ಯೋಧರೊಂದಿಗೆ ಮೋದಿ ದೀಪಾವಳಿ ಆಚರಣೆ
ನವದೆಹಲಿ, ಅ. ೧೭: ಕಳೆದ ಬಾರಿ ಜಮ್ಮು ಕಾಶ್ಮೀರದ ನೌಷೇರಾ ಗಡಿಯಲ್ಲಿ ದೇಶ ಕಾಯುವ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯೂ ಯೋಧರೊಂದಿಗೆ ದೀಪಾವಳಿ ಆಚರಿಸಲು ನಿರ್ಧರಿಸಿದ್ದಾರೆ. ಪ್ರಧಾನಿ ಮೋದಿ ಅವರು ತಾ. ೨೧ ರಂದು ಕೇದಾರನಾಥ ಮತ್ತು ಬದರಿನಾಥ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಮೊದಲು ಕೇದಾರನಾಥಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ. ನಂತರ ಬದರಿನಾಥ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬದರಿನಾಥ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಕೈಗೊಂಡಿರುವ ಯೋಜನೆಗಳ ಪರಿಶೀಲನೆ ನಡೆಸಲಿದ್ದಾರೆ. ಮೋದಿ ಪ್ರಧಾನಿಯಾದ ನಂತರ ಪ್ರತಿ ವರ್ಷವೂ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರು ಗಡಿ ಗ್ರಾಮವಾದ ಮಾನಾಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಗ್ರಾಮಸ್ಥರು ಮತ್ತು ಸೈನಿಕರೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ ತಿಳಿದು ಬಂದಿದೆ.
ಎಐಸಿಸಿ ಅಧ್ಯಕ್ಷ ಚುನಾವಣೆ - ಬಳ್ಳಾರಿಯಲ್ಲಿ ರಾಹುಲ್ ಮತ ಚಲಾವಣೆ
ಬೆಂಗಳೂರು, ಅ. ೧೭: ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಆರಂಭವಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಳ್ಳಾರಿಯಲ್ಲಿ ತಮ್ಮ ಮತ ಹಕ್ಕು ಚಲಾಯಿಸಿದರು. ‘ಭಾರತ್ ಜೋಡೊ ಯಾತ್ರೆ' ಕೈಗೊಂಡಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಪ್ರಸ್ತುತ ಬಳ್ಳಾರಿಯಲ್ಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಸಂಗನಕಲ್ಲು ವಿಶ್ರಾಂತಿ ತಾಣದಲ್ಲಿ ವ್ಯವಸ್ಥೆ ಮಾಡಿರುವ ವಿಶೇಷ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತದಾನ ಹಿನ್ನೆಲೆಯಲ್ಲಿ ಪಾದಯಾತ್ರೆ ಮೊಟಕುಗೊಳಿಸಲು ಸಾಧ್ಯವಿಲ್ಲದ ಕಾರಣ, ರಾಹುಲ್ ಗಾಂಧಿ ಹಾಗೂ ಅವರೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಿರುವ ೪೦ ಮಂದಿ ಸದಸ್ಯರಿಗೆ ಸಂಗನಕಲ್ಲು ವಿಶ್ರಾಂತಿ ತಾಣದಲ್ಲಿ ವಿಶೇಷ ಮತಗಟ್ಟೆ ವ್ಯವಸ್ಥೆ ಮಾಡಲಾಗಿತ್ತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಒಟ್ಟಾರೆ ೯ ಸಾವಿರಕ್ಕೂ ಅಧಿಕ ಮಂದಿ ಎಐಸಿಸಿ ಪ್ರತಿನಿಧಿಗಳು ಮತ ಚಲಾಯಿಸುವ ಹಕ್ಕು ಹೊಂದಿದ್ದು, ಕರ್ನಾಟಕದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು ೪೯೪ ಮಂದಿ ಪ್ರತಿನಿಧಿಗಳು ಹಕ್ಕು ಚಲಾಯಿಸಲಿದ್ದಾರೆ. ಅಕ್ಟೋಬರ್ ೧೯ ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ನಿಷ್ಠಾವಂತ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದಲ್ಲಿ ಬದಲಾವಣೆ ಬಯಸುತ್ತಿರುವ ನಾಯಕ ಶಶಿ ತರೂರ್ ಅವರ ಭವಿಷ್ಯ ಅಕ್ಟೋಬರ್ ೧೯ ರಂದು ನಿರ್ಧಾರವಾಗಲಿದೆ.
ಪಿಟ್‌ಬುಲ್ ನಾಯಿ ಸೇರಿದಂತೆ ೩ ತಳಿಗಳಿಗೆ ನಿಷೇಧ
ಘಾಜಿಯಾಬಾದ್, ಅ. ೧೭: ಇತ್ತೀಚಿನ ದಿನಗಳಲ್ಲಿ ಪಿಟ್‌ಬುಲ್ ತಳಿಯ ನಾಯಿಗಳು ಮಾರಣಾಂತಿಕ ದಾಳಿ ನಡೆಸುತ್ತಿರುವುದು ವರದಿಯಾಗುತ್ತಿದ್ದು, ಘಾಜಿಯಾಬಾದ್ ಸ್ಥಳೀಯ ಆಡಳಿತ ಪಿಟ್ ಬುಲ್ ಸೇರಿದಂತೆ ೩ ತಳಿಗಳಿಗೆ ನಿಷೇಧ ವಿಧಿಸಿದೆ. ನಗರದಲ್ಲಿ ಪಿಟ್‌ಬುಲ್ ತಳಿಯ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಷ್ಟೇ ಅಲ್ಲದೇ ಒಂದು ಕುಟುಂಬ ಒಂದು ನಾಯಿಯನ್ನು ಸಾಕಿಕೊಳ್ಳುವುದಕ್ಕೆ ಮಾತ್ರ ಅವಕಾಶವಿರಲಿದೆ. ಸಾಕು ನಾಯಿಗಳಿಂದ ದಾಳಿಗಳು ಹೆಚ್ಚುತ್ತಿರುವ ಪ್ರಕರಣದ ಹಿನ್ನೆಲೆಯಲ್ಲಿ ಘಾಜಿಯಾಬಾದ್ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಪಿಟ್ಬುಲ್, ರಾಟ್‌ವೈಲರ್ ಮತ್ತು ಡೊಗೊ ಅರ್ಜೆಂಟಿನೋ ತಳಿಗಳ ನಾಯಿಗಳನ್ನು ಸಾಕುವುದಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ನ.೧ ರಿಂದ ನಾಯಿ ಸಾಕುವುದಕ್ಕೆ ಮಾಲೀಕರಿಗೆ ಪರವಾನಗಿ ನೀಡಲಾಗುತ್ತದೆ ಹಾಗೂ ಈಗಾಗಲೇ ನಾಯಿ ಸಾಕುತ್ತಿರುವ ಮಾಲೀಕರಿಗೆ ನೋಂದಣಿ ಮಾಡಿಕೊಳ್ಳುವುದಕ್ಕೆ ೨ ತಿಂಗಳ ಅವಕಾಶ ನೀಡಲಾಗುತ್ತದೆ.
ಕಾಶ್ಮೀರದಲ್ಲಿ ಹತ್ಯೆಗಳು ನಿಂತಿಲ್ಲ - ಫಾರೂಕ್ ಅಬ್ದುಲ್ಲಾ
ಶ್ರೀನಗರ, ಅ. ೧೭: ನ್ಯಾಯ ಸಿಗದ ಹೊರತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಉದ್ದೇಶಿತ ಹತ್ಯೆಗಳು ನಿಲ್ಲುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಹೇಳಿದ್ದಾರೆ. ಜಮ್ಮು ವಿಭಾಗದ ಜಿಲ್ಲಾ ರಿಯಾಸಿ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನ್ಯಾಯ ಸಿಗುವವರೆಗೂ ಹತ್ಯೆಗಳು ನಿಲ್ಲುವುದಿಲ್ಲ, ಬಿಜೆಪಿಯವರು ೩೭೦ ನೇ ವಿಧಿಯಿಂದಾಗಿ ಇಂತಹ ಹತ್ಯೆಗಳು ನಡೆಯುತ್ತಿವೆ. ಆದರೆ ಈಗ ಅದನ್ನು ರದ್ದುಗೊಳಿಸಲಾಗಿದೆ, ಆದರೂ ಹತ್ಯೆಗಳ ಪ್ರಕ್ರಿಯೆ ಏಕೆ ನಿಲ್ಲುತ್ತಿಲ್ಲ. ಇದಕ್ಕೆ ಯಾರು ಹೊಣೆ? ಕಾಶ್ಮೀರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಿಜೆಪಿ ಸರಕಾರ ಹೇಳುತ್ತಿದೆ, ಆದರೆ ಪರಿಸ್ಥಿತಿ ಎಲ್ಲಿ ಉತ್ತಮವಾಗಿದೆ? ಕಾಶ್ಮೀರಿ ಪಂಡಿತನನ್ನು ಏಕೆ ಕೊಂದರು?ಎAದು ಪ್ರಶ್ನಿಸಿದ್ದಾರೆ. ಫಾರೂಖ್ ಅಬ್ದುಲ್ಲಾ ಅವರ ಈ ಹೇಳಿಕೆಗೆ ಎಲ್ಲೆಡೆ ವಿರೋಧಗಳು ವ್ಯಕ್ತವಾಗುತ್ತಿವೆ.
ಆಧುನಿಕ ಭಗೀರಥ ಕಾಮೇಗೌಡ ವಿಧಿವಶ
ಮಂಡ್ಯ, ಅ. ೧೭: ಆಧುನಿಕ ಭಗೀರಥ ಖ್ಯಾತಿಯ, ೧೬ ಕೆರೆಗಳನ್ನು ನಿರ್ಮಿಸಿದ್ದ ಕುರಿಗಾಯಿ ಕಾಮೇಗೌಡ (೮೪) ತಾ. ೧೭ರ ಬೆಳಗ್ಗೆ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾಮೇಗೌಡ ನಿಧನ ಹೊಂದಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡರು ತಮ್ಮೂರಿನಲ್ಲಿ ಬೆಟ್ಟ ಗುಡ್ಡ ಅಗೆದು ಪ್ರಾಣಿ ಪಕ್ಷಿಗಳಿಗಾಗಿ ೧೬ ಕೆರೆಗಳನ್ನು ನಿರ್ಮಿಸಿ ನೀರು ಹರಿಸಿ ಆಧುನಿಕ ಭಗೀರಥ ಎಂದು ಜನಪ್ರಿಯತೆ ಗಳಿಸಿದ್ದರು. ಅವರ ಬಗ್ಗೆ ಪ್ರಧಾನಿ ಮೋದಿಯವರು ಕೂಡ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಹಾಡಿ ಹೊಗಳಿದ್ದರು. ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗಲಿ ಎಂದು ಕಾಮೇಗೌಡ ಕೈಯಾರೆ ೧೬ ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ಕುರಿ ಕಾಯುವ ಕೆಲಸವನ್ನು ಹವ್ಯಾಸವಾಗಿ ಮಾಡುತ್ತಿದ್ದರು. ಕಾಮೇಗೌಡರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಕಾಮೇಗೌಡರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಗಣ್ಯರು ಕಂಬನಿ ಮಿಡಿದಿದ್ದಾರೆ.
ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳು ನಿರ್ಧಾರ
ಬೆಂಗಳೂರು, ಅ. ೧೭: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬAಧ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಇದರಲ್ಲಿ ಸಿಎಂ ಅವರದೇ ಪರಮಾಧಿಕಾರ ಎಂದು ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಹೇಳಿದ್ದಾರೆ. ಚಿಕ್ಕೋಡಿ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿದ್ದು, ೧೮ ರಾಜ್ಯಗಳಲ್ಲಿ ಸರ್ಕಾರವಿದೆ. ಪಕ್ಷಕ್ಕೆ ಸಂಬAಧಿಸಿ ರಾಜ್ಯ-ಕೇಂದ್ರೀಯ ಚುನಾವಣಾ ಸಮಿತಿಗಳೂ ಇವೆ. ಅಭ್ಯರ್ಥಿ ಆಯ್ಕೆಯಂತಹ ವಿಚಾರದಲ್ಲಿ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.ಚುನಾವಣಾ ಅಧಿಸೂಚನೆ ಹೊರಬಿದ್ದಾಗ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದರು. ಯತ್ನಾಳ್ ಅವರ ವಿರುದ್ಧ ಕ್ರಮ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಕ್ರಮ ಕೈಗೊಳ್ಳಲು ಬಯಸುತ್ತೀರಾ? ಕ್ರಮ ಕೈಗೊಳ್ಳೋಣ ಎಂದು ತಿಳಿಸಿದರು. ಬೆಳಗಾವಿಯ ಬಿಜೆಪಿಯಲ್ಲಿ ಯಾವುದೇ ಜಗಳಗಳಿಲ್ಲ; ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.