ಸೋಮವಾರಪೇಟೆ, ಅ. ೧೭ : ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ನಳ್ಳಿ-ಕುಮಾರಳ್ಳಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ನಡುವೆ ಉದ್ಭವಿಸಿರುವ ಅರಣ್ಯ ಗಡಿ ಗುರುತು ವಿವಾದ ಶಾಸಕರ ಕಚೇರಿಯ ಮೆಟ್ಟಿಲು ಹತ್ತಿದ್ದು, ಶಾಸಕ ಅಪ್ಪಚ್ಚು ರಂಜನ್ ಉಪಸ್ಥಿತಿಯಲ್ಲಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಆರೋಪಿಸಿದರು. ಈ ಹಿಂದೆ ಪುಷ್ಪಗಿರಿ ವನ್ಯಜೀವಿಧಾಮ ಅರಣ್ಯ ವಲಯ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಕೊತ್ನಳ್ಳಿ-ಕುಮಾರಳ್ಳಿ ಗ್ರಾಮಸ್ಥರ ಸಮ್ಮುಖದೊಂದಿಗೆ ಸೇರಿ ಜಂಟಿ ಸರ್ವೆ ನಡೆಸಿ ಗೆಜೆಟ್ ನೋಟಿಫಿಕೇಷನ್ ಆಗಿರುವ ಪುಷ್ಪಗಿರಿ ವೈಲ್ಡ್ ಲೈಫ್ನ ಬೌಂಡರಿ ಗುರುತು ಮಾಡಿ ಜಿಪಿಎಸ್ ‘ವರ್ಕಿಂಗ್ ಪ್ಲಾನ್’ ಅನ್ವಯ ಗಡಿ ಗುರುತಿಸಲಾಗಿತ್ತು.
ಆದರೆ ಪುಷ್ಪಗಿರಿ ವನ್ಯಜೀವಿಧಾಮ ವಲಯದ ಫಾರೆಸ್ಟರ್ ಶಶಿ ಅವರು, ಈ ಹಿಂದೆ ಮಾಡಿದ್ದ ಗಡಿ ಗುರುತು ಬದಲಿಗೆ ತಮ್ಮ ಮನಸೋಯಿಚ್ಚೆ ಗಡಿ ಗುರುತಿಸಿ ಗಡಿಕಲ್ಲುಗಳನ್ನು ನೆಟ್ಟಿದ್ದಾರೆ. ನೈಜ ಗಡಿಯ ಬದಲಿಗೆ ಒಳಗಿನ ಭೂ ಪ್ರದೇಶಕ್ಕೆ ಗಡಿಯನ್ನು ಗುರುತಿಸಿ ಕಲ್ಲು ಹಾಕಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಭಾರೀ ಸಮಸ್ಯೆಯಾಗಲಿದೆ ಎಂದು ಸ್ಥಳೀಯರು ಆರೋಪಿಸಿದರು.
ಇದರೊಂದಿಗೆ ಈ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯಿದ್ದು, ಸಂಜೆ ವೇಳೆ ಬೆಟ್ಟಹತ್ತಿ ಮೊಬೈಲ್ ಕರೆ ಮಾಡಿ ಮೊಬೈಲ್ ಟಾರ್ಚ್ ಹಾಕಿಕೊಂಡು ಮನೆಗೆ ಬಂದರೆ ಕೂಡಲೇ ಹಿಂಬಾಲಿಸಿಕೊAಡು ಬರುವ ಫಾರೆಸ್ಟರ್ ಶಶಿ ಅವರು, ಮನೆಯೊಳಗೆ ನುಗ್ಗಿ ಅನಾವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಹಿನ್ನೆಲೆ ಅವರನ್ನು ತಕ್ಷಣ ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಹಿಂದೆ ೮೭೫೬ ಎಕರೆ ಪುಷ್ಪಗಿರಿ ವನ್ಯಜೀವಿಧಾಮದ ಪ್ರದೇಶವಿದ್ದುದು ಇದೀಗ ೧೧,೪೯೪ಕ್ಕೆ ಏರಿಕೆ ಮಾಡಲಾಗಿದೆ. ಆರ್ಟಿಸಿಯಲ್ಲಿ ಹೆಚ್ಚುವರಿ ಭೂ ಪ್ರದೇಶವನ್ನು ಸೇರಿಸಲಾಗಿದೆ. ಇದರಿಂದಾಗಿ ಈ ಭಾಗದ ಸಾರ್ವಜನಿಕರು ಅರ್ಜಿ ನಮೂನೆ ೫೭, ೫೦, ೯೪ ಸಿ ಅಡಿಯಲ್ಲಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿದರೂ ಮಂಜೂರಾಗುತ್ತಿಲ್ಲ. ಕೋವಿ ಪರವಾನಗಿ ಲಭಿಸುತ್ತಿಲ್ಲ ಎಂದು ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ದೂರುಗಳ ಸುರಿಮಳೆಗೈದರು.
ಗ್ರಾಮಸ್ಥರು ತಮ್ಮ ತೋಟಗಳಿಗೆ ತೆರಳಲು, ದನಕರುಗಳನ್ನು ಮೇಯಿಸಲು ಸಮಸ್ಯೆಯಾಗಿದೆ. ಈ ಹಿಂದೆ ಗ್ರಾಮಸ್ಥರ ಸಮ್ಮುಖದೊಂದಿಗೆ ಗುರುತಿಸಿದ್ದ ಗಡಿಗೆ ಮಾತ್ರ ಕಂಬಗಳನ್ನು ಅಳವಡಿಸಲು ಇಲಾಖೆ ಕ್ರಮವಹಿಸಬೇಕು. ಇದೀಗ ಮುಕ್ಕಾಲು ಕಿ.ಮೀ. ಗ್ರಾಮದ ಕಡೆಗೆ ಹಾಕಿರುವ ಕಂಬಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರ ಮನವಿ ಆಲಿಸಿದ ಶಾಸಕ ರಂಜನ್, ಅರಣ್ಯ ಇಲಾಖೆ, ಪುಷ್ಪಗಿರಿ ವನ್ಯಜೀವಿಧಾಮ ವಲಯ, ಸರ್ವೆ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮಸ್ಥರೊಂದಿಗೆ ಮತ್ತೊಮ್ಮೆ ಸರ್ವೆ ನಡೆಸಿ ವೈಜ್ಞಾನಿಕವಾಗಿ ಗಡಿ ಗುರುತು ಮಾಡಬೇಕು. ಇಲಾಖೆಯಿಂದ ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ವನ್ಯಜೀವಿ ವಲಯದ ಎಸಿಎಫ್ ಶ್ರೀನಿವಾಸ್ ನಾಯಕ್, ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್, ಆರ್ಎಫ್ಓಗಳಾದ ಚೇತನ್, ವಿಮಲ್ಬಾಬು ಅವರಿಗೆ ಸೂಚಿಸಿದರು.
ಪುಷ್ಪಗಿರಿ ವನ್ಯಜೀವಿ ವಿಭಾಗದಲ್ಲಿ ಫಾರೆಸ್ಟರ್ ಆಗಿರುವ ಶಶಿ ಅವರನ್ನು ವರ್ಗಾಯಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ ಹಿನ್ನೆಲೆ, ಈ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ರಂಜನ್ ಭರವಸೆ ನೀಡಿದರು.
ಈ ಸಂದರ್ಭ ಕೊತ್ನಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಸಿ.ಕೆ. ರಾಮಚಂದ್ರ, ಕಾರ್ಯದರ್ಶಿ ಕೆ.ಪಿ. ರಾಜೇಶ್, ಕುಮಾರಳ್ಳಿ ಅಧ್ಯಕ್ಷ ಉದಯಕುಮಾರ್, ಕುಡಿಗಾಣ ಗ್ರಾಮಾಧ್ಯಕ್ಷ ದಿನೇಶ್ವಾಸು, ಜಿ.ಪಂ. ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜೀ ಸದಸ್ಯ ಬಿ.ಎ. ಧರ್ಮಪ್ಪ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.