ಮಡಿಕೇರಿ, ಅ. ೧೦: ಪ್ರಸಕ್ತ ವರ್ಷದ ಮಳೆಗಾಲದ ಚಿತ್ರಣ ಮತ್ತೂ ಮುಂದುವರಿಯುತ್ತಿದೆ. ಈಗಾಗಲೇ ಮಡಿಕೇರಿ ತಾಲೂಕಿಗೆ ಕಳೆದ ವರ್ಷಕ್ಕಿಂತ ೪೭.೫೭ ಇಂಚಿನಷ್ಟು ಅಧಿಕ ಮಳೆಯಾಗಿದೆ. ಜಿಲ್ಲಾ ಸರಾಸರಿ ಕೂಡ ಕಳೆದ ಸಾಲಿಗಿಂತ ೨೬ ಇಂಚುಗಳಷ್ಟು ಹೆಚ್ಚಾಗಿದೆ.
ಕಳೆದ ವರ್ಷ ಮಡಿಕೇರಿ ತಾಲೂಕಿಗೆ ಜನವರಿಯಿಂದ ಈ ತನಕದ ಅವಧಿಯಲ್ಲಿ ೧೩೯.೨೭ ಇಂಚಿನಷ್ಟು ಮಳೆಯಾಗಿತ್ತು. ಈ ಬಾರಿ ಪ್ರಮಾಣ ೧೮೬.೮೩ ಇಂಚಿನಷ್ಟಾಗಿದ್ದು, ೪೭.೫೭ ಇಂಚು ಅಧಿಕ ದಾಖಲಾಗಿದೆ. ಜಿಲ್ಲೆಯಲ್ಲಿ ೨೦೨೧ರ ಸಾಲಿನಲ್ಲಿ ಜನವರಿಯಿಂದ ಈ ತನಕ ೧೦೨.೪೮ ಇಂಚು ಮಳೆಯಾಗಿದ್ದರೆ, ಈ ಬಾರಿ ೧೨೮.೩೯ ಇಂಚು ದಾಖಲಾಗಿದ್ದು, ೨೬ ಇಂಚು ಅಧಿಕವಾಗಿದೆ.
ವೀರಾಜಪೇಟೆ ತಾಲೂಕಿನಲ್ಲೂ ಕಳೆದ ಬಾರಿಗಿಂತ ೧೨.೯೫ ಇಂಚು ಹೆಚ್ಚು ಮಳೆಬಿದ್ದಿದೆ. ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ ೮೬.೩೦ ಇಂಚು ಮಳೆಯಾಗಿದ್ದರೆ, ಈ ಬಾರಿ ೯೯.೨೫ ಇಂಚು ಸರಾಸರಿ ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಬಾರಿ ೮೧.೬೬ ಇಂಚು ಹಾಗೂ ಈ ಬಾರಿ ೯೯.೦೭ ಇಂಚು ದಾಖಲಾಗಿದ್ದು, ೧೭.೪೧ ಇಂಚಿನಷ್ಟು ಹೆಚ್ಚಾಗಿದೆ. ಈ ಅಂಕಿ ಅಂಶಗಳು ಜಿಲ್ಲಾ ಹಾಗೂ ತಾಲೂಕು ಸರಾಸರಿಯಾಗಿವೆ.
ಆದರೆ, ಮೂರು ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಈತನಕ ಸುರಿದಿರುವ ಮಳೆಯ ಪ್ರಮಾಣವೂ ತೀರಾ ಹೆಚ್ಚಾಗಿದೆ. ಬಹುತೇಕ ಅಕ್ಟೋಬರ್ ಎರಡನೇ ವಾರ ತಲುಪಿದ್ದರೂ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಆಗಾಗ್ಗೆ ಮಳೆಯಾಗುತ್ತಿರುವುದು ಹಲವು ಸಮಸ್ಯೆಗಳನ್ನೂ ತಂದೊಡ್ಡುತ್ತಿವೆ.