ಮಡಿಕೇರಿ ಅ. ೧೯ : ಪೆಟ್ರೋಲ್ ಬಾಂಬ್ ಸ್ಫೋಟಿಸುವ ಕುರಿತು ನಗರಸಭಾ ಸದಸ್ಯ ಮುಸ್ತಫ ಹಾಗೂ ಬೆಟ್ಟಗೇರಿಯ ಉದ್ಯಮಿ ಅಬ್ದುಲ್ಲ ಅವರ ನಡುವೆ ನಡೆದಿರುವ ಮೊಬೈಲ್ ಸಂಭಾಷಣೆ ಹಾಗೂ ಇದರ ಹಿಂದೆ ಅಡಗಿರುವ ಶಕ್ತಿಗಳ ವಿರುದ್ಧ ಎನ್‌ಐಎ ಮೂಲಕ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ನಗರದ ೫೦ ಭಾಗಗಳಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸುವುದಲ್ಲದೆ, ಇದಕ್ಕಾಗಿ ೫೦ ರಿಂದ ೧ ಲಕ್ಷ ರೂ.ಗಳವರೆಗೆ ಹಣ ಸಂಗ್ರಹಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಪೊಲೀಸರು ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು. ಬದಲಿಗೆ ಇದರ ಹಿಂದಿರುವ ಷಡ್ಯಂತ್ರವನ್ನು ಪತ್ತೆ ಹಚ್ಚಿ ಮುಂದೆ ಎದುರಾಗಬಹುದಾದ ಅನಾಹುತವÀನ್ನು ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಇಬ್ಬರನ್ನು ತೀವ್ರ ತನಿಖೆಗೆ ಒಳಪಡಿಸಿದರೆ ಮತ್ತಷ್ಟು ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆಗಳಿವೆ. ಈ ಹಿಂದೆ ಬೋಯಿಕೇರಿ ಬಳಿ ಯೋಧನ ವಾಹನ ಅಪಘಾತಕ್ಕೀಡಾದಾಗ ಇದೇ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಗೂ ಆತನ ಬೆಂಬಲಿಗರು ಹಲ್ಲೆ ನಡೆಸಿ ಆತಂಕ ಸೃಷ್ಟಿಸಿದ್ದರು. ಇದೀಗ ನಗರಸಭಾ ಸದಸ್ಯನೊಬ್ಬ ಹಿಂದೂಗಳ ಮೇಲೆ ಪೆಟ್ರೋಲ್ ಬಾಂಬ್ ಸ್ಫೋಟಿಸುವ ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಪಕ್ಷದ ವರಿಷ್ಠ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ವಿನಾಕಾರಣ ಕೊಡಗಿನಲ್ಲಿ ಅಶಾಂತಿ ಸೃಷ್ಟಿಸುವ ಷಡ್ಯಂತ್ರಗಳು ಮರುಕಳಿಸುತ್ತಲೇ ಇದ್ದು, ಪೆಟ್ರೋಲ್ ಬಾಂಬ್ ಸ್ಫೋಟಿಸುವ ಪ್ರಕರಣ ಸೇರಿದಂತೆ ಎಲ್ಲಾ ಘಟನಾವಳಿಗಳ ಕುರಿತು ಎನ್‌ಐಎ ತನಿಖೆ ತೀವ್ರಗೊಳ್ಳಬೇಕೆಂದು ಮಹೇಶ್ ಜೈನಿ ಒತ್ತಾಯಿಸಿದ್ದಾರೆ.