ಮುಳ್ಳೂರು, ಅ. ೧೧: ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಗ್ರಾಮ ನೈರ್ಮಲ್ಯ ಕ್ರಿಯಾಯೋಜನೆ ತಯಾರಿಸುವ ಉದ್ದೇಶದ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮ ಸಮೀಕ್ಷೆ ಕಾರ್ಯ ಮತ್ತು ಕ್ರಿಯಾಯೋಜನೆ ತಯಾರಿಸುವ ಪ್ರಕ್ರಿಯೆ ನಡೆಸಲಾಯಿತು.

ಜಲ್ ಜೀವನ್ ಮಿಷನ್ ಯೋಜನೆಯ ಅಧಿಕಾರಿಗಳ ತಂಡ ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮ ಸಮೀಕ್ಷೆ ನಡೆಸಿದರು. ಬಳಿಕ ಕ್ರಿಯಾಯೋಜನೆ ರೂಪಿಸಿದ ನಂತರ ಅಧಿಕಾರಿಗಳು ನಿಡ್ತ ಗ್ರಾ.ಪಂ. ವ್ಯಾಪ್ತಿಯ ಮುಳ್ಳೂರು ಜಂಕ್ಷನ್‌ನಲ್ಲಿ ಕ್ರಿಯಾಯೋಜನೆಗೆ ಕುರಿತಾದ ಗ್ರಾಮನಕ್ಷೆ ತಯಾರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರಿಗೆ ಯೋಜನೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಇಲಾಖೆ ಅಧಿಕಾರಿಗಳು, ನಿಡ್ತ ಗ್ರಾ.ಪಂ. ಕಾರ್ಯದರ್ಶಿ ಕುಶಾಲಪ್ಪ, ಜಲ್ ಜೀವನ್ ಮಿಷನ್ ಯೋಜನೆಯ ಐ.ಎಸ್.ಎ ತಂಡದ ಮಂಜುನಾಥ್, ಕ್ರೆಡಿಟ್-ಐ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.