ಮಡಿಕೇರಿ, ಅ. ೧೯: ಕೊಡವ ಕೂಟಾಳಿಯಡ ಕೂಟ ಸಂಘಟನೆಯು ಇತ್ತೀಚೆಗೆ ಕೊಡವ ಮಕ್ಕಳಿಗಾಗಿ ಆನ್‌ಲೈನ್‌ನಲ್ಲಿ ಕೊಡಗ್‌ರ ಚುಪ್ಪಿ ಕೋಗಿಲೆಯ-ಭಾಗ ೨ ಎಂಬ ಗಾಯನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಕೊಡಗು ಜಿಲ್ಲೆಯಲ್ಲದೆ ಬೇರೆ ಜಿಲ್ಲೆಯಿಂದ ಸರಿ ಸುಮಾರು ಐವತ್ತೊಂದು ಮಕ್ಕಳು ಈ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಈ ಸ್ಪರ್ಧೆಯ ಎರಡನೆ ಸುತ್ತಿನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಸಂಘಟನೆಯು ಹಿರಿಯ ಸಾಹಿತಿ ದಿ. ತೋಲಂಡ ನಾಣಯ್ಯ ಚಂಗಪ್ಪ, (ತೋನಾಚಂ) ಮತ್ತು ಗಾಯಕಿ ದಿ. ತೋಲಂಡ ಪ್ರಭಾ ಚೆಂಗಪ್ಪ ಅವರ ಸ್ಮರಣಾರ್ಥ ಅವರ ಹಾಡುಗಳನ್ನು ಸ್ಪರ್ಧಿಗಳಿಗೆ ಹಾಡಲು ಆಯ್ಕೆ ಮಾಡಿ ನೀಡಿದ್ದರು.

ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ರೂ. ೨೦೦೦ ನಗದು ಮತ್ತು ಕೊಡಗ್‌ರ ಚುಪ್ಪಿ ಕೋಗಿಲೆ ಎನ್ನುವ ಬಿರುದನ್ನು ಬೊಳ್ಳಚೆಟ್ಟಿರ ಶರೀನ್ ಚೆಂಗಪ್ಪ ತನ್ನದಾಗಿಸಿಕೊಂಡರು. ಎರಡನೆ ಬಹುಮಾನ ರೂ. ೧೫೦೦ ನಗದನ್ನು ಕಾಂಡAಡ ಪರಿಧಿ ಪೂವಮ್ಮ ಹಾಗೂ ಮೂರನೇ ಬಹುಮಾನ ರೂ. ೧೦೦೦ ವನ್ನು ಚೆಯ್ಯಂಡ ದೇಶಿಕ್ ದೇಚಮ್ಮ ಪಡೆದುಕೊಂಡರು.

ಸ್ಪರ್ಧೆಯ ವಿಜೇತರಿಗೆ ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಕೊಡವ ಕೂಟಾಳಿಯಡ ಕೂಟ ಇತ್ತೀಚೆಗೆ ಹುದಿಕೇರಿ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ‘ಪದ್ಧತಿ ಪಡಿಕನ ಸಮ್ಮಂಧ ಅಡ್‌ಕನ’ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.

ಈ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸು| ಮೇ| ಬಿದ್ದಂಡ ನಾಣಯ್ಯ ಅವರ ಬಹುಮಾನ ಪ್ರಾಯೋಜಿಸಿದ್ದರು.

ತೀರ್ಪುಗಾರರಾಗಿ ಗಾಯಕರಾದ ತಾಪಂಡ ಮಂಜು ಕುಶಾಲಪ್ಪ ಮತ್ತು ಗಾಯಕಿ ಕಲಿಯಂಡ ಬೀನಾ ನವೀನ್ ಪಾಲ್ಗೊಂಡಿದ್ದರು ಎಂದು ಸಂಚಾಲಕಿ ಕಬ್ಬಚ್ಚೀರ ರಶ್ಮಿ ಕಾರ್ಯಪ್ಪ ತಿಳಿಸಿದ್ದಾರೆ.