ಗೋಣಿಕೊಪ್ಪ, ಅ. ೧೭: ಶೋಷಣೆಯಿಂದ ಕೃಷಿಕನನ್ನು ಹೊರ ತರಲು ಕೇಂದ್ರದ ಯೋಜನೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಸಮ್ಮಾನ್ ಸಮ್ಮೇಳನದ ನೇರ ವೀಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೃಷಿ ಪ್ರಧಾನ ರಾಷ್ಟçದಲ್ಲಿ ರೈತ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾನೆ. ಬೆಳೆದ ಬೆಳೆಗೆ ನೇರ ಮಾರುಕಟ್ಟೆ ವ್ಯವಸ್ಥೆ ಕೂಡ ಮುಖ್ಯ. ಇದರಂತೆ ಉತ್ತಮ ಬೆಳೆ, ಎಲ್ಲ ರೀತಿಯ ಕೃಷಿ ಪ್ರೋತ್ಸಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಗಳು ಸಹಕಾರಿಯಾಗುತ್ತಿದೆ. ಬೆಳೆಗೆ ಬೇಕಾದ ಗೊಬ್ಬರ ಖರೀದಿ ವಿಚಾರದಲ್ಲಿ ಕೂಡ ಶೋಷಣೆಯಾಗುತ್ತಿತ್ತು. ಇದನ್ನು ತಪ್ಪಿಸಲು ಒಂದು ದೇಶ, ಒಂದು ಗೊಬ್ಬರ ಎಂಬ ನಿಯಮದಡಿಯಲ್ಲಿ ಗೊಬ್ಬರ ಒದಗಿಸಲು ಮುಂದಾಗಿದೆ. ರೈತನನ್ನು ಸ್ವಾವಲಂಬಿ, ಸ್ವಾಭಿಮಾನಿಯನ್ನಾಗಿಸಲು ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ಶೇ. ೬೦ ರಷ್ಟು ಕೃಷಿಗೆ ಆದ್ಯತೆ ನೀಡಲಾಗಿತ್ತು. ಇದೀಗ ಮತ್ತಷ್ಟು ಬೆಂಬಲ ರೈತರಿಗೆ ದೊರೆಯುವಂತಾಗಿದೆ ಎಂದರು. ಕೃಷಿ ಪೂರಕ ಕಾರ್ಯಕ್ರಮಗಳ ಮೂಲಕ ಬೆಳೆ ಖರೀದಿಗೆ ಅವಕಾಶ, ಉದ್ಯೋಗ ಸೃಷ್ಟಿ ಹೆಚ್ಚಾಗಲಿದೆ. ಯುವ ಸಮೂಹವನ್ನು ಕೃಷಿಯತ್ತ ಸೆಳೆಯುವ ಯೋಜನೆ ಕೂಡ ಇದೆ ಎಂದರು.
ಕೆವಿಕೆ ಪ್ರಭಾರ ಮುಖ್ಯಸ್ಥ ಡಾ. ಕೆ.ಎ. ದೇವಯ್ಯ ಮಾತನಾಡಿ, ಕಿಸಾನ್ ಸಮೃದ್ಧಿ ಕೇಂದ್ರದ ಮೂಲಕ ಇಂದೇ ಮಳಿಗೆಯಲ್ಲಿ ಭಾರತ್ ಹೆಸರಿನಲ್ಲಿ ಒಂದೇ ರೀತಿಯ ಗೊಬ್ಬರ ದೊರೆಯುತ್ತದೆ. ಕೃಷಿಯಲ್ಲಿ ಉದ್ಯಮ ಆರಂಭಿಸಲು ಹೆಚ್ಚು ಪ್ರೋತ್ಸಾಹ ದೊರೆಯಲಿದೆ. ಕೃಷಿ ಉತ್ಪನ್ನ, ಬೆಳೆ ಮಾರುಕಟ್ಟೆ ವ್ಯವಸ್ಥೆಯಲ್ಲಿ ಲಾಜಿಸ್ಟಿಕ್ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕಿ ಶಭಾನಾ ಶೇಖ್ ಮಾತನಾಡಿ, ಕೃಷಿ ಉತ್ಪನ್ನ, ಗೊಬ್ಬರ, ತಂತ್ರಜ್ಞಾನ ಮತ್ತು ಸಲಹೆ ಮಾರ್ಗದರ್ಶನ ಕೇಂದ್ರವಾಗಿ ರಸಗೊಬ್ಬರ ಮಾರಾಟ ಕೇಂದ್ರಗಳು ಅಭಿವೃದ್ಧಿ ಹೊಂದಲಿದೆ. ಒಂದೇ ಮಳಿಗೆಯಲ್ಲಿ ಎಲ್ಲವೂ ದೊರೆಯುವಂತೆ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು. ಗ್ರಾ. ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್, ಬಗರ್‌ಹುಕುಂ ಸಾಗುವಳಿ ಸಮಿತಿ ತಾಲೂಕು ಅಧ್ಯಕ್ಷ ಗಿರೀಶ್ ಗಣಪತಿ, ಜಿ. ಪಂ. ಮಾಜಿ ಸದಸ್ಯ ಸಿ.ಕೆ. ಬೋಪಣ್ಣ, ವಿಜ್ಞಾನಿಗಳಾದ ಡಾ. ವೀರೇಂದ್ರಕುಮಾರ್, ಡಾ.ಬಿ. ಪ್ರಭಾಕರ್, ಡಾ. ಎಂ.ಎನ್. ಹರೀಶ್, ಡಾ. ಸುರೇಶ್ ಇದ್ದರು.