ಕೂಡಿಗೆ, ಅ. ೧೭: ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾ ಪಂಚಾಯಿತಿ ಮೂಲಕ ತಾಲೂಕು ಮಟ್ಟದಲ್ಲಿ ಎರಡೆರಡು ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಸೇರಿಸಲಾಗಿದೆ. ಅದರಂತೆ ಕುಶಾಲನಗರ ತಾಲೂಕಿನ ಶಿರಂಗಾಲ, ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳು ಸೇರಿವೆ. ಈ ಯೋಜನೆಯ ಅಡಿಯಲ್ಲಿ ನಡೆಯಬಹುದಾದ ಕಾಮಗಾರಿಗಳ ಸಮೀಕ್ಷೆಯನ್ನು ರಾಜ್ಯಮಟ್ಟದ ತಂಡ ಶಿರಂಗಾಲ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅಮೃತ ಗ್ರಾಮ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ತಡೆಗೋಡೆ ಆಟದ ಮೈದಾನ ನಿರ್ಮಾಣ, ಅಂಗನವಾಡಿ ಕೇಂದ್ರದ ಸೌಕರ್ಯಗಳು, ಆಸ್ಪತ್ರೆ ಕೇಂದ್ರದ ತಡೆಗೋಡೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ರೂ. ೨೫ ಲಕ್ಷ ಹಣವನ್ನು ನೀಡುತ್ತದೆ. ಅದರ ಮೂಲಕ ಅಭಿವೃದ್ಧಿಯ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಇದರನ್ವಯ ರಾಜ್ಯಮಟ್ಟದ ಗ್ರಾಮೀಣಾಭಿವೃದ್ಧಿ ಅಮೃತ ಗ್ರಾಮ ಯೋಜನೆ ಅಧಿಕಾರಿ ಸಂತೋಷ್ ಅವರ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಲತಾ, ಕಾರ್ಯದರ್ಶಿ ಕೆ.ಸಿ. ರವಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.