ಮಧ್ಯಪ್ರದೇಶದ ಇಂದೋರ್ ಸತತ ೬ನೇ ಬಾರಿಗೆ ದೇಶದಲ್ಲೇ ಸ್ವಚ್ಛ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಯ ಕಸ ನಿರ್ವಹಣೆ ಇತರ ಪ್ರದೇಶಗಳಿಗೆ ಪಾಠವೂ ಹೌದು. ಆಡಳಿತದ ಜೊತೆಗೆ ಜನಸಾಮಾನ್ಯರೂ ಕೈಜೋಡಿಸಿದರೆ ಯಾವುದು ಕೂಡ ಅಸಾಧ್ಯವಲ್ಲ ಎನ್ನುವ ಸಂದೇಶವೂ ಇಲ್ಲಿ ಸಿಗುತ್ತದೆ.
ಇಂದೋರ್ನಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ವಾಹನಗಳು ೨೦೧೭ ರಿಂದಲೂ ‘ಇಂದೋರ್ ಹುವಾ ಹೈ ನಂಬರ್ ಒನ್’ (ಇಂದೋರ್ ನಂಬರ್ ಒನ್) ಎನ್ನುವ ಬಾಲಿವುಡ್ ಗಾಯಕ ಶಾನ್ ಧ್ವನಿಯಲ್ಲಿರುವ ಹಾಡನ್ನು ಹೆಮ್ಮೆಯಿಂದ ಕೇಳಿಸುತ್ತಲೇ ಬರುತ್ತಿದೆ. ಇಲ್ಲಿ ಕಸದ ವಾಹನಗಳು ಬೆಳಗ್ಗೆ ಮಾತ್ರ ಬರುವುದಿಲ್ಲ. ಸೂರ್ಯ ನೆತ್ತಿಯ ಮೇಲೆ ಬಂದ ನಂತರವೂ ಎದ್ದೇಳುವವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಮಧ್ಯಾಹ್ನ ಬಂದು ತ್ಯಾಜ್ಯ ತೆಗೆದುಕೊಂಡು ಹೋಗುತ್ತವೆ.
ನಾವು ಇನ್ನು ಕೂಡ ಒಣ ಮತ್ತು ಹಸಿ ಕಸ ವಿಂಗಡಿಸಿ ಕೊಡುವುದಕ್ಕೇ ಸೋಮಾರಿತನ ತೋರಿಸುತ್ತಿದ್ದೇವೆ. ಆದರೆ ಇಂದೋರ್ನಲ್ಲಿ ಮೂಲದಲ್ಲೇ ಒಣಕಸ, ಹಸಿಕಸ ಮಾತ್ರವಲ್ಲದೆ ಪ್ಲಾಸ್ಟಿಕ್ ತ್ಯಾಜ್ಯ, ಎಲೆಕ್ಟಾçನಿಕ್ ತ್ಯಾಜ್ಯ, ಗೃಹಬಳಕೆಯ ಸ್ವಚ್ಛತಾ ತ್ಯಾಜ್ಯ, ಅಪಾಯ ಕಾರಿ ತ್ಯಾಜ್ಯ ಎಂದು ೬ ಬಗೆಯಲ್ಲಿ ವಿಂಗಡಿಸಿ ಕಸದ ವಾಹನಗಳಿಗೆ ಕೊಡುವುದು ಕಡ್ಡಾಯವಾಗಿದೆ. ತಪ್ಪಿದರೆ ದಂಡ ವಿಧಿಸಲಾಗುತ್ತದೆ ಯಾದರೂ ಶೇ. ೯೯ ರಷ್ಟು ಪ್ರಮಾಣದಲ್ಲಿ ವಿಂಗಡಣೆಯಾದ ಕಸ ಮಾತ್ರ ಕಸ ಸಂಗ್ರಹಿಸುವ ವಾಹನಕ್ಕೆ ಬರುತ್ತದೆ.
೨೦೧೬ ರಿಂದ ಈಚೆಗೆ ಇಂದೋರ್ನಲ್ಲಿ ರಸ್ತೆ ಬದಿಯಲ್ಲಿ ಕಸದ ತೊಟ್ಟಿಗಳೇ ಇಲ್ಲ. ಶೇ. ೧೦೦ ರಷ್ಟು ಪ್ರಮಾಣದಲ್ಲಿ ಇಲ್ಲಿ ವಿಂಗಡಿಸಿದ ಕಸಗಳನ್ನು ನೇರವಾಗಿ ಮನೆಗಳಿಂದಲೇ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಎನ್ಜಿಒಗಳ ಸಹಕಾರ ಪಡೆದುಕೊಂಡು ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಕಸದ ಮರುಬಳಕೆ, ಕಾಂಪೋಸ್ಟ್ ತಯಾರಿಕೆಗೆ ಆದ್ಯತೆ ನೀಡಲಾಗುತ್ತಿದ್ದು ಲಭ್ಯವಿರುವ ತಂತ್ರಜ್ಞಾನಗಳನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಇಂದೋರ್ನಲ್ಲಿ ದಿನಕ್ಕೆ ಸರಿಸುಮಾರು ೧೨೦೦ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದರೂ ವಿಲೇವಾರಿಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕಸ ಸಂಗ್ರಹಿಸುವ ೪೬೮ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗಿದ್ದು, ಇವುಗಳ ಚಲನವಲನವನ್ನು ‘ಕಮಾಂಡ್ ಸೆಂಟರ್’ನಿAದ ಗಮನಿಸಲಾಗುತ್ತಿದೆ. ಪ್ರತಿ ವಾಹನ ಸಂಚರಿಸುವ ಮಾರ್ಗ, ಅದು ನಿಲ್ಲಬೇಕಾದ ಸ್ಥಳ, ಸಮಯ, ಸಂಚರಿಸುವ ಮಾರ್ಗದಲ್ಲಿನ ಅಡೆ-ತಡೆ, ಚಾಲಕನ ಅನಾರೋಗ್ಯ ಎಲ್ಲವನ್ನೂ ಕುಳಿತಲ್ಲಿಂದಲೇ ಗಮನಿಸಲಾಗುತ್ತಿರುತ್ತದೆ. ಹಾಗಾಗಿ ಮೂಲದಲ್ಲೇ ಕಸ ಸಂಗ್ರಹದ ಮೇಲೆ ಸ್ಥಳೀಯ ಆಡಳಿತಕ್ಕೆ ನಿಗಾ ಇಡಲು ಸಾಧ್ಯವಾಗಿದೆ.
ಪ್ರತಿದಿನ ೬೪೫ ಟನ್ಗಳಷ್ಟು ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಸಂಬAಧಿಸಿದ ಉದ್ಯಮಗಳಿಗೆ ಮಾರಾಟ ಮಾಡಲಾಗುತ್ತದೆ. ದಿನಕ್ಕೆ ೧.೫ ಟನ್ ಆಹಾರ ತ್ಯಾಜ್ಯ ಸೇರಿದಂತೆ ೫೫೦ ಟನ್ಗಳಷ್ಟು ತ್ಯಾಜ್ಯವನ್ನು ಕಾಂಪೋಸ್ಟ್ ತಯಾರಿಸಲು ಬಳಸ ಲಾಗುತ್ತದೆ. ಇದನ್ನು ರೈತರಿಗೆ ಮಾರಾಟ ಮಾಡುವ ಮೂಲಕವೂ ಆದಾಯ ಗಳಿಸಲಾಗುತ್ತಿದೆ. ನಿರ್ಮಾಣ ತ್ಯಾಜ್ಯವನ್ನು ಇಟ್ಟಿಗೆ, ಟೈಲ್ಸ್, ಫುಟ್ಪಾತ್ ಅಂಚುಗಳ ಕಚ್ಚಾ ವಸ್ತು ತಯಾರಿಗೆ ಬಳಸಲಾಗುತ್ತದೆ. - ಸುನಿಲ್ ಪೊನ್ನೇಟಿ