ಗುಡ್ಡೆಹೊಸೂರು, ಅ. ೧೨: ಇಲ್ಲಿಗೆ ಸಮೀಪದ ವಿರೂಪಾಕ್ಷಪುರ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕಾಲೋನಿಯ ಒಟ್ಟು ನಾಲ್ಕು ಮಂದಿ ಕಾವೇರಿ ನದಿಯ ಮತ್ತೊಂದು ಭಾಗದಲ್ಲಿ ಮೈಸೂರು ಜಿಲ್ಲೆಗೆ ಸೇರಿದ ಅರಣ್ಯದಲ್ಲಿ ಕಳೆದ ೩ ದಿನಗಳ ಹಿಂದೆ ಪ್ರಾಣಿಗಳ ಬೇಟೆಗೆ ತೆರಳಿದ್ದು, ಈ ಪೈಕಿ ಓರ್ವ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಬೇಟೆಗೆ ತೆರಳಿದ್ದ ಈ ತಂಡದಲ್ಲಿ ವಿನು, ಧರ್ಮ, ಯೋಗೇಶ್, ಈಶ್ವರ ಇದ್ದರು. ಆದರೆ ಆಟೋ ಚಾಲಕನಾಗಿದ್ದ ವಿನು ಎಂಬವನು ಗ್ರಾಮಕ್ಕೆ ಹಿಂತಿರುಗಲಿಲ್ಲ, ಅನುಮಾನಗೊಂಡ ವಿನು ಪತ್ನಿ ಕುಶಾಲನಗರ ಗ್ರಾಮಾಂತರ ಠಾಣೆಗೆ ತೆರಳಿ ಪತಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಾಳೆ.

ಇದೀಗ ಧರ್ಮ ಮಾತ್ರ ಗ್ರಾಮದಲ್ಲಿದ್ದು, ಯೋಗೇಶ್ ಮತ್ತು ಈಶ್ವರ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಧರ್ಮನನ್ನು ಕಾಣೆಯಾದ ವಿನು ಬಗ್ಗೆ ವಿಚಾರಿಸಿದಾಗ ಗೊಂದಲದ ಮತ್ತು ಅನುಮಾನಸ್ಪದ ಹೇಳಿಕೆ ನೀಡುತ್ತಿದ್ದಾನೆ. ಕಾವೇರಿ ನದಿಯಲ್ಲಿ ಮುಳುಗಿ ಹೋಗಿರುವುದಾಗಿ ಹೇಳುತ್ತಾನೆ. ಮತ್ತೊಮ್ಮೆ ಕಾಡಿನಲ್ಲಿ ನಾಪತ್ತೆಯಾಗಿರುವುದಾಗಿ ಪೊಲೀಸರಲ್ಲಿ ತಿಳಿಸುತ್ತಾನೆ. ವಿನು ಆಕಸ್ಮಿಕ ಸಾವನ್ನಪ್ಪಿದ್ದಾನೋ ಅಥವಾ ಕೊಲೆಯಾಗಿದ್ದಾನೋ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ತಂಡದವರು ಧರ್ಮನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತನ ಬಳಿ ಇದ್ದ ಎರಡು ಕೋವಿಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ವಿನುಗಾಗಿ ಗ್ರಾಮಸ್ಥರು ಮತ್ತು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

- ಗಣೇಶ್ ಕುಡೆಕಲ್