ಶ್ರೀಮಂಗಲ, ಅ. ೧೧: ಕಳೆದ ೬-೭ ತಿಂಗಳಿನಿAದ ರಸಗೊಬ್ಬರ ದರ ಶೇ.೪೫ ರಿಂದ ೮೦ ರಷ್ಟು ಏರಿಕೆಯಾಗಿದೆ, ರಾಜ್ಯ ಶಾಸಕರ ವೇತನ ಭತ್ಯೆ ಶೇ.೫೦ ರಿಂದ ೬೦ ರಷ್ಟು ಏರಿಕೆಯಾಗಿದೆ.ಆದರೇ ಸತತ ೫ ವರ್ಷಗಳಿಂದ ನಿರಂತರ ಅತಿವೃಷ್ಟಿ-ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಬೆಳೆ ನಷ್ಟ ಅನುಭವಿಸುತ್ತಿರುವ ರೈತರು-ಬೆಳೆಗಾರರಿಗೆ ನೀಡುವ ಪರಿಹಾರ ಮೊತ್ತ ಪರಿಷ್ಕರಣೆಗೊಂಡಿಲ್ಲ. ಪರಿಹಾರ ಪ್ರಮಾಣ ಪರಿಷ್ಕರಿಸಿ, ಪರಿಹಾರ ಹೆಕ್ಟೇರ್ ಮಿತಿಯನ್ನು ಹೆಚ್ಚಿಸಿ ಶೀಘ್ರದಲ್ಲಿ ಜಿಲ್ಲೆಯ ಎಲ್ಲಾ ಬೆಳೆಗಾರರಿಗೆ ಪರಿಹಾರ ನೀಡಲು ಕೊಡಗು ಬೆಳೆಗಾರ ಒಕ್ಕೂಟದಿಂದ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯಿಸಲಾಗಿದೆ.

ಒಕ್ಕೂಟದ ಅಧ್ಯಕ್ಷ ಕೇಚಂಡ ಎಂ.ಕುಶಾಲಪ್ಪ ಅವರು ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದ ಬಗ್ಗೆ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸತತ ಐದು ವರ್ಷಗಳಿಂದ ಅತಿವೃಷ್ಟಿ ಮತ್ತು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಿರಂತರ ಬೆಳೆ ನಷ್ಟ ಅನುಭವಿಸುತ್ತಿರುವ ಕೊಡಗು ಜಿಲ್ಲೆಯ ಎಲ್ಲಾ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಹಾಗೂ ಪ್ರಸ್ತುತ ವರ್ಷ ಬೆಳೆ ನಷ್ಟ ಪರಿಹಾರವನ್ನು ಪರಿಷ್ಕರಣೆ ಮಾಡಿ ಶೀಘ್ರದಲ್ಲಿ ಜಿಲ್ಲೆಯ ಎಲ್ಲಾ ಬೆಳೆಗಾರರು/ರೈತರಿಗೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಬೇಕು, ಬೇರೆ ಯಾವುದೇ ಜಿಲ್ಲೆ ನಿರಂತರವಾಗಿ ೫ ವರ್ಷ ಅತಿವೃಷ್ಟಿ ಅನುಭವಿಸಿಲ್ಲ. ಕೊಡಗು ಜಿಲ್ಲೆ ಮಾತ್ರ ಇಂತಹ ಸಂಕಷ್ಟ ಅನುಭವಿಸಿದೆ ಎಂಬ ವಿಚಾರವನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಬೆಳೆನಷ್ಟಕ್ಕೆ ಕೊಡುವ ಪರಿಹಾರ ಹಣ ಕಳೆದ ಹಲವು ವರ್ಷದಿಂದ ಪರಿಷ್ಕರಣೆಗೊಂಡಿಲ್ಲ. ಆದರೆ ರಸಗೊಬ್ಬರ ದರ ಕಳೆದ ಏಳೆಂಟು ತಿಂಗಳಿನಿAದ ಶೇಕಡ ೫೦ ರಿಂದ ೮೦ರಷ್ಟು ಏರಿಕೆಯಾಗಿದೆ. ಕಳೆದ ಐದು ವರ್ಷಗಳಿಂದ ಬೆಳೆ ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ಬೆಳೆಗಾರರು ಅತ್ಯಂತ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಇದಲ್ಲದೆ ಕೋವಿಡ್ -೧೯ ಲಾಕ್ಡೌನ್ ಸಂದರ್ಭ ಸಕಾಲದಲ್ಲಿ ಕಾರ್ಮಿಕರು ದೊರೆಯದೇ ನಿರ್ವಹಣೆ ಮತ್ತು ಕೃಷಿ ಕೆಲಸ ಕಾರ್ಯ ಕುಂಠಿತವಾಗಿ ನಷ್ಟ ಅನುಭವಿಸಿದ್ದಾರೆ.ಇತರ ಎಲ್ಲಾ ರಂಗಕ್ಕೆ ಪರಿಹಾರ ನೀಡಲಾಗಿದೆ.ಕಾಫಿ ಬೆಳೆಗಾರರಿಗೆ ಮತ್ತು ಕಾಫಿ ತೋಟದ ಕಾರ್ಮಿಕರಿಗೆ ಕೋವಿಡ್ -೧೯ ಲಾಕ್‌ಡೌನ್ ಹಿನ್ನೆಲೆಯಲ್ಲಿಯು ಯಾವುದೇ ಪರಿಹಾರವನ್ನು ಸರ್ಕಾರ ನೀಡಿಲ್ಲ. ಇದೀಗ ರಸಗೊಬ್ಬರ ಕಳೆದ ೬-೭ ತಿಂಗಳಿನಿAದ ಶೇ. ೮೦ ರಷ್ಟು ಹಾಗೂ ಕಾಂಪ್ಲೆಕ್ಸ್ ಯುಕ್ತ ರಸಗೊಬ್ಬರಗಳ ದರ ಶೇ. ೪೫ ರಿಂದ ೬೦ ರಷ್ಟು (ಪೊಟ್ಯಾಷ್ ರೂ. ೮೭೫ ರಿಂದ ರೂ.೧೭೫೦, ಕಾಂಪ್ಲೆಕ್ಸ್ ಈ ಗೊಬ್ಬರ ರೂ.೯೫೦-೧೦೦೦ ದಿಂದ ರೂ.೧೪೭೦ ರಿಂದ ೧೬೦೦) ಏರಿಕೆಯಾಗಿದೆ. ಹಾಗೆಯೇ ರೈತರ ಬಳಸುವ ಸಿಂಪಡಣೆ ದ್ರಾವಣಗಳು, ಯಂತ್ರೋಪಕರಣಗಳು ಸಹ ದರ ಏರಿಕೆಯಾಗಿದೆ. ಅತಿವೃಷ್ಟಿಯಿಂದ ನಿರಂತರವಾಗಿ ಬೆಳೆ ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ಬೆಳೆಗಾರರ ಚೇತರಿಕೆಗೆ ವಿಶೇಷ ಪ್ಯಾಕೇಜ್ ಒದಗಿಸಲು ಸರಕಾರ ಮುಂದಾಗಬೇಕು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಸಂಸದರು ಮತ್ತು ಶಾಸಕರ ವೇತನ ಭತ್ಯೆ ಸಹ ಏರಿಕೆಯಾಗಿದೆ. ರಾಜ್ಯದ ಸಚಿವರ- ಶಾಸಕರ ವೇತನ ಭತ್ಯೆ ಸಹ ೨೦೨೨ರ ಫೆಬ್ರವರಿ ತಿಂಗಳಲ್ಲಿ ಶೇಕಡ ೫೦ ರಿಂದ ೬೦ ರಷ್ಟು ಏರಿಕೆ ಮಾಡಲಾಗಿದೆ.ಆದರೆ ಬೆಳೆ ನಷ್ಟ ಪರಿಹಾರಕ್ಕೆ ನೀಡುವ ಮೊತ್ತವನ್ನು ಸರ್ಕಾರ ಹಲವು ವರ್ಷದಿಂದ ಪರಿಷ್ಕರಣೆ ಮಾಡಿಲ್ಲ. ಇದು ಅತ್ಯಂತ ಅನ್ಯಾಯವಾದ ವಿಚಾರವಾಗಿದೆ. ಆದ್ದರಿಂದ ಕೂಡಲೇ ಸರಕಾರ ಬೆಳೆನಷ್ಟ ಪರಿಹಾರವನ್ನು ಪರಿಷ್ಕರಿಸಿ, ಪರಿಹಾರ ನಿಯಮದಂತೆ ಈಗ ಇರುವ ಕನಿಷ್ಟ ೨ ಹೆಕ್ಟೇರ್ ಮಿತಿಯನ್ನು ಹೆಚ್ಚಿಸಲು ಗಮನ ಸೆಳೆದಿದ್ದಾರೆ.

ಈ ಬಗ್ಗೆ ೨೦೨೦ ರಲ್ಲಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಪ್ರಾಕೃತಿಕ ವಿಕೋಪ ಅಧ್ಯಯನ ತಂಡಕ್ಕೆ ಕೊಡಗು ಬೆಳೆಗಾರ ಒಕ್ಕೂಟ ನೀಡಿರುವ ಮನವಿ ಪರಿಗಣಿಸಿ ಪರಿಹಾರ ಪ್ರಮಾಣ ಮತ್ತು ಪರಿಹಾರದ ಹೆಕ್ಟೇರ್ ಮಿತಿಯನ್ನು ಹೆಚ್ಚಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು,ಇದರ ಅನುಸಾರ ಕಾಫಿ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಮನವಿ ಮಾಡಿದೆ.

ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೃಷಿ ಸಾಲ ಪಡೆಯಲು ಕಾಫಿಯನ್ನು ವಾಣಿಜ್ಯ ಬೆಳೆಯೆಂದು ಉಪನೋಂದಾಣಾಧಿಕಾರಿಗಳ ಕಚೇರಿಗಳಲ್ಲಿ ಫ್ರೂಟ್ಸ್ ತಂತ್ರಾAಶವನ್ನು ಸ್ಥಗಿತಗೊಳಿಸಿದ್ದು,ಬೆಳೆ ಸಾಲ ಪಡೆಯುವ ಒಟ್ಟು ಮೊತ್ತದ ಶೇ. ೧.೫ ರಷ್ಟು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗಿದೆ. ಈ ಬಗ್ಗೆ ಈಗಾಗಲೇ ಕಂದಾಯ ಸಚಿವರು, ಸಹಕಾರ ಸಚಿವರು ಮತ್ತು ಜಿಲ್ಲೆಯ ಶಾಸಕರ ಗಮನಕ್ಕೆ ತರಲಾಗಿದೆ. ಬೇರೆ ಜಿಲ್ಲೆಗೆ ಇಲ್ಲದ ಈ ನೀತಿ ಕೊಡಗು ಜಿಲ್ಲೆಯ ಮೇಲೆ ಹೇರಿ ಮಲತಾಯಿ ದೋರಣೆ ಅನುಸರಿಸುವುದ್ದನ್ನು ಕೂಡಲೇ ನಿಲ್ಲಿಸಿ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.