(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಅ. ೧೭: ದಕ್ಷಿಣ ಕೊಡಗಿನ ಬಿ. ಶೆಟ್ಟಿಗೇರಿ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ, ಕೊಂಗಣ, ನಾಂಗಾಲ, ವಿ.ಬಾಡಗ ಹಾಗೂ ರುದ್ರಗುಪ್ಪೆ ಸೇರಿದಂತೆ ಇತರ ಭಾಗದಲ್ಲಿ ನಿರಂತರ ಕಾಡಾನೆಗಳ ಹಿಂಡು ರೈತರ ಭತ್ತದ ಗದ್ದೆಗಳಿಗೆ ಮುಂಜಾನೆಯ ವೇಳೆ ದಾಳಿ ನಡೆಸುತ್ತಿದ್ದು ಗದ್ದೆಯಲ್ಲಿ ತೆನೆ ಕಟ್ಟಿರುವ ಭತ್ತದ ಫಸಲುಗಳು ಬಹುತೇಕ ಆನೆಗಳ ಪಾಲಾಗುತ್ತಿದೆ. ಪರಿಣಾಮ ಈ ಭಾಗದ ರೈತರಾದ ಕೊಲ್ಲೀರ ಬೋಪಣ್ಣ, ಪೂಣಚ್ಚ, ಚೇರಂಡ ಜಗನ್ ಸೇರಿದಂತೆ ಇನ್ನಿತರ ರೈತರು ತಮ್ಮ ಭತ್ತದ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ.
ಈ ಭಾಗದಲ್ಲಿ ಕಾಡಾನೆಯ ಹಿಂಡು ಎರಡು ಗುಂಪುಗಳಾಗಿ ರೈತರ ತೋಟ ಹಾಗೂ ಗದ್ದೆಗಳಲ್ಲಿ ಕಾಣಿಸಿ ಕೊಂಡಿದ್ದು ಇಲಾಖಾಧಿಕಾರಿಗಳಿಗೆ ಇವುಗಳನ್ನು ಹತೋಟಿಗೆ ತರುವಲ್ಲಿ ಸಾಧ್ಯವಾಗುತ್ತಿಲ್ಲ. ಬಹುತೇಕ ಕಾಡಾನೆಗಳ ಹಿಂಡು ಮುಂಜಾನೆಯ ೫ ಗಂಟೆ ಸುಮಾರಿಗೆ ಭತ್ತದ ಗದ್ದೆಗಳಿಗೆ ಇಳಿಯುತ್ತಿರುವುದರಿಂದ ಕಾಡಾನೆ ಗಳನ್ನು ಓಡಿಸಲು ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ.
ಸ್ಥಳೀಯ ಗ್ರಾಮಸ್ಥರೊಂದಿಗೆ ಡಿಆರ್ಎಫ್ಒ ತಂಡದ ಸಿಬ್ಬಂದಿಗಳು ಜಂಟಿಯಾಗಿ ಭತ್ತದ ಗದ್ದೆಗಳ ಸಮೀಪ ಠಿಕಾಣಿ ಹೂಡಿದರೂ ಆನೆಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಕಾಡಾನೆ ಗಳು ಮಾತ್ರ ಭತ್ತದ ಗದ್ದೆಗಳಿಗೆ ದಾಳಿ ಮಾಡುವುದು ಇನ್ನೂ ನಿಲ್ಲಿಸಿಲ್ಲ. ಇದರಿಂದ ಸಹಜವಾಗಿಯೇ ಈ ಭಾಗದ ರೈತರು ಇಲಾಖೆಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕೊಲ್ಲೀರ ಬೋಪಣ್ಣ, ಪೂಣಚ್ಚ ಹಾಗೂ ಚೇರಂಡ ಜಗನ್ರವರ ಸುಮಾರು ಹತ್ತು ಎಕರೆ ಭತ್ತದ ಗದ್ದೆಗಳಲ್ಲಿ ದಾಳಿ ನಡೆದಿದ್ದು ಉಳಿದ ಒಂದು ಎಕರೆ ಮಾತ್ರ ಕಾಡಾನೆಗಳ ದಾಳಿಗೆ ತುತ್ತಾಗಿಲ್ಲ. ಉಳಿದ ಭಾಗದ ಗದ್ದೆಗಳು ಕಾಡಾನೆಗಳ ಹಿಂಡಿನಿAದ ನಾಶಗೊಂಡಿವೆ. ಈ ಭಾಗದ ರೈತರು ಕಾಡಾನೆಗಳನ್ನು ಕೂಡಲೇ ಅರಣ್ಯಕ್ಕೆ ಅಟ್ಟುವಂತೆ ಇಲಾಖೆಯನ್ನು ಒತ್ತಾಯಿ ಸಿದ್ದಾರೆ. ತಪ್ಪಿದಲ್ಲಿ ಅನಿವಾರ್ಯವಾಗಿ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಇಳಿಯುವುದಾಗಿ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.