ಮುಳ್ಳೂರು, ಅ. ೧೯: ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಭತ್ತದ ಗದ್ದೆಗಳ ಮೇಲೆ ದಾಳಿ ನಡೆಸಿ ಫಸಲು ನಾಶಪಡಿಸುತ್ತಿದೆ. ೩ ಕಾಡಾನೆಗಳ ಹಿಂಡು ಅಪ್ಪಶೆಟ್ಟಳ್ಳಿ ಗ್ರಾಮದ ಅರಣ್ಯದಲ್ಲಿ ಬೀಡುಬಿಟ್ಟಿವೆೆ. ಕಳೆದ ೩ ದಿನಗಳಿಂದ ಅಪ್ಪಶೆಟ್ಟಳ್ಳಿ ಗ್ರಾಮದ ಅರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ರಾತ್ರಿ ವೇಳೆಯಲ್ಲಿ ರೈತರ ಗದ್ದೆ, ತೋಟಗಳಿಗೆ ನುಗ್ಗಿ ಫಸಲಿಗೆ ಬಂದ ಬಾಳೆ, ತೆಂಗು, ಅಡಿಕೆ ಗಿಡಗಳನ್ನು ನಾಶಪಡಿಸುತ್ತಿವೆ.
ನಿರಂತರ ೩ ದಿನಗಳಿಂದ ಅಪ್ಪಶೆಟ್ಟಳ್ಳಿ ಗ್ರಾಮದ ರೈತರಾದ ವಿಜಯ್ಕುಮಾರ್, ರಕ್ಷಿತ್, ಚಂದ್ರಕಾAತ್, ಹೇಮಂತ್ಕುಮಾರ್, ಶಿವು, ಕಿರಣ್ಕುಮಾರ್, ವಿಶ್ವನಾಥ್, ಸುಧಾಕರ್, ಆದರ್ಶ, ರಾಜು, ಉಮೇಶ್ ಮುಂತಾದ ರೈತರಿಗೆ ಸೇರಿದ ಗದ್ದೆ ಮತ್ತು ತೋಟಗಳಿಗೆ ನುಸುಳಿದ ಕಾಡಾನೆ ಹಿಂಡು ಫಸಲಿನ ನಾಶದ ಜೊತೆಗೆ ನೀರಾವರಿ ಕೃಷಿಗೆ ಬಳಸುವ ಪೈಪ್, ಡ್ರಮ್ ಮುಂತಾದ ಕೃಷಿ ಪರಿಕರಗಳನ್ನು ಹಾನಿಪಡಿಸಿವೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಓಡಿಸುವಂತೆ ಗ್ರಾಮದ ರೈತರು ಆಗ್ರಹಿಸಿದ್ದಾರೆ.
-ಭಾಸ್ಕರ ಮುಳ್ಳೂರು