ಮುಳ್ಳೂರು, ಅ. ೧೨: ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾದರೆ, ದುಂಡಳ್ಳಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಕಾಡಾನೆ ಹಿಂಡು ಗ್ರಾಮದ ರೈತರ ತೋಟ, ಗದ್ದೆಗಳಿಗೆ ನುಸುಳಿ ಫಸಲಿಗೆ ಬಂದ ಬೆಳೆಗಳನ್ನು ತುಳಿದು ಧ್ವಂಸಗೊಳಿಸುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಹಾಸನ ಜಿಲ್ಲೆಗೆ ಸೇರಿದ ಯಸಳೂರು ಮೀಸಲು ಅರಣ್ಯದಿಂದ ಬರುತ್ತಿರುವ ಕಾಡಾನೆ ಹಿಂಡು ಮಾದರೆ, ದುಂಡಳ್ಳಿ, ಬಿಳಹ ಮುಂತಾದ ಗ್ರಾಮಗಳಲ್ಲಿ ಸಂಚರಿಸಿ ರಾತ್ರಿ ವೇಳೆಯಲ್ಲಿ ರೈತರ ಹೊಲ, ಗದ್ದೆ, ತೋಟಗಳಿಗೆ ನುಸುಳಿ ರೈತರು ಬೆಳೆದ ಬೆಳೆಗಳನ್ನು ನಾಶ ಪಡಿಸುತ್ತಿವೆ. ೨ ದಿನದ ಹಿಂದೆ ರಾತ್ರಿ ವೇಳೆಯಲ್ಲಿ ಮಾದರೆ ಗ್ರಾಮದೊಳಗೆ ನುಸುಳಿದ ೩ ಕಾಡಾನೆಗಳು ಗ್ರಾಮದ ರೈತ ಎಂ.ಕೆ. ಮೋಹನ್ ಅವರಿಗೆ ಸೇರಿದ ೩ ಎಕರೆ ಭತ್ತದ ಗದ್ದೆಯಲ್ಲಿ ಈಗಷ್ಟೆ ಫಸಲಿಗೆ ಬಂದಿದ್ದ ಭತ್ತದ ಬೆಳೆಯನ್ನು ತುಳಿದು ಧ್ವಂಸಗೊಳಿಸಿವೆ. ಇದರಿಂದ ರೈತ ಮೋಹನ್ ಅವರಿಗೆ ವರ್ಷದ ಊಟಕ್ಕೆ ಬೆಳೆದಿದ್ದ ಭತ್ತದ ಬೆಳೆ ನಾಶವಾಗಿದೆ.
ಶನಿವಾರಸಂತೆ ಅರಣ್ಯ ಅಧಿಕಾರಿಗಳಿಗೆ ಪರಿಹಾರ ಕೋರಿ ಮನವಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.