ಮಡಿಕೇರಿ, ಅ. ೧೦: ಗೋವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸರ್ಕಾರ ರಾಜ್ಯಾದ್ಯಂತ ಗೋಶಾಲೆಗಳನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಂತೆ ಕೊಡಗಿನಲ್ಲೂ ಗೋಶಾಲೆ ನಿರ್ಮಾಣ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಕೊಡಗು, ಜಿಲ್ಲಾ ಪ್ರಾಣಿದಯಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕೆ. ನಿಡುಗಣೆ ಗ್ರಾಮದಲ್ಲಿ ೫೩ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಗೋಶಾಲೆಯನ್ನು ಉದ್ಘಾಟಿಸಿ ಗೋಪೂಜೆ ನೆರವೇರಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಗೋವುಗಳು ಪ್ರಮುಖ ಪಾತ್ರ ವಹಿಸಿದ್ದವು. ಗೋವಿನ ಉತ್ಪನ್ನಗಳು ದೇಶದ ಆರ್ಥಿಕತೆಯ ಶಕ್ತಿಯಾಗಿದ್ದವು ಎಂಬುದನ್ನು ತಜ್ಞರುಗಳೇ ಅಧ್ಯಯನದ ಮೂಲಕ ಸಾಬೀತು ಮಾಡಿದ್ದರು. ಆದರೆ ಬ್ರಿಟೀಷರ ಆಡಳಿತಾವಧಿಯಲ್ಲಿ ಹಾಗೂ ನಂತರ ಅಧಿಕಾರದ ಚುಕ್ಕಾಣಿ ಹಿಡಿದು ಹಲವು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಸರ್ಕಾರ ಗೋವಿನ ಬಗೆಗಿದ್ದ ಪೂಜ್ಯನೀಯ ಭಾವನೆಯನ್ನು ಹೋಗಲಾಡಿಸುವ ಕೆಲಸ ಮಾಡಿತು. ಓಟ್‌ಬ್ಯಾಂಕ್‌ಗಾಗಿ, ಒಂದು ಸಮುದಾಯದ
(ಮೊದಲ ಪುಟದಿಂದ) ಓಲೈಕೆಗಾಗಿ ಗೋವುಗಳ ನಾಶಕ್ಕೆ ಅವಕಾಶ ಕಲ್ಪಿಸಿತು ಎಂದು ನಾಗೇಶ್ ಆರೋಪಿಸಿದರು. ಆದರೆ, ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರ ಗೋವುಗಳನ್ನು ಸಂರಕ್ಷಿಸಿ ಪೂಜಿಸುವ ನಿಟ್ಟಿನಲ್ಲಿ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಗೋಶಾಲೆಗಳ ಆರಂಭಕ್ಕೆ ಮುಂದಾಗಿದೆ ಎಂದು ಸಚಿವರು ನುಡಿದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗಿನಲ್ಲಿ ಗೋಹತ್ಯೆ, ಗೋಮಾಂಸ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಈ ನಿಯಮ ಹಿಂದಿನಿAದಲೂ ನಡೆದು ಬಂದಿದೆ ಎಂದರು. ಖಾಸಗಿ ಸಂಸ್ಥೆಯವರು ಸ್ವತಃ ತಾವೇ ಜಾಗ ಗುರುತಿಸಿ ಗೋ ಶಾಲೆ ಆರಂಭಿಸಬಹುದಾಗಿದೆ ಹೊರತು ಸರ್ಕಾರ ಜಾಗ ಒದಗಿಸುವುದಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಹಸುವನ್ನು ಸಾಕಿ ಅದರ ಹಾಲನ್ನು ಮಾರಿ ಶಿಕ್ಷಣ ಪಡೆದವರಿದ್ದಾರೆ; ಬದುಕು ಕಟ್ಟಿಕೊಂಡಿದ್ದಾರೆ. ಗೋವುಗಳನ್ನು ಪೋಷಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಜಿಲ್ಲೆಯ ಅಲ್ಲಲ್ಲಿ ಇರುವ ಬೀಡಾಡಿ ದನಗಳನ್ನು ತಂದು ಈ ಗೋ ಶಾಲೆಯಲ್ಲಿ ಸಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಕೆ. ನಿಡುಗಣೆಯಲ್ಲಿ ನಿರ್ಮಾಣವಾಗಿರುವ ಗೋ ಶಾಲೆ ಕಟ್ಟಡದ ಸುತ್ತಮುತ್ತಲಿನ ೨೪ ಎಕರೆ ಜಾಗದಲ್ಲಿ ೨೧ ಎಕರೆ ಜಾಗವನ್ನು ಗೋಶಾಲೆಗಾಗಿಯೇ ಮೀಸಲಿಡುವಂತಾಗಬೇಕು ಎಂದು ಶಾಸಕರುಗಳಾದ ರಂಜನ್ ಹಾಗೂ ಬೋಪಯ್ಯ ಅವರುಗಳು ಇದೇ ವೇಳೆ ಆಗ್ರಹಿಸಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ಸುಜಾಕುಶಾಲಪ್ಪ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಕೆ. ನಿಡುಗಣೆ ಗ್ರಾ.ಪಂ. ಅಧ್ಯಕ್ಷ ಡೀನ್ ಬೋಪಣ್ಣ ಉಪಸ್ಥಿತರಿದ್ದರು. ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ. ಬಿ. ದೇವಯ್ಯ, ಉಪ ವಿಭಾಗಾಧಿಕಾರಿ ನಂಜುAಡೇಗೌಡ, ಪಶುಪಾಲನಾ ಇಲಾಖೆ ಪ್ರಭಾರ ಉಪನಿರ್ದೇಶಕ ಡಾ. ಕೆ.ಎ. ಪ್ರಸನ್ನ, ತಹಶೀಲ್ದಾರ್ ಮಹೇಶ್ ಮತ್ತಿತರರು ಹಾಜರಿದ್ದರು.