ಗೋಣಿಕೊಪ್ಪ ವರದಿ, ಅ. ೧೧ : ಕೊಡಗಿನ ದೇವರಕಾಡು ಸಂರಕ್ಷಣಾ ವ್ಯವಸ್ಥೆ ವಿಶ್ವಕ್ಕೆ ಮಾದರಿ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ ಕುಶಾಲಪ್ಪ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಸಂಶೋಧನಾ ಪುಸ್ತಕ ಬಿಡುಗಡೆ ಮತ್ತು ಕೊಡಗಿನ ದೇವಕಾಡ್ ಹಾಗೂ ಕಾಡ್‌ಪಣ್ಣ್, ಕಾಡ್‌ಪ್ರಾಣಿ ವಿಶೇಷ ಅರಿವು ಕಾರ್ಯಕ್ರಮದಲ್ಲಿ ‘ಕೊಡಗಿನ ದೇವಕಾಡಿನ ವಿಶ್ಲೇಷಣೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ದೇವಕಾಡು ಸಂರಕ್ಷಣೆ ನಿಯಮದಲ್ಲಿ ಒಂದು ಕುಟುಂಬಕ್ಕೆ ಜವಾಬ್ದಾರಿ ನೀಡದೆ ಸಮುದಾಯಕ್ಕೆ ನೀಡಿದ ಕಾರಣದಿಂದ ದೇವಕಾಡ್ ಉಳಿದುಕೊಂಡಿದೆ. ಕೇರಳ ರಾಜ್ಯದಲ್ಲಿ ಕಾವು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾಗಬನ ಎಂಬ ಹೆಸರಿನಲ್ಲಿ ನಿಯಮ ರೂಪಿಸಿ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಅದು ಕುಟುಂಬ ವ್ಯವಸ್ಥೆ ಹಿನ್ನೆಲೆ ಇರುವುದರಿಂದ ದೇವಕಾಡು ಉಳಿಸಿಕೊಳ್ಳಲು ಆಗುತ್ತಿಲ್ಲ. ಜಿಲ್ಲೆಯಲ್ಲಿ ಊರ್‌ತಕ್ಕ, ದೇವತಕ್ಕ, ನಾಡ್ ತಕ್ಕ ಹೀಗೆ ಆಯಾ ಭಾಗದ ಜನಾಂಗ, ಭಾಷೆಗೆ ಅನುಗುಣವಾಗಿ ಸಮುದಾಯಕ್ಕೂ ಜವಾಬ್ದಾರಿಯನ್ನು ಹಂಚಿಕೆ ಮಾಡಿಕೊಂಡು ದೇವಕಾಡು ರಕ್ಷಣೆಗೆ ಒತ್ತು ನೀಡಲಾಗಿದ್ದು, ಜಾತಿ, ಧರ್ಮ ಎಲ್ಲವನ್ನೂ ಮೀರಿ ದೇವರಕಾಡು ಸಂರಕ್ಷಣೆಯಾಗುತ್ತಿದೆ. ಇದೊಂದು ಸಮುದಾಯದ ಆಸ್ತಿಯಾದರೂ ಕೂಡ ಅರಣ್ಯ ಇಲಾಖೆಗೆ ಸೇರುತ್ತದೆ ಎಂದರು.

ಕೊಡಗಿನ ಕಲೆ, ಸಾಹಿತ್ಯ, ಸಂಸ್ಕೃತಿ, ಕೃಷಿ ಪದ್ಧತಿಯ ಮೂಲಸ್ಥಾನವಾಗಿದೆ. ಮೊದಲು ದೇವರಿಗೆ ಅರ್ಪಿಸಿ ನಂತರ ಸಮಾಜಕ್ಕೆ ಒಪ್ಪಿಸುವ ಕಾರ್ಯ ಹಿಂದಿನಿAದಲೇ ನಡೆದುಕೊಂಡು ಬಂದಿದ್ದು, ದೇವಕಾಡ್ ಸಂರಕ್ಷಣೆಯೊAದಿಗೆ ಜನಾಂಗ, ಕಲೆ, ಸಾಹಿತ್ಯ, ಸಂಸ್ಕೃತಿ, ಕೃಷಿ ಉಳಿಯಲು ಸಾಧ್ಯ. ದೇವಕಾಡ್ ನಾಶವಾದರೆ ಜನಾಂಗ, ಕಲೆ, ಸಾಹಿತ್ಯ, ಸಂಸ್ಕೃತಿ ನಶಿಸುತ್ತದೆ. ಇಂತಹ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದ್ದು, ಸಂರಕ್ಷಣೆ ಸಮುದಾಯದ ಜವಾಬ್ದಾರಿ ಎಂದು ಹೇಳಿದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ಎಂ. ರವಿ ಕಾಳಪ್ಪ ಉದ್ಘಾಟಿಸಿ ಮಾತನಾಡಿ, ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದ್ದರೂ ಮಾನವರಂತೆ ಪ್ರಾಣಿ, ಪಕ್ಷಿಗಳಿಗೂ ನೆಲೆ ಬೇಕಿದೆ. ಈ ನಿಟ್ಟಿನಲ್ಲಿ ನಾವು ಚಿಂತನೆ ನಡೆಸಬೇಕಿದೆ. ಕಾಡು ಹಣ್ಣು ಸಂರಕ್ಷಣೆ ಕೂಡ ಸ್ಥಳೀಯರ ಜವಾಬ್ದಾರಿ ಯಾಗಿದ್ದು, ಆರ್ಥಿಕ ಕ್ರೋಢೀಕರಣದ ಚಿಂತನೆಯಲ್ಲಿ ಕಾಫಿ ಬೆಳೆಗೆ ನೀಡುತ್ತಿರುವ ಆದ್ಯತೆಯೊಂದಿಗೆ ಮನೆಯಂಗಳದಲ್ಲಿ ಕಾಡು ಹಣ್ಣು ಬೆಳೆಸುವ ಕೃಷಿ ಪದ್ಧತಿಗೆ ಒತ್ತು ನೀಡಬೇಕಿದೆ ಎಂದರು.

(ಮೊದಲ ಪುಟದಿಂದ) ಅರಣ್ಯ ಮಹಾವಿದ್ಯಾಲಯದ ಸಹ-ಪ್ರಾಧ್ಯಾಪಕ ಡಾ. ಬಿ. ಎನ್. ಸತೀಶ್ ಕಾಡುಹಣ್ಣು ಸಂಪನ್ಮೂಲದ ಮಾಹಿತಿ ನೀಡಿದರು. ಕಾಡುಹಣ್ಣು ಬೆಳೆಯುವುದರಿಂದ ಮೌಲ್ಯವರ್ಧನೆ ಮೂಲಕ ಆರ್ಥಿಕ ಕ್ರೋಡೀಕರಣಕ್ಕೆ ಸಹಾಯವಾಗುತ್ತದೆ. ಹೆಚ್ಚು ಪೋಶಕಾಂಶದ ಆಹಾರದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಕುರಿತು ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿದರು. ಕೊಡವ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಅಕಾಡೆಮಿ ಸಾಹಿತ್ಯದ ಮೂಲಕ ಸ್ಥಳೀಯ ಸಂಪನ್ಮೂಲ ದಾಖಲೆ ಮಾಡುವ ಕಾರ್ಯ ಮಾಡುತ್ತಿದೆ ಎಂದರು.

ಮೂರು ಪುಸ್ತಕ ಬಿಡುಗಡೆ : ಪುತ್ತಾಮನೆ ವಿದ್ಯಾ ಜಗದೀಶ್ ಅವರ ಸಂಶೋಧನಾ ಪ್ರಬಂಧ ‘ಕೊಡಗಿನ ದೇವಕಾಡಿನ ವಿಶ್ಲೇಷಣೆ’, ಅಪ್ಪಚೆಟ್ಟೋಳಂಡ ಎಂ. ಅಪ್ಪಯ್ಯ ದಾಖಲೀಕರಣದ ‘ಎಥ್ನೊ ಬೊಟಾನಿಕಲ್ ವೈಲ್ಡ್ ಫ್ರೂಟ್ಸ್ ಆಫ್ ಕೊಡಗು’, ಡಾ. ಡಿ. ಸಿ. ನಂಜುAಡ ಅವರ ಸಂಶೋಧನಾ ಪ್ರಬಂಧ ‘ಮಾನವ ಮತ್ತು ವನ್ಯಜೀವಿ ಸಂಘರ್ಷ’ ಪುಸ್ತಕವನ್ನು ಅನಾವರಣಗೊಳಿಸಲಾಯಿತು.

ಸಂಶೋಧನಾ ಲೇಖಕಿ ಪುತ್ತಾಮನೆ ವಿದ್ಯಾ ಜಗದೀಶ್ ಮಾತನಾಡಿ, ಪುಸ್ತಕದಲ್ಲಿ ೭ ದೇವಕಾಡಿನ ನೈಜತೆ ಬಗ್ಗೆ ಸಂಶೋಧನೆ ಮಾಡಿ ತಿಳಿಸುವ ಪ್ರಯತ್ನ ಮಾಡಲಾಗಿದ್ದು, ೭ ದೇವಕಾಡಿನ ೨೯೫ ಎಕರೆ ಒಟ್ಟು ವಿಸ್ತೀರ್ಣದಲ್ಲಿ ೨೨೫ ಎಕರೆ ಸಂರಕ್ಷಣೆಯಾಗಿದೆ. ೭೦ ಎಕರೆ ಪ್ರದೇಶ ಒತ್ತುವರಿ ಮೂಲಕ ನಾಶವಾಗಿದೆ. ಇದು ಸ್ಥಳೀಯ ಮೂಲನಿವಾಸಿಗಳಿಗೆ ನೋವಿನ ವಿಚಾರವಾಗಿದೆ. ಸಸ್ಯ ಸಂಕುಲ, ಜೀವ ಸಂಕುಲಗಳ ಪೂಜನೀಯ ಸ್ಥಳವಾಗಿ ದೇವರಕಾಡು ಉಳಿದುಕೊಂಡಿದೆ ಎಂದರು.

ಲೇಖಕ ಡಾ. ಡಿ. ಸಿ. ನಂಜುAಡ ಮಾತನಾಡಿ, ವನ್ಯಪ್ರಾಣಿಗಳ ಸಂರಕ್ಷಣೆ ಕೂಡ ಸಮುದಾಯ ಜವಾಬ್ದಾರಿಯಾಗಿದೆ. ಪ್ರಾಣಿಗಳ ಸಂಘರ್ಷವನ್ನು ಸರ್ಕಾರದ ಮೇಲೆ ಹಾಕದೆ ಜನರು ಪ್ರಾಣಿಗಳೊಂದಿಗೆ ಬದುಕುವ ಕಲೆ ರೂಪಿಸಿಕೊಳ್ಳಬೇಕಿದೆ ಎಂದರು. ಕಾರ್ಯಕ್ರಮ ಸಂಚಾಲಕ ಪಡಿಞರಂಡ ಪ್ರಭುಕುಮಾರ್, ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು. ಮಾಚಿಮಾಡ ಜಾನಕಿ ವಂದಿಸಿದರು. ಸದಸ್ಯ ಕುಡಿಯರ ಮುತ್ತಪ್ಪ ಇದ್ದರು.