ಸೋಮವಾರಪೇಟೆ, ಅ. ೧೭: ಅರಣ್ಯದಂಚಿನಲ್ಲಿ ಅನಾದಿಕಾಲದಿಂದಲೂ ವಾಸಿಸುತ್ತಿರುವ ಮಂದಿಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಂಟಿ ಕಾರ್ಯಕ್ರಮದ ಮೂಲಕ ಹಕ್ಕುಪತ್ರ ವಿತರಿಸಲಾಗುತ್ತಿದೆ. ಫಲಾನುಭವಿಗಳು ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಹಕ್ಕುಪತ್ರ ಪಡೆಯಬೇಕೆಂದು ಶಾಸಕ ಅಪ್ಪಚ್ಚುರಂಜನ್ ಹೇಳಿದರು.

ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಹರಿಹರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಲವಷ್ಟು ಮಂದಿ ಇಂದಿಗೂ ತಮ್ಮ ಮನೆಯ ಜಾಗಕ್ಕೆ ಅಗತ್ಯ ದಾಖಲೆಗಳನ್ನು ಹೊಂದಿಕೊAಡಿಲ್ಲ. ಇದರಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನವಸತಿ ಪ್ರದೇಶವಾಗಿದ್ದರೂ ಕೆಲವು ಗ್ರಾಮಗಳ ದಾಖಲೆಗಳಲ್ಲಿ ಅರಣ್ಯ ಸೇರಿದಂತೆ ಇನ್ನಿತರ ಕಲಂಗಳಿವೆ. ಇಂತಹ ಪ್ರಕರಣಗಳನ್ನು ಬಗೆಹರಿಸಿ ಹಕ್ಕುಪತ್ರ ನೀಡಲು ಅರಣ್ಯ ಹಕ್ಕು ಸಮಿತಿ ರಚಿಸಲಾಗಿದೆ ಎಂದು ರಂಜನ್ ಹೇಳಿದರು.

ಈ ಹಿನ್ನೆಲೆ ಫಲಾನುಭವಿಗಳು ತಮ್ಮ ವಾಸದ ಮನೆಯ ದಾಖಲಾತಿಗಳನ್ನು ಸಮರ್ಪಕಗೊಳಿಸಿಕೊಳ್ಳಲು ಸಮಿತಿಯ ಸಭೆಗಳನ್ನು ನಡೆಸಿ ಅನುಮೋದನೆ ಪಡೆಯುವುದು ಅವಶ್ಯ. ಈ ನಿಟ್ಟಿನಲ್ಲಿ ಎಲ್ಲರೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕೆಂದು ಶಾಸಕರು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ರಾಜಪ್ಪ ವಹಿಸಿದ್ದರು. ಡಿ.ಎಫ್.ಓ. ಎ.ಟಿ. ಪೂವಯ್ಯ, ಎ.ಸಿ.ಎಫ್. ಗೋಪಾಲ್, ಆರ್.ಎಫ್.ಓ. ಚೇತನ್, ಡಿ.ಆರ್.ಎಫ್.ಓ. ಜಗದೀಶ್, ಸಮಾಜ ಕಲ್ಯಾಣಾಧಿಕಾರಿಗಳಾದ ಚಂದ್ರಪ್ಪ, ಬಾಲಕೃಷ್ಣ ರೈ, ಕಂದಾಯ ಇಲಾಖಾಧಿಕಾರಿಗಳು, ಅರಣ್ಯ ಇಲಾಖಾ ಸಿಬ್ಬಂದಿಗಳು, ತೋಟಗಾರಿಕಾ ಇಲಾಖಾಧಿಕಾರಿಗಳು, ಪಂಚಾಯಿತಿ ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.