ಮಡಿಕೇರಿ, ಅ. ೧೧: ಹಾಡ ಹಗಲೇ ಮಡಿಕೇರಿಯ ಹೃದಯ ಭಾಗದಲ್ಲಿರುವ ಮನೆಯೊಂದಕ್ಕೆ ನುಗ್ಗಿರುವ ದರೋಡೆಕೋರ ಮನೆಯಲ್ಲಿದ್ದ ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿಸರ, ಕಿವಿಯಲ್ಲಿದ್ದ ಚಿನ್ನದ ವಾಲೆಯನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಸಂಭವಿಸಿದೆ.

ಇAದು ಮಧ್ಯಾಹ್ನ ೧.೩೫ ಗಂಟೆ ವೇಳೆಗೆ ಅಪ್ಪಚ್ಚಕವಿ ರಸ್ತೆಯಲ್ಲಿರುವ ದಿನೇಶ್ ರಾವ್ ಎಂಬವರ ಮನೆಯೊಳಗಡೆ ಪ್ರವೇಶಿಸಿದ ಅಪರಿಚಿತ ವ್ಯಕ್ತಿ, ದಿನೇಶ್ ಅವರ ಪತ್ನಿ ಪುಷ್ಪಾವತಿ ಎಂಬವರ ಬಾಯಿಯನ್ನು ಅದುಮಿ ಕುತ್ತಿಗೆಯಲ್ಲಿದ್ದ ಎರಡೆಳೆ ಕರಿಮಣಿ ಸರವನ್ನು ಕಸಿಯಲು ಪ್ರಯತ್ನಿಸಿದ್ದಾನೆ. ಪುಷ್ಪಾವತಿ ಅವರು ತಾಳಿಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಸರವು ತಾಳಿಯಿಂದ ಬೇರ್ಪಟ್ಟು ಕಳ್ಳನ ಕೈ ಸೇರಿದೆ.

(ಮೊದಲ ಪುಟದಿಂದ) ಜೊತೆಗೆ ಆಕೆಯ ಕಿವಿಯಲ್ಲಿದ್ದ ವಾಲೆಯನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರ ಹಾಗೂ ವಾಲೆಯ ತೂಕ ಅಂದಾಜು ೬೦ ಗ್ರಾಂ ಆಗಿದ್ದು, ಸುಮಾರು ರೂ. ೩ ಲಕ್ಷ ಬೆಲೆ ಬಾಳುವುದ್ದಾಗಿದೆ. ಸರವನ್ನು ಕೀಳುವ ಸಂದರ್ಭದಲ್ಲಿ ಪುಷ್ಪಾವತಿ ಅವರ ಕುತ್ತಿಗೆಗೆ ತರಚಿದ ಗಾಯಗಳಾಗಿವೆ. ಘಟನೆಯ ಬಗ್ಗೆ ಮಾಹಿತಿ ದೊರೆತೊಡನೆ ಸ್ಥಳಕ್ಕೆ ಮಡಿಕೇರಿ ನಗರ ಠಾಣಾಧಿಕಾರಿಗಳು, ಸಿಬ್ಬಂದಿಗಳು, ಬೆರಳಚ್ಚು ತಜ್ಞರು, ಶ್ವಾನ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.