ಚಿತ್ರ ವರದಿ: ವಾಸು ಎ.ಎನ್. ಸಿದ್ದಾಪುರ, ಅ ೧೧: ಕಾಡಾನೆಗಳನ್ನು ಕಾಡಿಗೆ ಅಟ್ಟುವ ಸಂದರ್ಭದಲ್ಲಿ ಒಂಟಿ ಸಲಗವೊಂದು ಅರಣ್ಯ ಇಲಖಾಧಿಕಾರಿಗಳ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ದಾಳಿಯನ್ನು ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಗಾಯಗೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮೀನುಕೊಲ್ಲಿ ಅರಣ್ಯಕ್ಕೆ ಸೇರಿದ ಅಭ್ಯತ್‌ಮಂಗಲ, ವಾಲ್ನೂರು-ತ್ಯಾಗತ್ತೂರು, ನೆಲ್ಲಿಹುದಿಕೇರಿ, ಅತ್ತಿಮಂಗಲ, ಅರೆಕಾಡು, ಕಾಟಿಬಾಣೆ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಕಾಫಿ ತೋಟದೊಳಗೆ ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಒತ್ತಾಯಿಸಿದ್ದರು.
ಕಳೆದೆರಡು ದಿನಗಳ ಕುಶಾಲನಗರ ಎ.ಸಿ.ಎಫ್.ಎ.ಎ. ಗೋಪಾಲ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಹಾಗೂ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ನೇತೃತ್ವದಲ್ಲಿ ನೆಲ್ಲಿಹುದಿಕೇರಿ ಹಾಗೂ ಅರೆಕಾಡು ಗ್ರಾಮಗಳ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕಾಡಿಗೆ ಅಟ್ಟುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾಡಿಗೆ ಅಟ್ಟುವ ಸಂದರ್ಭದಲ್ಲಿ ಕಾಡಾನೆಗಳು ಅರಣ್ಯ ಇಲಾಖಾಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಬೆನ್ನಟ್ಟಿದ್ದವು.
(ಮೊದಲ ಪುಟದಿಂದ) ಕಾಡಾನೆಗಳನ್ನು ಓಡಿಸುವ ಸಂದರ್ಭದಲ್ಲಿ ಪಟಾಕಿ ಶಬ್ದಗಳಿಂದ ಕೋಪಗೊಂಡ ಒಂಟಿ ಸಲಗವೊಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಕೂಡಕಂಡಿ ಸುಬ್ರಾಯ ಅವರನ್ನು ಕಾಫಿ ತೋಟದೊಳಗೆ ಬೆನ್ನಟ್ಟಿ ದಾಳಿಗೆ ಮುಂದಾಯಿತು. ಅಪಾಯವನ್ನು ಅರಿತ ಸುಬ್ರಾಯ ಕೂದಲೆಳೆಯ ಅಂತರದಿAದ ಪಾರಾಗಿದ್ದಾರೆ. ಕಾಫಿ ತೋಟದೊಳಗೆ ಓಡಿ ತಪ್ಪಿಸಿಕೊಂಡಿದ್ದಾರೆ.
ಸಲಗದ ದಾಳಿಯನ್ನು ತಪ್ಪಿಸಲು ಓಡುವ ಸಂದರ್ಭದಲ್ಲಿ ಬಿದ್ದ ಪರಿಣಾಮ ಸುಬ್ರಾಯ ಅವರ ಭುಜಕ್ಕೆ ಹಾಗೂ ಕೈಯಿಗೆ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಯಾಚರಣೆ ಸಂದರ್ಭ ಕಾಡಾನೆಗಳು ಕಾರ್ಯಾಚರಣೆಯ ತಂಡವನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡಿಸುತ್ತಾ ಸತಾಯಿಸಿದವು. ಹಿಂಡಿನಲ್ಲಿ ಮರಿ ಆನೆಗಳು ಇರುವ ಕಾರಣದಿಂದಾಗಿ ತೋಟಗಳನ್ನು ಬಿಟ್ಟು ಕದಲುತ್ತಿಲ್ಲ. ಸುರಿಯುವ ಮಳೆಯ ನಡುವೆ ಕಾಫಿ ತೋಟದೊಳಗೆ ಕೆಸರಿನ ಮಧ್ಯೆ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಎಷ್ಟೇ ಶ್ರಮಪಟ್ಟು ಕಾರ್ಯಾಚರಣೆ ನಡೆಸಿದರೂ ಒಂದು ತೋಟದಿಂದ ಮತ್ತೊಂದು ತೋಟದೊಳಗೆ ಲಗ್ಗೆ ಇಡುತ್ತಾ ಕಾರ್ಯಾಚರಣೆ ತಂಡಕ್ಕೆ ಸವಾಲೊಡ್ಡಿತ್ತು.
ಇದೀಗ ಕಾಡಾನೆಗಳ ಗುಂಪುಗಳು ಬೇರ್ಪಟ್ಟು ನೆಲ್ಲಿಹುದಿಕೇರಿ ಬಳಿಯ ಅತ್ತಿಮಂಗಲ ಮೇರಿಲ್ಯಾಂಡ್ ಹಾಗೂ ಕೊಂಗೇರ ಕುಟುಂಬಸ್ಥರ ಕಾಫಿ ತೋಟಗಳಲ್ಲಿ ಉಳಿದಿದೆ. ಸಂಜೆಯವರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಿಗೆ ಅಟ್ಟಲು ಯತ್ನಿಸಿದರು. ಆದರೆ ಮರಿ ಆನೆಗಳ ಜೊತೆಗೆ ಸೇರಿಕೊಂಡು ತೋಟ ಗಳಿಂದ ಬರಲು ಹಿಂದೇಟು ಹಾಕಿದ್ದವು. ಇದರಿಂದಾಗಿ ಅರಣ್ಯ ಇಲಾಖಾಧಿಕಾರಿಗಳಿಗೆ ಸಮಸ್ಯೆ ಯಾಗಿದೆ. ಕಾರ್ಯಾಚರಣೆಯ ತಂಡವನ್ನೇ ಬೆನ್ನಟ್ಟಿದ್ದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.