ಮಡಿಕೇರಿ, ಅ. ೧೦: ಅಧಿಕಾರಿಗಳು ಸಂಬಳಕ್ಕಾಗಿ ಕೆಲಸ ಮಾಡದೆ ತೆರಿಗೆ ಕಟ್ಟುವ ಜನರ ಸೇವೆ ಮಾಡಬೇಕು, ಸಭೆಗೆ ಬರುವಾಗ ಸರಿಯಾದ ಮಾಹಿತಿಯೊಂದಿಗೆ ಬರುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಕಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಅಧಿಕಾರಿಗಳ ಬಳಿ ಸರಿಯಾದ ಮಾಹಿತಿ ಇಲ್ಲದ್ದನ್ನು ಗಮನಿಸಿ ಸಿಡಿಮಿಡಿಗೊಂಡರು.

ಗೊಬ್ಬರದ ಬಗ್ಗೆ ಮಾಹಿತಿ ಇಲ್ಲ

ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭ ಶಾಸಕರುಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳು; ರೈತರಿಗೆ ನ್ಯಾನೋ ಗೊಬ್ಬರ ಖರೀದಿಸುವಂತೆ ಒತ್ತಡ ಹೇರಬಾರದು, ಈ ಬಗ್ಗೆ ವಿಎಸ್‌ಎನ್‌ಗಳಿಂದ ದೂರುಗಳು ಬರುತ್ತಿವೆ ಎಂದು ಸಭೆಯ ಗಮನಕ್ಕೆ ತಂದರು. ಕೃಷಿ ಇಲಾಖಾ ಜಂಟಿ ನಿರ್ದೇಶಕಿ ಸಬಾನಾ ಎಂ. ಶೇಖ್ ಪ್ರತಿಕ್ರಿಯಿಸಿ, ಯರಲ್ಲೂ ಒತ್ತಡ ಹೇರುತ್ತಿಲ್ಲ, ನ್ಯಾನೋ ಗೊಬ್ಬರ ಕಾಫಿಗೆ ಉತ್ತಮವಾಗಿಲ್ಲ, ತರಕಾರಿ ಬೆಳೆಗಳಿಗೆ ಬಳಸಬಹುದಾಗಿದೆ ಎಂದು ಹೇಳಿದರು.

ರಸಗೊಬ್ಬರ ದಾಸ್ತಾನು ಬಗ್ಗೆ ಸಚಿವರು ಮಾಹಿತಿ ಬಯಸಿದ ಸಂದರ್ಭ ೮೦೦೦೦ ಮೆ.ಟನ್‌ಗೆ ಬೇಡಿಕೆ ಸಲ್ಲಿಸಿದ್ದು ಈ ಪೈಕಿ ೪೭೦೦೩.೦೩ ಮೆ.ಟನ್‌ನಷ್ಟು ಪೂರೈಕೆಯಾಗಿ ರುವದಾಗಿ ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಸಚಿವರು, ಶೇ.೪೦ರಷ್ಟು ಕೊರತೆ ಇರುವಾಗ ಹೇಗೆ ಸುಧಾರಿಸಲು ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ, ಅವಶ್ಯಕತೆ ಇರುವಷ್ಟು ಗೊಬ್ಬರ ತರಿಸಿಕೊಳ್ಳದ ಬಗ್ಗೆ ಹಾಗೂ ಈ ಬಗ್ಗೆ ತಮ್ಮ ಹಾಗೂ ಶಾಸಕರ ಗಮನಕ್ಕೆ ತಾರದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಸಮಜಾಯಿಷಿಕೆ ನೀಡಲು ಅಧಿಕಾರಿ ಮುಂದಾದಾಗ ಅಸಮಾಧಾನಗೊಂಡ ಸಚಿವರು, ಒಂದು ಹೆಕ್ಟೇರ್‌ಗೆ ಎಷ್ಟು ಗೊಬ್ಬರ ಬೇಕೆಂದು ಮಾಹಿತಿ ತಿಳಿದುಕೊಳ್ಳಬೇಕು, ಅಧಿಕಾರಿಗಳು ರೈತರ ಬಳಿಗೆ ತೆರಳಿ ಅವರ ಅನುಭವ ಪಡೆದುಕೊಳ್ಳಬೇಕು. ವಿಎಸ್‌ಎಸ್ ಎನ್‌ಗೆ ತೆರಳಿ ಸರಿಯಾದ ಮಾಹಿತಿ ಪಡೆಯಬೇಕು ಎಂದು ಸೂಚಿಸಿದರಲ್ಲದೆ, ಅಧಿಕಾರಿ ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರವಾಸದ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ಹೇಳಿದರು. ಯಾವದೇ ಮಾಹಿತಿ ಇಲ್ಲದೆ ಕೆಡಿಪಿ ಸಭೆಗೆ ಬಂದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರಲ್ಲದೆ, ಕೇವಲ ಅಟೆಂಡೆನ್ಸ್ ಹಾಕುವ ಕೆಲಸವನ್ನು ಅಟೆಂಡರ್ ಕೂಡ ಮಾಡಬಲ್ಲರು ಎಂದು ಹೇಳಿದರು.

(ಮೊದಲ ಪುಟದಿಂದ)

ಆರೋಗ್ಯ ಅಧಿಕಾರಿಗಳು ತರಾಟೆಗೆ

ಸಭೆಯಲ್ಲಿ ಹಾಜರಿದ್ದ ಆರೋಗ್ಯ ಇಲಾಖಾ ಅಧಿಕಾರಿಗಳು ಸಮಂಜಸವಾದ ಮಾಹಿತಿ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಅದಿಕಾರಿಗಳನ್ನು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡರು. ಇದುವರೆಗೆ ಎಷ್ಟು ಮಂದಿ ಗರ್ಭಿಣಿಯರಿಗೆ ಸ್ಕಾö್ಯನ್ ಮಾಡಲಾಗಿದೆ, ಎಷ್ಟು ಮಂದಿಗೆ ಪೌಷ್ಟಿಕ ಆಹಾರ ನೀಡಲಾಗಿದೆ, ಎಷ್ಟು ಮಕ್ಕಳ ಜನನವಾಗಿದೆ, ಎಷ್ಟು ಮರಣ ಉಂಟಾಗಿದೆ ಇತ್ಯಾದಿ ಬಗ್ಗೆ ಸಚಿವರು ಮಾಹಿತಿ ಬಯಸಿದರು. ಮಾಹಿತಿ ನೀಡಲು ವಿಫಲವಾದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ತಾಲೂಕು ಅಧಿಕಾರಿ ಡಾ. ಚೇತನ್, ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಂಬಳಕ್ಕಾಗಿ ಕೆಲಸ ಮಾಡುವದಾದರೆ ಇದೇ ರೀತಿ ಆಗೋದು, ಬಜೆಟ್‌ನಲ್ಲಿ ಶೇ.೧೩ರಷ್ಟನ್ನು ಸರಕಾರಿ ನೌಕರರ ಸಂಬಳಕ್ಕಾಗಿ ಮೀಸಲಿಡಲಾಗುತ್ತದೆ. ಲಕ್ಷಾಂತರ ಮಂದಿ ಜನರ ತೆರಿಗೆ ಇದರಲ್ಲಿ ಸೇರಿದೆ. ಜನಸಾಮಾನ್ಯರ ಸೇವೆ ಮಾಡಬೇಕಾದುದು ಕರ್ತವ್ಯವಾಗಿದೆ. ಜನರ ಜೀವದ ಜೊತೆ ಆಟವಾಡ್ತಿದ್ದೀರ ಎಂದು ಪ್ರಶ್ನೆ ಮಾಡಿದರಲ್ಲದೆ, ಇಂತಹ ನಿರ್ಲ್ಯಕ್ಷ ಶೋಭೆಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರಿ ವೈದ್ಯರು ಖಾಸಗಿ ಕ್ಲಿನಿಕ್‌ಗಳಲ್ಲಿ ಹೆಚ್ಚಿನ ಸಮಯ ಕೆಲಸ ಮಾಡುವದಲ್ಲದೆ, ಹೆರಿಗೆ, ಶಸ್ತçಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸುತ್ತಾರೆ ಎಂದು ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಮಾಹಿತಿ ಬಯಸಿದ ಸಂದರ್ಭ ಮಡಿಕೇರಿ ತಾಲೂಕಿನಲ್ಲಿ ೮೧, ಸೋಮವಾರಪೇಟೆಯಲ್ಲಿ ೪೭ ಹಾಗೂ ವೀರಾಜಪೇಟೆ ಖಾಸಗಿ ಆಸ್ಪತ್ರೆಯಲ್ಲಿ ೧೨೫ ಹೆರಿಗೆಗಳಾಗಿದ್ದು, ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ೧೪೦೭, ಸೋಮವಾರಪೇಟೆಯಲ್ಲಿ ೫೩೫, ವೀರಾಜಪೇಟೆಯಲ್ಲಿ ೮೨೬ ಹೆರಿಗೆಗಳಾಗಿರುವದಾಗಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಸಚಿವರು ಸರಕಾರಿ ಆಸ್ಪತ್ರೆಗಳಲ್ಲಿಯೇ ಹೆಚ್ಚಿಗೆ ಹೆರಿಗೆಯಾಗಿರುವದಾಗಿ ಹೇಳಿದರು. ಆದರೆ, ಸಿಸೇರಿಯನ್ ಆಗಿರುವ ಬಗ್ಗೆ ಮಾಹಿತಿ ಬಯಸಿದ ಸಂದರ್ಭ ೩೦೩ ಸಿಸೇರಿಯನ್ ಆಗಿದ್ದು, ಎಲ್ಲವೂ ಖಾಸಗಿ ಆಸ್ಪತ್ರೆಯಲ್ಲಿ ಆಗಿರುವದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಾಹಿತಿ ನೀಡಿದಾಗ ಮತ್ತೆ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಪ್ಪು ಮಾಹಿತಿ ನೀಡಿ ಆರೋಪದಿಂದ ತಪ್ಪಿಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದರಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲೇ ಯಾಕೆ ಆಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ ಸೂಚಿಸಿದರು.

ಗುತ್ತಿಗೆ ತಿರಸ್ಕರಿಸಲು ಸೂಚನೆ

ಲೋಕೋಪಯೋಗಿ ಗುತ್ತಿಗೆದಾರ ವೇಣುಗೊಪಾಲ್ ಎಂಬವರು ಕಾಮಗಾರಿ ಗುತ್ತಿಗೆ ಪಡೆದು ನಿರ್ವಹಿಸದೇ ಇರುವ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ಶಾಸಕ ಬೋಪಯ್ಯ ಅಧಿಕಾರಿಯಲ್ಲಿ ಪ್ರಶ್ನಿಸಿದರು. ಉತ್ತರಿಸಿದ ಕಾರ್ಯಪಾಲಕ ಅಭಿಯಂತರ ನಾಗರಾಜ್ ಗುತ್ತಿಗೆ ರದ್ದುಪಡಿಸಿ ಮರು ಟೆಂಡರ್ ಕರೆಯಲಾಗಿದೆ. ಗುತ್ತಗೆದಾರನಿಗೆ ನೋಟೀಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆ ತಿರಸ್ಕರಿಸಿ ಪತ್ರ ಬರೆದು, ಈ ಸಂಬAಧ ಮಾಹಿತಿ ನೀಡುವಂತೆ ಸೂಚಿಸಿದರು.

ಅರಣ್ಯಾಧಿಕಾರಿ ವಿರುದ್ಧ ಅಸಮಾಧಾನ

ಸಭೆಗೆ ವೀರಾಜಪೇಟೆ ಅರಣ್ಯ ಸಂರಕ್ಷಣಾಧಿಕಾರಿ ಗೈರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಬೋಪಯ್ಯ ಅವರು, ವೀರಾಜಪೇಟೆ ತಾಲೂಕಿನ ಅಕ್ರಮ ಸಕ್ರಮ ಜಾಗದ ಫಲಾನುಭವಿಗಳ ಕಡತವನ್ನು ತಹಶೀಲ್ದಾರರು ಪರಿಶೀಲನೆಗಾಗಿ ಅರಣ್ಯಾಧಿಕಾರಿಗೆ ಕಳುಹಿಸಿದ್ದು, ಒಂದು ವರ್ಷದಿಂದ ಹಿಂತಿರುಗಿಸದೆ ಸತಾಯಿಸುತ್ತಿದ್ದಾರೆ. ೨೨ ಕಡತಗಳಿದ್ದು, ಪರಿಶೀಲನೆ ಅರಣ್ಯ ಇಲಾಖಾ ವ್ಯಾಪ್ತಿಗೆ ಬಾರದಿದ್ದರೂ ಕಡತ ಇರಿಸಿಕೊಂಡಿದಾರೆ. ಅಧಿಕಾರಿಗಳಿಗೆ ಗಡಿ ಗ್ರಾಮದ ಬಡವರ ಕಷ್ಟ ಗೊತ್ತಿಲ್ಲ; ಈ ಬಗ್ಗೆ ಕ್ರಮ ಜರುಗಿಸಬೇಕೆಂದು ಸಚಿವರಲ್ಲಿ ಆಗ್ರಹಿಸಿದರು.

ತಿತಿಮತಿ ವ್ಯಾಪ್ತಿಯ ನಾಲ್ಕು ಹಾಡಿಗಳಲ್ಲಿ ಅಂದಾಜು ೫೦೦ ಮಂದಿ ವಾಸ ಮಾಡುತ್ತಿದ್ದು, ಅವರುಗಳಿಗೆ ಇನ್ನೂ ಕೂಡ ವಿದ್ಯುತ್ ಕಲ್ಪಿಸಿಲ್ಲ, ಹಾಡಿಯಲ್ಲಿ ಶಾಲೆ ಕೂಡ ಇದ್ದು, ಮಕ್ಕಳು ಕತ್ತಲೆಯಲ್ಲಿ ಕಲಿಯುವಂತಾಗಿದೆ ಎಂದು ಕೆಡಿಪಿ ನಾಮ ನಿರ್ದೇಶಿತ ಸದಸ್ಯರೋರ್ವರು ಸಚಿವರ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ಗೋಪಾಲ, ವಿದ್ಯುತ್ ಸಂಪರ್ಕ ಕೋರಿ ಯಾವದೇ ಅರ್ಜಿ ಬಂದಿಲ್ಲ, ಯಾವದೂ ಬಾಕಿ ಉಳಿದಿಲ್ಲವೆಂದು ಹೇಳಿದರು. ಈ ಸಂದರ್ಭ ಸಚಿವರು ಸೆಸ್ಕ್ ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ, ವಿದ್ಯುತ್ ಸಂಪರ್ಕ ಒದಗಿಸುವಂತೆ ಸೂಚನೆ ನೀಡಿದರು. ಅಕ್ರಮ ಸಕ್ರಮ ಕಡತಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ಇನ್ನುಳಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ಕಾಳಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಇದ್ದರು.