ಶನಿವಾರಸಂತೆ, ಅ. ೧೯: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದ ಕಾಫಿ ತೋಟಗಳಲ್ಲಿ ೩ ದಿನಗಳಿಂದ ಬೀಡುಬಿಟ್ಟಿರುವ ಮರಿ ಸೇರಿ ೩ ಕಾಡಾನೆಗಳು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.

ರೈತರಾದ ಕಿರಣ್, ಮಂಜುನಾಥ್, ಪುಟ್ಟಪ್ಪ, ಸುನೀಲ್ ಅವರ ಗದ್ದೆಗಳಲ್ಲಿ ಭತ್ತದ ಬೆಳೆ ಹಾಗೂ ಜಯಪ್ಪ, ವಿಜಯ್, ರಕ್ಷಿತ್, ಮಧುಕರ್ ಇತರರ ತೋಟಗಳಲ್ಲಿ ಕಾಫಿ, ಅಡಿಕೆ, ಮೆಣಸು, ಬಾಳೆ ಬೆಳೆಗಳು ನಾಶವಾಗಿವೆ. ಕಾಫಿ ತೋಟಗಳಲ್ಲಿ ಸ್ಪೆç ಮಾಡಲು ಇರಿಸಿದ್ದ ಡ್ರಮ್‌ಗಳು ಹಾಗೂ ಪೈಪುಗಳು ಮತ್ತಿತರರ ವಸ್ತುಗಳನ್ನು ನಷ್ಟಪಡಿಸಿವೆ.

ಆನೆಗಳು ರಾತ್ರಿ ವೇಳೆ ತೋಟಗಳಲ್ಲಿ ಸಂಚರಿಸುತ್ತಿದ್ದು, ಅರಣ್ಯ ಇಲಾಖೆಯವರೊಂದಿಗೆ ಗ್ರಾಮಸ್ಥರು ಸೇರಿ ೨ ದಿನಗಳಿಂದ ಆನೆಗಳನ್ನು ಕಾಡಿಗಟ್ಟಲು ಹರಸಾಹಸಪಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಅವರು ಪ್ರತಿಕ್ರಿಯಿಸಿ, ಕಳೆದ ವಾರ ಬಿಹಾಳ, ಮಾದ್ರೆ ಗ್ರಾಮಗಳಲ್ಲಿ ನುಗ್ಗಿ ದಾಂಧಲೆ ಎಬ್ಬಿಸಿದ ಕಾಡಾನೆಗಳೇ ರಾತ್ರಿ ವೇಳೆ ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಸಂಚರಿಸುತ್ತಿವೆ. ಆನೆಗಳನ್ನು ಯಸಳೂರು ಮೀಸಲು ಅರಣ್ಯದತ್ತ ಓಡಿಸಲು ಕ್ರಮಕೈಗೊಳ್ಳಲಾಗಿದೆ. ಅನೇಕ ರೈತರ ತೋಟಗಳಲ್ಲಿ ಬೆಳೆ ಹಾನಿಯಾಗಿದ್ದು, ಪರಿಹಾರಕ್ಕೆ ಮನವಿ ಸಲ್ಲಿಸಿದ್ದು, ಕ್ರಮಕ್ಕಾಗಿ ವರದಿ ಕಳುಹಿಸಲಾಗಿದೆ ಎಂದರು.