ಮಡಿಕೇರಿ, ಅ. ೬: ಇತರ ಪ್ರದೇಶಗಳಿಗಿಂತ ಭೌಗೋಳಿಕ ನೆಲೆಯಲ್ಲಿ ವಿಭಿನ್ನತೆ ಹೊಂದಿರುವ ಗುಡ್ಡಗಾಡು ಪ್ರದೇಶ ಮಡಿಕೇರಿಯಲ್ಲಿ ಬುಧವಾರ ಬಹುಶಃ ಜನತೆಗೆ ರಾತ್ರಿಯೆಂಬುದರ ಅರಿವಾಗಿರಲಿಲ್ಲ. ಇಡೀ ನಗರ ವ್ಯಾಪ್ತಿಯಲ್ಲಿ ಇರುಳಿನಲ್ಲಿ ಕೂಡ ಹಗಲಿನಂತಿತ್ತು. ವಿದ್ಯುತ್ ಬೆಳಕಿನ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ನಗರದೊಳಗೆ ದೇವಾನುದೇವತೆಗಳ... ಆಶೀರ್ವಚನ... ಆಸುರೀ ಶಕ್ತಿಗಳ ಆರ್ಭಟವನ್ನು ತಗ್ಗಿಸುವಂತೆ ಮಾಡುತ್ತಿದ್ದ ದಶಮಂಟಪಗಳ ಚಲನಾತ್ಮಕ ಕಲಾಕೃತಿಗಳ ಪರಿ ಹೊಸತೊಂದು ಲೋಕವನ್ನು ಸೃಷ್ಟಿಸಿತ್ತು. ಐತಿಹಾಸಿಕ ಹಿನ್ನೆಲೆ... ಧಾರ್ಮಿಕತೆಯ ಸಂದೇಶವನ್ನು ಪ್ರತಿಬಿಂಬಿಸುವ ಮೂಲಕ ಮಂಟಪಗಳ ಮೆರುಗು ಪ್ರತಿಫಲಿಸಿತ್ತು.

ಒಂದೆಡೆ ಜನತೆಗೆ ಆಕರ್ಷಣೆಯಾದರೆ ಮತ್ತೊಂದೆಡೆ ಧಾರ್ಮಿಕ ಹಿನ್ನೆಲೆಯನ್ನು ಪರಿಚಯಿಸುವ ಪೌರಾಣಿಕ ಕಥೆಗಳ ಮಹತ್ವ ಮಡಿಕೇರಿ ದಸರಾದ ವಿಭಿನ್ನತೆಯಾಗಿದೆ. ಚಲನ - ವಲನ ಸಹಿತವಾಗಿ ಆಸುರೀ ಶಕ್ತಿಗಳ ಆರ್ಭಟ... ಇದನ್ನು ದೇವಾನುದೇವತೆಗಳು ನಿಗ್ರಹಿಸಿ ದುಷ್ಟ ಸಂಹಾರ - ಶಿಷ್ಟರಕ್ಷಣೆಯನ್ನು ಮಾಡುವ ಸನ್ನಿವೇಶ ತಾಂತ್ರಿಕ ವ್ಯವಸ್ಥೆಯೊಂದಿಗೆ ಮೂಡಿ ಬಂದಿತು.

ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ಮಡಿಕೇರಿ ನಗರದಲ್ಲಿ ನಡೆದ ದಶಮಂಟಪಗಳ ವೈಭವಯುತ ಶೋಭಾಯಾತ್ರೆ ಜನರನ್ನು ಆಕರ್ಷಿಸುವುದರ ಜೊತೆಗೆ ಉತ್ಸವಕ್ಕೆ ಮೆರುಗು ನೀಡುವಲ್ಲಿ ಯಶಸ್ವಿಯಾಯಿತು. ಒಂದಕ್ಕಿAತ ಒಂದು ವಿಭಿನ್ನವಾಗಿ ಸಿದ್ಧಗೊಂಡಿದ್ದ ಮಂಟಪಗಳ ನಡುವೆ ಬಹುಮಾನಕ್ಕೆ ತೀವ್ರ ಪೈಪೋಟಿ ನಡೆದು ಕೋಟೆ ಮಹಾಗಣಪತಿ ಮಂಟಪ ಪ್ರಥಮ ಸ್ಥಾನ ಪಡೆಯಿತು. ದಂಡಿನ ಮಾರಿಯಮ್ಮ ದೇವಾಲಯ ದ್ವಿತೀಯ; ಕುಂದುರುಮೊಟ್ಟೆ ಶ್ರೀ ಚೌಟಿ ಮಾಯರಿಮ್ಮ ಹಾಗೂ ಕೋಟೆ ಮಾರಿಯಮ್ಮ ಮಂಟಪಗಳು ಜಂಟಿಯಾಗಿ ತೃತೀಯ ಬಹುಮಾನಕ್ಕೆ ಭಾಜನವಾದವು.

ಕೋಟೆ ಮಹಾಗಣಪತಿ ಮಂಟಪದಲ್ಲಿ ಮಹಾಗಣಪತಿಗೆ ಸಿಂಧೂರ ಗಣಪತಿ ನಾಮಪ್ರಾಪ್ತಿ ಕಥಾ ಸಾರಾಂಶವನ್ನು ಅಳವಡಿಸಲಾಗಿತ್ತು. ದಂಡಿನ ಮಾರಿಯಮ್ಮ ಮಂಟಪದಲ್ಲಿ ಭೂಲೋಕ ರಕ್ಷಣೆಗೆ ಪಾರ್ವತಿಯ ಶಾಕಂಭರಿ ರೂಪ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಮಂಟಪದಲ್ಲಿ ಶಿವನಿಂದ ಅಂಧಕಾಸುರನ ವಧೆ, ಕೋಟೆ ಮಾರಿಯಮ್ಮ

(ಮೊದಲ ಪುಟದಿಂದ) ಮಂಟಪದಲ್ಲಿ ಸೀತಾಪಹರಣ- ರಾವಣನ ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗಿತ್ತು. ಇನ್ನುಳಿದಂತೆ ಋಷಿಮುನಿಗಳ ತಪಸ್ಸಿಗೆ ಒಲಿಯುವ ಶಿವಪಾರ್ವತಿ ಕಥಾ ಸಾರಾಂಶದೊAದಿಗೆ ಪೇಟೆ ಶ್ರೀ ರಾಮಮಂದಿರ ದೇವಾಲಯ, ವಿಷ್ಣುವಿನಿಂದ ಮಧು ಖೈಟಭರ ಸಂಹಾರ ಕಥಾ ಸಾರಾಂಶದೊAದಿಗೆ ದೇಚೂರು ಶ್ರೀ ರಾಮಮಂದಿರ, ಗಣಪತಿಯಿಂದ ಗಜಾಸುರನ ವಧೆ ಕಥಾ ಸಾರಾಂಶದೊAದಿಗೆ ಶ್ರೀ ಕರವಲೆಭಗವತಿ ದೇವಾಲಯ, ಷಣ್ಮುಖನಿಂದ ತಾರಕಾಸುರನ ವಧೆ ಕಥಾ ಸಾರಾಂಶದೊAದಿಗೆ ಶ್ರೀ ಕೋದಂಡರಾಮ ದೇವಾಲಯ, ಆದಿಶಕ್ತಿಯಿಂದ ಶುಂಭನಿಶುAಭರ ಸಂಹಾರ ಕಥಾ ಸಾರಾಂಶದೊAದಿಗೆ ಶ್ರೀ ಚೌಡೇಶ್ವರಿ ದೇವಾಲಯ, ಗೋಮಾತೆಯ ಮಹಾತ್ಮೆ ಕಥಾ ಸಾರಾಂಶದೊAದಿಗೆ ಶ್ರೀ ಕಂಚಿಕಾಮಾಕ್ಷಿ ಮುತ್ತು ಮಾರಿಯಮ್ಮ ದೇವಾಲಯ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು.

ಪ್ರತಿಯೊಂದು ಮಂಟಪಗಳು ಝಗಮಗಿಸುವ ಪ್ರಭಾವಳಿ, ಕಣ್ಕುಕ್ಕುವ ಸ್ಟುಡಿಯೋ ಲೈಟ್‌ಗಳು, ಕಿವಿಗಡಚಿಕ್ಕುವ ಧ್ವನಿವರ್ಧಕದೊಂದಿಗೆ ಶೋಭಾಯಾತ್ರೆಯಲ್ಲಿ ಸಾಗಿದವು. ಮಂಟಪಗಳು ಪ್ರಸ್ತುತ ಪಡಿಸುತ್ತಿದ್ದ ಕಥಾ ಸಾರಾಂಶವನ್ನು ವೀಕ್ಷಿಸುತ್ತಿದ್ದ ಜನತೆ ಶಿಳ್ಳೆ, ಚಪ್ಪಾಳೆ, ಉದ್ಗಾರದೊಂದಿಗೆ ಸಂಭ್ರಮಿಸಿದರು. ಮಂಟಪಗಳ ಬಳಿ ಪ್ರದರ್ಶನದ ವೇಳೆ ಕಿಕ್ಕಿರಿದು ಜನ ಸೇರುತ್ತಿದ್ದುದರಿಂದ ನೂಕಾಟ ತಳ್ಳಾಟ ನಡೆದು ಉಸಿರುಗಟ್ಟಿಸುವ ವಾತಾವರಣವೂ ಅಲ್ಲಲ್ಲಿ ಸೃಷ್ಟಿಯಾಗಿತ್ತು. ದಶಮಂಟಪ ಸಮಿತಿಯು ತೀರ್ಪುಗಾರಿಕೆಯನ್ನು ಮುಂಜಾನೆ ೪ ಗಂಟೆಗೆ ಪೂರ್ಣಗೊಳಿಸುವುದಾಗಿ ಹೇಳಿತ್ತಾದರೂ ತೀರ್ಪುಗಾರಿಕೆ ಪೂರ್ಣಗೊಳ್ಳುವಾಗ ಸಮಯ ೫ ಗಂಟೆ ಕಳೆದಿತ್ತು. ಮುಂಜಾನೆ ವೇಳೆ ಸುರಿದ ಮಳೆ ಕೆಲಹೊತ್ತು ಮಂಟಪಗಳಿಗೆ ಅಡಚಣೆ ಉಂಟು ಮಾಡಿತ್ತು. ವಿಜೇತ ಮಂಟಪಗಳಿಗೆ ಗಾಂಧಿ ಮೈದಾನದ ಭವ್ಯ ವೇದಿಕೆಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಬಹುಮಾನಗಳನ್ನು ವಿತರಿಸಿದರು. ನಗರದ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮತ್ತಿತರರು ಹಾಜರಿದ್ದರು.

ಮೊದಲ ಬಹುಮಾನವಾಗಿ ೨೪ ಗ್ರಾಂ., ದ್ವಿತೀಯ ಬಹುಮಾನವಾಗಿ ೨೦ ಗ್ರಾಂ. ಹಾಗೂ ತೃತೀಯ ಬಹುಮಾನವಾಗಿ ೧೬ ಗ್ರಾಂ. ಚಿನ್ನದ ನಾಣ್ಯ ಒಳಗೊಂಡ ಫಲಕವನ್ನು ನೀಡಲಾಯಿತು. ಬಹುಮಾನ ಸ್ವೀಕರಿಸಿ ವಿಜೇತ ಮಂಟಪಗಳ ಸಮಿತಿಯವರು ವಾದ್ಯಗೋಷ್ಠಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿ, ವಿಜಯಯಾತ್ರೆ ನಡೆಸಿದರು.

- ಉಜ್ವಲ್ ರಂಜಿತ್