ಮಡಿಕೇರಿ, ಅ. ೭ : ಹಿಂದೂ ಮಲಯಾಳ ಸಮಾಜ ಸೋಮವಾರಪೇಟೆ ತಾಲೂಕು ಸಮಿತಿ ವತಿಯಿಂದ ತಾ.೯ರಂದು ಓಣಂ ಉತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ವಿ.ಎಂ.ವಿಜಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಅಂದು ಬೆಳಿಗ್ಗೆ ೬.೪೫ರಿಂದ ಸಂಜೆ ೭.೩೦ರವರೆಗೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ೬.೪೫ಕ್ಕೆ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದಾಸ್ ಉದ್ಘಾಟಿಸುವರು. ೯ಗಂಟೆಗೆ ಮುತ್ತಪ್ಪ ದೇವಾಲಯದಿಂದ ಸಿಂಗಾರಿ ಮೇಳ ವಾದ್ಯಗೋಷ್ಠಿ ಯೊಂದಿಗೆ ಓಣಾಘೋಷ ಯಾತ್ರೆ ಹೊರಡಲಿದ್ದು, ತಾವೇ ಚಾಲನೆ ನೀಡಲಿದ್ದು, ಓಣಂ ಉತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್ ಉಪಸ್ಥಿತರಿರುವರು ಎಂದು ತಿಳಿಸಿದರು.
೧೧ ಗಂಟೆಗೆ ಸೋಲೂರಿನ ಆರ್ಯ ಈಡಿಗ ಮಹಾ ಸಂಸ್ಥಾನದ ಸ್ತಾಪಕಾಧ್ಯಕ್ಷ ವಿಖ್ಯಾತನಂದ ಸ್ವಾಮೀಜಿ, ಕೇರಳದ ಕಾಞಂಗಾಡ್ನ ಗೃಹಸ್ಥಾಶ್ರಮದ ಗಂಗಾಜಿ ನಾಯರ್ ಅವರುಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಸಬಾ ಕಾರ್ಯಕ್ರಮ ದಲ್ಲಿ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ಕುಮಾರ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಸುಜಾ ಕುಶಾಲಪ್ಪ, ಮಾಜಿ ಸಚಿವ ಬಿ.ಎ. ಜೀವಿಜಯ, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಹಿಂದೂ ಮಲಯಾಳ ಸಮಾಜ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಕೆ.ಎಸ್. ರಮೇಶ್, ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿರುವರೆಂದು ತಿಳಿಸಿದರು.
ಸನ್ಮಾನ
ಕಾರ್ಯಕ್ರಮದಲ್ಲಿ ಹತ್ತನೇ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಹಾಗೂ ಸಮಾಜದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಮಾಡಲಾಗುವದೆಂದು ವಿಜಯ ತಿಳಿಸಿದರು.
ಸಮಾರೋಪ
ಮಧ್ಯಾಹ್ನ ೩ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ ೫ ಗಂಟೆಗೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಮಾಜದ ಸಲಹೆಗಾರರು ಹಾಗೂ ಕಾರ್ಯಕಾರಿ ಮಂಡಳಿಯವರು ಉಪಸ್ಥಿತರಿರುವರು. ಎಸ್ಎನ್ಡಿಪಿ ತಾಲೂಕು ಘಟಕದ ಅಧ್ಯಕ್ಷ ಟಿ.ಆರ್. ವಾಸುದೇವ್ ಸಮಾರೋಪ ಭಾಷಣ ಮಾಡುವರು. ನಂತರ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ೬.೪೫ರಿಂದ ೮.೩೦ರವರೆಗೆ ಪೂಕಳಂ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ನಿರ್ದೇಶಕ ಕೆ.ಸಿ. ಕಾವೇರಪ್ಪ, ಸಲಹೆಗಾರ ರಮೇಶ್ ಪಿಳ್ಳೆö ಇದ್ದರು.