ಚೆಯ್ಯಂಡಾಣೆ, ಅ. ೧೬: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ, ಕರಡ, ಕಡಂಗದಲ್ಲಿ ಕಸ ವಿಲೇವಾರಿ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡ ಗ್ರಾಮ ಪಂಚಾಯಿತಿ, ಸಂಜೀವಿನಿ ಒಕ್ಕೂಟಕ್ಕೆ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಜವಾಬ್ದಾರಿ ವಹಿಸಲಾಗಿತ್ತು.
ಇದರ ಪ್ರಥಮ ಕಸ ಸಂಗ್ರಹಣೆ ವಾಹನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಚಾಲನೆ ನೀಡಿದರು. ನಂತರ ಚೆಯ್ಯಂಡಾಣೆ, ಕರಡ, ಕಡಂಗ ಪಟ್ಟಣಗಳಲ್ಲಿ ಅಂಗಡಿಗಳ ಹಾಗೂ ಮನೆಯ ಕಸಗಳನ್ನು ಸಂಜೀವಿನಿ ಒಕ್ಕೂಟದ ಸದಸ್ಯರು ಸಂಗ್ರಹಿಸಿ ವಾಹನದ ಮೂಲಕ ವಿಲೇವಾರಿ ಮಾಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಪಂಚಾಯಿತಿ ಸದಸ್ಯರಾದ ಕೋಡಿರ ವಿನೋದ್ ನಾಣಯ್ಯ, ಪೆಮ್ಮಂಡ ಕಾವೇರಮ್ಮ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರತ್ತು, ಎಂ.ಬಿ.ಕೆ. ವಸಂತಿ, ಕೃಷಿ ಸಖಿ ಬೀನ ಕುಮಾರಿ, ಪಶು ಸಖಿ ಮೀನಾಕ್ಷಿ, ವಾಹನ ಚಾಲಕಿ ಕವಿತಾ ಹಾಗೂ ಒಕ್ಕೂಟದ ಸದಸ್ಯರು ಹಾಜರಿದ್ದರು.