*ಗೋಣಿಕೊಪ್ಪಲು, ಅ. ೬: ಸಂಸ್ಕೃತಿ, ನಾಡು -ನುಡಿ, ಆರೋಗ್ಯ, ಪರಿಸರದ ಕಾಳಜಿಯೊಂದಿಗೆ ೪೪ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ ಸ್ತಬ್ಧಚಿತ್ರಗಳು ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಕಣ್ಮನ ಸೆಳೆಯಿತು.
ನಾಡ ಹಬ್ಬ ದಸರಾ ಸಮಿತಿ ಆಯೋಜಿಸಿದ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಸಾಮಾಜಿಕ ಕಳಕಳಿ, ಪರಿಸರ ಪ್ರೇಮ, ಆರೋಗ್ಯ, ಶಿಕ್ಷಣ, ದೇಶಭಕ್ತಿ ಬಿಂಬಿಸುವ ಜವಾಬ್ದಾರಿಗಳನ್ನು ಸಂಘಟನೆಗಳು ಹೊತ್ತಿದ್ದವು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ. ಮಹೇಶ್ ಜೋಶಿ ಡೋಲು ಬಾರಿಸುವ ಮೂಲಕ ಸ್ತಬ್ಧ ಚಿತ್ರ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಸರ್ಕಾರಿ ಇಲಾಖೆಯ ಹಾಗೂ ವಿವಿಧ ಸಂಘ-ಸAಸ್ಥೆಗಳು ನಿರ್ಮಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಹೊರಟಿತು.
ಸರ್ವಂ ಸಮಿತಿ ನಿರ್ಮಿಸಿದ ಕಾಡಿನಿಂದ ನಾಡಿನಡೆಗೆ, ನಾಡಿನಿಂದ ರಾಷ್ಟ್ರಪತಿ ಭವನದವರೆಗೆ ಎಂಬ ಬುಡಕಟ್ಟು ಸಮುದಾಯದ ಸಾಧಕಿ ರಾಷ್ಟçಪತಿ ದ್ರೌಪದಿ ಮುರ್ಮು ಅವರ ಸಾಧನೆಯನ್ನ ಬಿಂಬಿಸಿರುವುದು ಗಮನಾರ್ಹವೆನಿಸಿತ್ತು.
ತಿತಿಮತಿ ರಾಮ ಮಂದಿರ ಸಮಿತಿ ನಿರ್ಮಿಸಿದ ವೀರ ಸಾವರ್ಕರ್ ಅವರ ಅಂಡಮಾನ್ ಕಾರಾಗೃಹ ಶಿಕ್ಷೆಯನ್ನು ತೋರಿಸುವ ಚಿತ್ರ ಸಾರ್ವಜನಿಕರಿಗೆ ಇತಿಹಾಸದ ಸಂದೇಶವಾಗಿತ್ತು. ಸಾವರ್ಕರ್ ಜೀವನದ ತುಣುಕುಗಳ ಅನಾವರಣ ಮಾಡಿತು.
ಅರುವತ್ತೊಕ್ಲು ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘ ಮತ್ತು ಶಾರದಾಂಭಾ ದಸರಾ ಸಮಿತಿ ‘ನಮ್ಮ ಮಕ್ಕಳು ನಮ್ಮ ಆಸ್ತಿ’ ಎಂಬ ಘೋಷಣೆಯಡಿ ಮಾದಕ ವ್ಯಸನದಿಂದ ಮಕ್ಕಳನ್ನ ಹೊರಗೆ ತನ್ನಿ ಮಕ್ಕಳನ್ನು ದೇಶದ ಆಸ್ತಿಯಾಗಿ ಮಾಡಿ ಎಂಬ ಸಂದೇಶ ಗಮನಾರ್ಹವಾಗಿತ್ತು.
ಪೊನ್ನಂಪೇಟೆ ಜಿಬಿ ಪುರುಷರ ಸ್ವ ಸಹಾಯ ಸಂಘದ ಸ್ತಬ್ಧ ಚಿತ್ರದಲ್ಲಿ ಕಾಡು ಬೆಳೆಸಿ ಉಸಿರು ಗಳಿಸಿ, ಮರ ಕಡಿಯದಿರಿ, ನಾಡು ತೊರೆಯದಿರಿ ಎಂಬ ಸಂದೇಶವಿತ್ತು.
ಗೋಣಿಕೊಪ್ಪಲು ಭಗತ್ ಸಿಂಗ್ ಯುವಕ ಸಂಘದ ವಿಶ್ವವನ್ನೇ ನುಂಗಿದ ಮಾನವ ಕೃತಕ ಬಾಂಬ್ ಕೊರೊನಾ ಮತ್ತು ದೇವತೆಗಳು ಸಮುದ್ರಮಂಥನ ಮಾಡುತ್ತಿರುವ ಬಗ್ಗೆ ಕಟ್ಟಿಕೊಟ್ಟ ಚಿತ್ರಣ ವೀಕ್ಷಕರನ್ನು ಆಕರ್ಷಿಸಿತು.
ಕೈಕೇರಿ ಪರಿಸರ ಪ್ರೇಮಿ ಸಂಘದ ಸದಸ್ಯರು ಸ್ವಚ್ಛ ಭಾರತ್ ಅಭಿಯಾನದ ಮೂಲಕ ಆರೋಗ್ಯ ಕಾಳಜಿಯನ್ನು ತೋರಿಸಿದರು.
ಅರ್ವತ್ತೊಕ್ಲು ಕಾಡ್ಲಯ್ಯಪ್ಪ ದಸರಾ ಸಮಿತಿ ರಚನೆಯ ಮೂಕ ಸಂದೇಶದಲ್ಲಿ ಹಾಲು ಮತ್ತು ಆಲ್ಕೋಹಾಲಿನ ಸೇವನೆಯಿಂದ ಉಂಟಾಗುವ ಪರಿಣಾಮಗಳ ಕುರಿತಾದ ಸಂದೇಶ ಸಾರಿತು.
ದೇವರಪುರ ಭಗತ್ ಸಿಂಗ್ ಯುವಕ ಸಂಘದ ರಾಮ ಮಂದಿರ ನಿರ್ಮಾಣದ ಚಿತ್ರಣ ಹಿಂದೂತ್ವದ ಪ್ರತೀಕವಾಗಿತ್ತು.
ಕೈಕೇರಿ ಹಿಂದೂಸ್ಥಾನ್ ಸಂಸ್ಥೆಯ ರೈತ ಮತ್ತು ಯೋಧ ಒಂದೇ ಮುಖದ ನಾಣ್ಯ ಹಾಗೂ ದೇಶದ ಮಾನ್ಯ ಎಂಬ ಸಂದೇಶದ ಚಿತ್ರ ಜನರ ಮನಸ್ಸಿನಾಳಕ್ಕೆ ಇಳಿಯಿತು.
ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಮಿಸಿದ ಚಿತ್ರ ಭೇಷ್ ಎನಿಸಿಕೊಂಡು ಶಿಕ್ಷಣ ಇಲಾಖೆಯ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ದೇಶದ ಆಸ್ತಿಯನ್ನಾಗಿ ನೋಡಿ ಎಂಬ ಸಂದೇಶ ಸಾರಿತು. ಆರೋಗ್ಯ ಇಲಾಖೆಯ ಯೋಜನೆÀಗಳ ಬಗ್ಗೆ ಗಮನಾರ್ಹ ಸಂದೇಶವನ್ನು ಕೇಂದ್ರೀಕರಿಸಿತು.
ತಾಲೂಕು ಪಂಚಾಯತ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಒಳಗೊಂಡ ಚಿತ್ರಣವನ್ನು ಪ್ರದರ್ಶನ ಮಾಡಲಾಯಿತು.
ಆರ್.ಎಂ.ಸಿ. ಆವರಣದಿಂದ ಉಮಾಮಹೇಶ್ವರಿ ದೇವಾಲಯದವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಜನಸಾಗರವೇ ನೆರೆದು ಸ್ತಬ್ಧಚಿತ್ರವನ್ನು ವೀಕ್ಷಿಸಿದರು. ಪ್ರತಿ ವರ್ಷ ಮಧ್ಯಾಹ್ನದ ನಂತರದ ಸ್ತಬ್ಧಚಿತ್ರ ಮೆರವಣಿಗೆ ನಡೆಯುತ್ತಿದ್ದು, ಈ ಬಾರಿ ಬೆಳಗ್ಗಿನ ಜಾವವೇ ಪ್ರಾರಂಭಿಸಿದ್ದು, ವಿಶೇಷವಾಗಿತ್ತು.
ಮೆರವಣಿಗೆಯ ಉದ್ದಕ್ಕೂ ನೆರೆದ ಜನರಿಗೆ ಶಿವಾಜಿ ಯುವ ಸೇನೆ, ಸ್ನೇಹ ಜೀವಿ ಸಂಘ, ಫೈವ್ ಬ್ರರ‍್ಸ್ ಆ್ಯಂಬ್ಯುಲೆನ್ಸ್ ವತಿಯಿಂದ ಬಿಸಿಲಿನ ದಾಹ ನೀಗಿಸಲು ಮಸಾಲಾ ಮಜ್ಜಿಗೆ ವಿತರಣೆ ಕಾರ್ಯ ನಡೆಯಿತು.
ಬುಡಕಟ್ಟು ಜನರ ನೃತ್ಯ, ಗೊಂಬೆ ಕುಣಿತ, ಕೀಲು ಕುಣಿತ, ಕುದುರೆ ಕುಣಿತಗಳು ಮಕ್ಕಳನ್ನು ರಂಜಿಸಿದವು ಮತ್ತು ಮೆರವಣಿಗೆಯ ಆಕರ್ಷಣೆಗೂ ಪ್ರಮುಖ ಕಾರಣವಾಯಿತು.
ನಾಡಹಬ್ಬ ದಸರಾ ಸಮಿತಿಯು ೩೪ನೇ ವರ್ಷದ ಆಚರಣೆಯ ಅಂಗವಾಗಿ ಸ್ತಬ್ಧಚಿತ್ರ ಮೆರವಣಿಗೆಯನ್ನು ಕಾವೇರಿ ದಸರಾ ಸಮಿತಿಯ ಸಹಯೋಗದೊಂದಿಗೆ ನಡೆಸಿತು. ಪ್ರತಿ ವರ್ಷದಂತೆ ಈ ಬಾರಿಯು ಗಮನ ಸೆಳೆಯುವಂತೆ ಈ ಬಾರಿಯೂ ಸಾರ್ವಜನಿಕರಿಗೆ ಹೊಸ ಅರಿವನ್ನು ಮೂಡಿಸಿತು.
ನಾಡಹಬ್ಬ ದಸರಾ ಸಮಿತಿ ಅಧ್ಯಕ್ಷ ಕಂಜಿತAಡ ಪ್ರವೀಣ್‌ಕುಶಾಲಪ್ಪ, ಉಪಾಧ್ಯಕ್ಷ ಮೈಕಲ್, ಗೌರವಾಧ್ಯಕ್ಷ ಅಜ್ಜಿಕುಟ್ಟೀರ ರಿಷಿ ಕಾವೇರಪ್ಪ, ಕಾರ್ಯಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ, ಕಾರ್ಯದರ್ಶಿ ಸುದರ್ಶನ್ ಬಾರಿತಾಯ, ಖಜಾಂಜಿ ಸುಂದರ್, ರಜಿತ್, ಗೌರವ ಸಲಹೆಗಾರರಾದ ಕೊಲ್ಲೀರ ಗೋಪಿ ಚಿಣ್ಣಪ್ಪ, ಪೊನ್ನಿಮಾಡ ಸುರೇಶ್, ಕಾಡ್ಯಮಾಡ ಗಿರೀಶ್ ಗಣಪತಿ, ಪದಾಧಿಕಾರಿಗಳಾದ ಕುಪ್ಪಂಡ ದತ್ತಾತ್ರಿ, ಸೂರಜ್, ವೇಣು, ಮಣಿ, ಸುಬ್ರಮಣಿ, ಬ್ರಿಜೇಶ್, ಶಿಜು, ಜೀವನ್, ಭಾಸ್ಕರ್, ರಾಜ, ಸೈಮನ್, ದೀಲಿಪ್, ಇಕ್ಬಾಲ್, ದೇವಯ್ಯ, ವಿನ್ಸೆಂಟ್, ನಾಗರಾಜ್, ಮಂಜು, ದಿನೇಶ್, ಸುಬ್ರಮಣಿ ಇದ್ದರು.
ಮೆರವಣಿಗೆಗೆ ಚಾಲನೆ ನೀಡಿದ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಇತರರು ಇದ್ದರು.
ಸರ್ಕಾರಿ ಇಲಾಖೆಗಳ ಟ್ಯಾಬ್ಲೋ ನಿರ್ವಹಣೆಯನ್ನು ಶಿಕ್ಷಣ ಇಲಾಖೆ ಪ್ರದರ್ಶಿಸಿದ ನಮ್ಮ ಮಕ್ಕಳು, ನಮ್ಮ ಆಸ್ತಿ ಮಾದಕ ವ್ಯಸನದಿಂದ ದೂರ ಉಳಿಸಿ ಎಂಬ ತಲೆಬರಹದಡಿಯ ಸ್ತಬ್ಧಚಿತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲಾ ಬೆಳಗಿ ಹಾಗೂ ಶಿಕ್ಷಕರು ನಿರ್ವಹಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವರದಕ್ಷಿಣೆ ಪಿಡುಗನ್ನು ತೊಡೆದು ಹಾಕಿ ಬಾಲ್ಯವಿವಾಹವನ್ನು ಮಟ್ಟಹಾಕಿ ಎಂಬ ಚಿತ್ರಣಕ್ಕೆ ನಿರ್ಮಾಣವಾದ ಟ್ಯಾಬ್ಲೋವನ್ನು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆೆ ತಾಲೂಕು ಅಧಿಕಾರಿ ರಾಜೇಶ್ ನಿರ್ವಹಿಸಿದರು.
ಆರೋಗ್ಯ ಇಲಾಖೆಯ ಉಚಿತ ಸೇವೆಯ ಬಗ್ಗೆ ಮಾಹಿತಿಯನ್ನು ಹೊಂದಿದ ಸ್ತಬ್ಧ ಚಿತ್ರವನ್ನು ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ನಿರ್ವಹಿಸಿದರು.
ಬಹುಮಾನಗಳು
ಸ್ತಬ್ಧ ಚಿತ್ರದಲ್ಲಿ ಪ್ರಥಮ ಸ್ಥಾನವನ್ನು ಗೋಣಿಕೊಪ್ಪ ಭಗತ್ ಸಿಂಗ್ ಯುವಕ ಸಂಘ ನಿರ್ಮಿಸಿದ ಕೊರೊನಾದಿಂದ ಮಕ್ಕಳ ಶಿಕ್ಷಣ ಹಾಳು ಮತ್ತು ಸಮುದ್ರದಿಂದ ಅಮೃತ ತೆಗೆಯುವ ದೇವ ದಾನವರ ಸ್ತಬ್ಧಚಿತ್ರ ಪಡೆದುಕೊಂಡಿತು.
ತಿತಿಮತಿ ರಾಮಮಂದಿರ ಸಮಿತಿ ನಿರ್ಮಿಸಿದ ವೀರ ಸಾವರ್ಕರ್ ಅವರ ಜೀವನ ಆಧಾರಿತದ ಚಿತ್ರವಾದ ಅಂಡಮಾನ್ ಜೈಲು, ಬ್ರಿಟೀಷರಿಂದ ಚಾಟಿ ಏಟು ಇನ್ನಿತರ ಮನಕಲಕುವ ಪ್ರದರ್ಶನ ದ್ವಿತೀಯ ಸ್ಥಾನವನ್ನು ಗಳಿಸಿತು.
ತೃತಿಯ ಸ್ಥಾನವನ್ನು ದ್ರೌಪದಿ ಮುರ್ಮು ಅವರ ಕಾಡಿನಿಂದ ನಾಡಿಗೆ ಸ್ತಬ್ಧ ಚಿತ್ರ ಪಡೆದುಕೊಂಡಿತು. -ವರದಿ : ಎನ್.ಎನ್. ದಿನೇಶ್