ಸಿದ್ದಾಪುರ, ಅ ೧೦: ಅರೆಕಾಡು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಪದಾಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಪರಾರಿಯಾಗಿದ್ದ ಮೂವರು ಸಹೋದರ ಆರೋಪಿಗಳ ಪೈಕಿ ಗ್ರಾ.ಪಂ ಅಧ್ಯಕ್ಷ ಪ್ರಭುಶೇಖರ್ ಹಾಗೂ ಆತನ ಸಹೋದರನಾಗಿರುವ ಆನಂದ ರಘು ಇವರಿಬ್ಬರನ್ನು ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೋರ್ವ ಸಹೋದರ ಅಪ್ರು ರವೀಂದ್ರನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ತಾ. ೨೮.೦೮.೨೦೨೨ ರಂದು ಅರೆಕಾಡು ಗ್ರಾಮದ ನಿವಾಸಿ ಹಾಗೂ ಮಡಿಕೇರಿ ತಾಲೂಕು ಬ್ಲಾಕ್ ಕಾಂಗ್ರೆಸ್‌ನ ಕಾರ್ಯದರ್ಶಿ ಯಶ್ವಂತ್ ದೋಲ್ಪಾಡಿ ಹಾಗೂ ಕೋಶಾಧಿಕಾರಿ ಬಲ್ಲಚಂಡ ಚಂದನ್ ಅಪ್ಪಯ್ಯರವರು ಅರೆಕಾಡು ಗ್ರಾಮದ ಕಾಲೋನಿಯೊಂದರಲ್ಲಿ ಮಹಿಳೆಯೋರ್ವರ ನಿಧನ ಹೊಂದಿದ ಮನೆಗೆ ತೆರಳಿ ಹಿಂತಿರುಗಿ ಬರುವ ಸಂದರ್ಭದಲ್ಲಿ ಅರೆಕಾಡು ಪಟ್ಟಣದಲ್ಲಿ ಹೊಟೇಲ್ ಒಂದರಲ್ಲಿ ಬೆಳಗ್ಗೆ ೮.೩೦ರ ಸಮಯಕ್ಕೆ ಟೀ ಸೇವಿಸುತ್ತಿದ್ದಾಗ ಅರೆಕಾಡು ನಿವಾಸಿ ಹಾಗೂ ಹೊಸ್ಕೇರಿ ಗ್ರಾ.ಪಂ. ಅಧ್ಯಕ್ಷ ಬಿ.ವೈ ಪ್ರಭುಶೇಖರ್ ಹಾಗೂ ಆತನ ಸಹೋದರರಾದ ಅಪ್ರು ರವೀಂದ್ರ, ರಘು ಆನಂದ ಸೇರಿ ಯಶ್ವಂತ್ ಹಾಗೂ ಚಂದನ್ ಮೇಲೆ ಹಳೇ ರಾಜಕೀಯದ ವೈಷಮ್ಯದಿಂದ ಏಕಾಏಕಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದರು ಎಂದು ಗಾಯಾಳುಗಳು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಪ್ರಭುಶೇಖರ್, ಅಪ್ರು ರವೀಂದ್ರ, ರಘು ಆನಂದ ಈ ಮೂವರು ಸಹೋದರರ ವಿರುದ್ಧ ಸಿದ್ದಾಪುರ

(ಮೊದಲ ಪುಟದಿಂದ) ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ಇನ್ನಿತರ ಪ್ರಕರಣಗಳು ದಾಖಲಾಗಿತ್ತು. ಹಲ್ಲೆ ನಡೆಸಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರು ಬಿರುಸಿನ ತನಿಖೆ ಕೈಗೊಂಡಿದ್ದರು. ಇದೀಗ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಹೊಸ್ಕೇರಿ ಗ್ರಾ.ಪಂ ಅಧ್ಯಕ್ಷ ಪ್ರಭುಶೇಖರ್ ಹಾಗೂ ಸಹೋದರ ರಘು ಆನಂದರವರನ್ನು ಮಂಗಳೂರಿನ ವಿಟ್ಲಾದಲ್ಲಿ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಹಾಗೂ ಸಿದ್ದಾಪುರದ ಪೊಲೀಸರು ಸೇರಿ ಕಾರ್ಯಾಚರಣೆ ನಡೆಸಿ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮತ್ತೋರ್ವ ಆರೋಪಿ ಅಪ್ರು ರವೀಂದ್ರನ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಯುತ್ತಿದೆ.