ಮಡಿಕೇರಿ, ಅ. ೬ : ಗಗನವನ್ನೇ ಚುಂಬಿಸುವAತಹ ಝಗಮಗಿಸುವ ಬೆಳಕಿನ ಚಿತ್ತಾರ.., ಕಿವಿಗಡಚಿಕ್ಕುವ ಶಬ್ಧದೊಂದಿಗೆ ಪೌರಾಣಿಕ ಕಾಲಘಟ್ಟದ ಕಥೆಗಳ ಹರಿವು., ರಾಮಾಯಣ., ಸ್ಕಂದ ಪುರಾಣದಲ್ಲಿನ ಘಟನಾವಳಿಗಳ ಮಹಿಮೆಯ ಸಾರದೊಂದಿಗೆ ಸುರಾಸುರರ ಕಾಳಗಗಳನ್ನೊಳಗೊಂಡ ದಶಮಂಟಪಗಳ ಶೋಭಾಯಾತ್ರೆ ಮಂಜಿನ ನಗರಿ ಮಡಿಕೇರಿಯಲ್ಲಿ ಕಿನ್ನರ ಲೋಕವನ್ನೇ ಸೃಷ್ಟಿ ಮಾಡಿತ್ತು..! ಮುಂಜಾವಿನಲ್ಲಿ ವರುಣನ ಸಿಂಚನದ ನಡುವೆ ನಾಲ್ಕು ಶಕ್ತಿ ಕರಗ ದೇವತೆಗಳೊಂದಿಗೆ ಬನ್ನಿ ಕಡಿಯುವದರೊಂದಿಗೆ ನಾಡ ಹಬ್ಬ ವಿಜಯದಶಮಿಗೆ ತೆರೆ ಎಳೆಯಲಾಯಿತು. ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ವರ್ಣರಂಜಿತ ಉತ್ಸವಕ್ಕೆ ಸಾಕ್ಷೀಭೂತರಾದರು..! ವರುಣನ ಸಿಂಚನವು ಉತ್ಸವದ ಕಾವನ್ನು ತಂಪಾಗಿಸಿತು..!
ಐತಿಹಾಸಿಕ ಹಿನ್ನೆಲೆ ಇರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಜನರ ಸಹಭಾಗಿತ್ವದೊಂದಿಗೆ ಜನೋತ್ಸವವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಹತ್ತು ದಿನಗಳಿಂದ ವಿಜೃಂಭಣೆಯಿAದ ಆಚರಿಸಲಾಗಿದೆ. ಕಳೆದ ಸೆ.೨೬ರಂದು ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಪ್ರದಕ್ಷಿಣೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ತಾ. ೨೭ರಿಂದ ಒಂಭತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾ, ಜಾನಪದ ಉತ್ಸವ, ಕ್ರೀಡಾಕೂಟ, ಕವಿಗೋಷ್ಠಿಯೊಂದಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಜನೋತ್ಸವಕ್ಕೆ ಮೆರುಗು ತಂದು ಕೊಟ್ಟಿತ್ತು. ಕೊನೆಯ ದಿನವಾದ ವಿಜಯದಶಮಿಯಂದು ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಕರಗದೇವತೆಗಳೊಂದಿಗೆ ತೆರಳಿ ಮಹದೇವಪೇಟೆಯಲ್ಲಿರುವ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ದಶಮಿ ಸಂಪನ್ನಗೊAಡಿತು. ಮುಂಜಾನೆ ನಾಲ್ಕು ಗಂಟೆ ಬಳಿಕ ಕೊಂಚ ಮಳೆ ಸುರಿದಿದ್ದರಿಂದ ಜನರು ವಾಪಸ್ ಮರಳುತ್ತಿದ್ದುದು ಕಂಡುಬAದಿತು.
ಮಡಿಕೇರಿ ದಸರಾ ಹಬ್ಬದ ಪ್ರಮುಖ ಆಕರ್ಷಣೆ ದಶಮಂಟಪಗಳ ಶೋಭಾಯಾತ್ರೆಯಲ್ಲಿ ದಶ ಮಂಟಪಗಳು ಪಾಲ್ಗೊಂಡವು. ಪೌರಾಣಿಕ ಹಿನ್ನೆಲೆಯ ಕಥಾ ಸಾರಾಂಶದೊAದಿಗೆ ಉತ್ಸವ ಮೂರ್ತಿಗಳ ಚಲನವಲನಗಳನ್ನೊಳಗೊಂಡಿದ್ದ ಮಂಟಪಗಳು ಒಂದನ್ನೊAದು ಮೀರಿಸುವಂತಿದ್ದು, ಜನಾಕರ್ಷಣೆಗೊಳಗಾದವು.
ಹರಿದು ಬಂದ ಜನಸಾಗರ
ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ, ಕೊರೊನಾ ಕಾರಣಗಳಿಂದಾಗಿ ಎಲ್ಲಾ ಚಟುವಟಿಕೆಗಳು ಸೇರಿದಂತೆ ದಸರಾ ಕೂಡ ಕಳೆಗುಂದಿತ್ತು. ಆದರೆ ಈ ಬಾರಿ ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸರಕಾರ ರೂ. ಒಂದು ಕೋಟಿ ಅನುದಾನ ಬಿಡುಗಡೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ವೈಭವವನ್ನು ಮೈದಳೆದುಕೊಂಡ ಮಡಿಕೇರಿ ದಸರಾಕ್ಕೆ ಸಹಜವಾಗಿಯೇ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಪೊಲೀಸ್ ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಅಂದಾಜು ೭೦ ಸಾವಿರ ಮಂದಿ ಆಗಮಿಸಿದ್ದರು ಎಂದು ತಿಳಿದುಬಂದಿದೆ.
ನೂಕು ನುಗ್ಗಲು
ದಸರಾ ಹಬ್ಬವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಜನತೆ ಜನಜಂಗುಳಿಯ ನಡುವೆ ನೂಕು ನುಗ್ಗಲಿನಲ್ಲಿ ಸಿಲುಕಿಕೊಂಡು ಸಂಕಟ ಅನುಭವಿಸುವಂತಾಯಿತು. ವರ್ಷಂಪ್ರತಿಯAತೆ ನಗರ ಪೊಲೀಸ್ ಠಾಣೆ ಎದುರು ಈ ಬಾರಿಯೂ ಜನಜಂಗುಳಿ ಏರ್ಪಟ್ಟಿತ್ತು. ಮಂಟಪಗಳ ಪ್ರದರ್ಶನ ಸಂದರ್ಭ ಜನರು ಅತ್ತಿಂದಿತ್ತ ಸುಳಿದಾಡುವಾಗ ನೂಕು ನುಗ್ಗಲು ಏರ್ಪಟ್ಟಿತು. ಕೆಲವರಿಗಂತೂ ಉಸಿರಾಡಲೂ ಕೂಡ ಪರದಾಡುವಂತಾಯಿತು. ಓರ್ವ ಯುವತಿ ಹಾಗೂ ವೃದ್ಧರೋರ್ವರು ಅಸ್ವಸ್ಥರಾಗಿ ಅವರುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಪ್ರಸಂಗವೂ ಎದುರಾಯಿತು. ಇತ್ತ ಹಳೆಯ ಖಾಸಗಿ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಯಲ್ಲಿಯೂ ನೂಕು ನುಗ್ಗಲು ಏರ್ಪಟ್ಟಿತು. ಬಸ್ ನಿಲ್ದಾಣದಲ್ಲಿ ಮಂಟಪವೊAದು ಪ್ರದರ್ಶನದ ಬಳಿಕ ಅಲ್ಲಿಯೇ ನಿಲುಗಡೆಗೊಂಡು ಡಿಜೆ ಪ್ರದರ್ಶನ ನೀಡುತ್ತಿದ್ದುದರಿಂದ ಯುವಕರು ಕುಣಿಯುತ್ತಿದ್ದರು. ಇತ್ತ ಆಟೋ ನಿಲ್ದಾಣದ ಬಳಿ ಮತ್ತೊಂದು ಮಂಟಪದ ಪ್ರದರ್ಶನ ಇದ್ದುದರಿಂದ ಅಲ್ಲಿಯೂ ನೂಕು ನುಗ್ಗಲು ಉಂಟಾಯಿತು.
ಪಾಸ್ ಇದ್ದರೂ ಅಡೆ ತಡೆ..!
ದಸರಾ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳಿಗೆ, ಕಲಾವಿದರುಗಳಿಗೆ, ಮಾಧ್ಯಮದವರಿಗೆ ಕಾರ್ಯಕ್ರಮದ ಪಾಸ್ ಹಾಗೂ ವಾಹನ ಪಾಸ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಿಂದ ಮಾಡಲಾಗಿತ್ತು. ಆದರೆ, ಪೊಲೀಸ್ ಇಲಾಖೆಯಿಂದಲೇ ನಗರದೊಳಗಡೆ ಅಳವಡಿಸಲಾಗಿದ್ದ ಬ್ಯಾರಿಕೇಡ್ ಚೆಕ್‌ಪೋಸ್ಟ್ಗಳಲ್ಲಿ ಕೆಲವು ಗೃಹ ರಕ್ಷಕ ದಳದ ಸಿಬ್ಬಂದಿಗಳು ಪಾಸ್ ಇದ್ದವರನ್ನೂ ಕೂಡ ಒಳಬಿಡದೆ ತಡೆಹಿಡಿದ ಪ್ರಸಂಗ ಎದುರಾಯಿತು. ದಸರಾ ಕಾರ್ಯಕ್ರಮದ ಅತಿಥಿಗಳು, ಕಲಾವಿದರುಗಳನ್ನು ತಡೆದುದಲ್ಲದೆ, ಕೋರಿಕೊಂಡರೂ ಅವಕಾಶ ನೀಡದೆ ಸತಾಯಿಸಲಾಯಿತು. ಮಾತಿನ ಚಕಮಕಿಗಳು ಕೂಡ ನಡೆದವು. ಕೊನೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿವೈಎಸ್‌ಪಿ ಅವರುಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಯಿತು..!
ಸಾಂಸ್ಕೃತಿಕ ರಂಗು
ನವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಉತ್ಸವಕ್ಕೆ ಮೆರುಗು ನೀಡಿದವು. ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಗಳು ಕಲಾಸಕ್ತರ ಮನಕ್ಕೆ ಮುದ ನೀಡಿದವು.
ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್ ಸುಬ್ರಹ್ಮಣ್ಯ ತಂಡದಿAದ ನೃತ್ಯ ವೈಭವ, ಶರಣ್ ಅಯ್ಯಪ್ಪ, ವೈಷ್ಣವಿ ಅವರಿಂದ ಸಂಗೀತ ರಸಮಂಜರಿ, ಅನ್ವಿತ ಕುಮಾರ್ ತಂಡದಿAದ ಗೀತ ಗಾಯನ, ಚಲನಚಿತ್ರ ಹಿನ್ನಲೆಗಾಯಕಿ ಚೈತ್ರ ತಂಡದಿAದ ಸಂಗೀತ ರಸಮಂಜರಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ಕೊಡಗಿನ ರಾಹುಲ್ ರಾವ್ ಅವರಿಂದ ನೃತ್ಯ ಚಲನಚಿತ್ರ ನಟರಾದ ಭುವನ್‌ಪೊನ್ನಣ್ಣ, ಹರ್ಷಿಕಾ ಪೂಣಚ್ಚ ತಂಡದಿAದ ಕಾರ್ಯಕ್ರಮಗಳು ನಡೆದವು.
ಪೊಲೀಸ್ ಪಹರೆ
ಸಹಸ್ರಾರು ಮಂದಿ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದುದರಿಂದ ಪೊಲೀಸ್ ಇಲಾಖೆ ವತಿಯಿಂದ ಯಾವದೇ ಅಹಿತಕರ ಘಟನೆ ಸಂಭವಿಸದAತೆ ತಡೆಗಟ್ಟುವ ಸಲುವಾಗಿ ಬಿಗಿ ಬಂದೊಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಾಲ್ಕು ಗಂಟೆ ವೇಳೆಗೆ ನಗರದೊಳಗೆ ಯಾವದೇ ವಾಹನಗಳು ಪ್ರವೇಶಿಸದಂತೆ ತಡೆಗಟ್ಟುವ ಸಲುವಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ವಾಹನ ನಿಲುಗಡೆಗೆ ಜಿಲ್ಲಾ ಕ್ರೀಡಾಂಗಣ, ಎಪಿಎಂಸಿ ಆವರಣ, ಕಾನ್ವೆಂಟ್ ಬಳಿಯ ಮೈದಾನಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. @ಸಂತೋಷ್