಂದಲೇ ಆರಂಭವಾಗಬೇಕು. ಪವಿತ್ರ ನಾಡಿನಲ್ಲಿ ನಾವು ಬದುಕುತ್ತಿರುವುದು ಪುಣ್ಯವಂತರು. ಸ್ವಚ್ಛತೆ ಕಾಪಾಡುವಲ್ಲಿ ಮನಸ್ಥಿತಿ ಬದಲಿಸಿಕೊಳ್ಳಬೇಕು ಎಂದರು.

(ಮೊದಲ ಪುಟದಿಂದ) ‘ಯಾರೇ ಆದರೂ ಸಹ ಚಿಕ್ಕವರಿದ್ದಾಗ ಇಡೀ ವಿಶ್ವವನ್ನು ಬದಲಾಯಿಸಲು ಯೋಚಿಸುತ್ತಾರೆ. ಯೌವ್ವನ ವ್ಯವಸ್ಥೆಯಲ್ಲಿ ದೇಶವನ್ನು ಬದಲಾವಣೆ ಮಾಡಲು ಚಿಂತಿಸುತ್ತಾರೆ. ಸ್ವಲ್ಪ ವರ್ಷಗಳು ಕಳೆದಂತೆ ರಾಜ್ಯವನ್ನು ಬದಲಾಯಿಸಲು ಯೋಚಿಸುತ್ತಾರೆ. ತದನಂತರ ಗ್ರಾಮ ಪರಿವರ್ತಿಸಲು ಗಮನಿಸುತ್ತಾರೆ. ನಂತರ ಮೊದಲು ನಾವು ಬದಲಾಗಬೇಕು ಎಂಬ ಮನಃ ಪರಿವರ್ತನೆ ಆಗುತ್ತದೆ. ಆದ್ದರಿಂದ ಯಾವುದೇ ಒಳ್ಳೆಯ ಕಾರ್ಯಗಳು ನಮ್ಮಿಂದಲೇ ಆರಂಭವಾಗಬೇಕು ಎಂದು ಅವರು ಕತೆಯ ರೂಪದಲ್ಲಿ ವಿವರಿಸಿದರು.’

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರು ಮಾತನಾಡಿ ಕಾವೇರಿ ನದಿ ಜೀವಜಲವನ್ನು ಸಂರಕ್ಷಿಸಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿರುವುದು ಕಾವೇರಿ ನದಿ ಮಹತ್ವವನ್ನು ಸಾರುತ್ತದೆ ಎಂದರು.

ಕೊಯಮತ್ತೂರಿನ ಸ್ವಾಮೀಜಿ ಮಾತನಾಡಿ ಕಾವೇರಿ ನದಿಯು ದಕ್ಷಿಣ ಭಾರತದ ಕೋಟ್ಯಂತರ ಜನ ಜಾನುವಾರುಗಳ ಜೀವನದಿಯಾಗಿ, ಅನ್ನ ನೀಡುತ್ತಿದೆ ಎಂದರು. ಕಾವೇರಿ ನದಿ ಉತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಚಿ.ನಾ.ಸೋಮೇಶ್ ಅವರು ಕಾವೇರಿ ನದಿಯ ಮಹತ್ವ, ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ನಾಗರಿಕ ಸಮಾಜದ ಪಾತ್ರ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಳೆದ 12 ವರ್ಷಗಳಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ ಕಾವೇರಿ ಸ್ವಚ್ಛತೆಗಾಗಿ ನವೆಂಬರ್, 13 ರವರೆಗೆ ತಲಕಾವೇರಿಯಿಂದ ಪೂಂಪ್‍ಹಾರ್‍ವರೆಗೆ ಕಾವೇರಿ ಜಾಗೃತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸರ್ಕಾರ ಈ ಬಾರಿ ಕಾವೇರಿ ನದಿ ಉತ್ಸವಕ್ಕೆ ಸಹಕಾರ ನೀಡಿದೆ. ಎಲ್ಲರ ಸಹಕಾರದೊಂದಿಗೆ ಕಾವೇರಿ ನದಿ ಉತ್ಸವ ಹಾಗೂ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಸಾಧು ಸಂತರು ಹಾಗೂ ಕಾರ್ಯಕರ್ತರ ಮೂಲಕ 12 ವರ್ಷದಿಂದ ಕಾವೇರಿ ಜಾಗೃತಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾಡಳಿತ ಸಹಕಾರದಲ್ಲಿ ಕಾವೇರಿ ನದಿಯ ಮಹತ್ವ ಬಗ್ಗೆ, ಕಾವೇರಿ ನದಿ ಸ್ವಚ್ಛತಾ ಆಂದೋಲನವನ್ನು ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಟ್ರಸ್ಟ್ ಆಶ್ರಯದಲ್ಲಿ ಕಾವೇರಿ ನದಿ ಪಾತ್ರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಾವೇರಿ ಜಾಗೃತಿ ರಥ ಯಾತ್ರೆಯನ್ನು ತಲಕಾವೇರಿಯಿಂದ ಪೂಂಪ್‍ಹಾರ್ ತನಕ ಹಮ್ಮಿಕೊಳ್ಳಲಾಗಿದೆ ಎಂದರು.

ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಮೋಹನ್ ಕುಮಾರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀರಂಗಪಟ್ಟಣದ ಬಾನುಪ್ರಕಾಶ್ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯಗಳ ಆಡಳಿತಾಧಿಕಾರಿ ಡಾ. ನಂಜುಂಡೇಗೌಡ, ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ತಹಶೀಲ್ದಾರ್ ಮಹೇಶ್, ಭಾಗಮಂಡಲ-ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ, ಭಾಗಮಂಡಲ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ತಲಕಾವೇರಿ ಭಾಗಮಂಡಲ ವ್ಯವಸ್ಥಾಪಕ ಸಮಿತಿ ಮಾಜಿ ಅಧ್ಯಕ್ಷ ಮನುಮುತ್ತಪ್ಪ ಇತರರು ಇದ್ದರು. ಕಾವೇರಿ ನದಿ ಸಂರಕ್ಷಣಾ ಕರಪತ್ರವನ್ನು ಇದೇ ಸಂದರ್ಭದಲ್ಲಿ ಗಣ್ಯರು ಬಿಡುಗಡೆ ಮಾಡಿದರು.

ಶ್ರದ್ಧಾಭಕ್ತಿಯ ಮಹಾಆರತಿ : ಕಾವೇರಿ ನದಿ ಉತ್ಸವ ಪ್ರಯುಕ್ತ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಕಾವೇರಿ ನದಿ ಸಂರಕ್ಷಣಾ ಅಭಿಯಾನದ ಸಂಯೋಜP ಬಾನುಪ್ರಕಾಶ್ ಶರ್ಮ ಅವರು ವಿಶೇಷ ಪೂಜೆ ಸಲ್ಲಿಸಿದರು. ಮಹಾ ಅಭಿಷೇಕ, ಮಹಾ ಆರತಿ ವಿಶೇಷ ಪೂಜೆಯನ್ನು ಜೊತೆಗೆ ಬಾಗಿನವನ್ನು ತ್ರಿವೇಣಿ ಸಂಗಮದಲ್ಲಿ ಅರ್ಪಿಸಲಾಯಿತು. ‘ಜಯ ಜಯ ಕಾವೇರಿ, ಪ್ರೀತಿಯಿಂದಲೇ ಬೆಳಗು ಕಾವೇರಿ.. ಓಂ ಜಯ ಜಯ ಕಾವೇರಿ..., ಅಮ್ಮಾ ಕಾವೇರಿ... ಜಯ ಜಯ ಕಾವೇರಿ, ಭಕ್ತಿಯಿಂದಲೇ ಬೆಳಗು ಕಾವೇರಿ ಹಾಡಿನೊಂದಿಗೆ ಆರತಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕಿ ರೀನಾ ಪ್ರಕಾಶ್ ಅವರು ಕಳೆದ 12 ವರ್ಷಗಳಿಂದ ತಲಕಾವೇರಿಯಿಂದ ಪೂಂಪ್‍ಹಾರ್‍ವರೆಗೆ ಕಾವೇರಿ ತೀರ್ಥಯಾತ್ರೆಯನ್ನು ಹಮ್ಮಿಕೊಂಡು, ಕಾವೇರಿ ನದಿ ಮಹತ್ವದ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ ಎಂದು ಹೇಳಿದರು. ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಪಮಿತಾ, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‍ಗಳು ಇತರರು ಇದ್ದರು. ತ್ರಿವೇಣಿ ಸಂಗಮದಲ್ಲಿ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳು ನಡೆದವು.