೨೩ ಮಕ್ಕಳು ಸೇರಿ ೩೫ ಮಂದಿಗೆ ಗುಂಡಿಕ್ಕಿ ಕೊಂದು, ಆತ್ಮಹತ್ಯೆಗೆ ಶರಣಾದ ಬಂದೂಕುಧಾರಿ
ಥಾಯ್ಲೆAಡ್, ಅ. ೬: ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದಲ್ಲಿ ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಗುರುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ೨೩ ಮಕ್ಕಳು ಸೇರಿದಂತೆ ಸುಮಾರು ೩೫ ಮಂದಿ ಸಾವನ್ನಪ್ಪಿದ್ದಾರೆ. ಲ್ಯಾಂಫು ಪಟ್ಟಣದ ಮಧ್ಯಭಾಗದಲ್ಲಿ ಬಂದೂಕುಧಾರಿಯು ಮಧ್ಯಾಹ್ನದ ವೇಳೆಗೆ ಗುಂಡಿನ ದಾಳಿ ನಡೆಸಿದ್ದಾನೆ. ಸಾವಿಗೀಡಾದವರಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಬಂದೂಕುಧಾರಿ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು ಡೇ-ಕೇರ್ ಸೆಂಟರ್‌ನಲ್ಲಿ ಗುಂಡಿನ ದಾಳಿ ನಡೆಸಿದ ನಂತರ ತನ್ನ ಕುಟುಂಬವನ್ನು ಶೂಟ್ ಮಾಡಿ ಬಳಿಕ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಂದೂಕುಧಾರಿಯನ್ನು ಪನ್ಯಾ ಖಮ್ರಾಬ್ ಎಂದು ಗುರುತಿಸಲಾಗಿದ್ದು, ಕಳೆದ ವರ್ಷ ಮಾದಕವಸ್ತು ಸೇವನೆಗಾಗಿ ಸೇನಾಪಡೆಯಿಂದ ವಜಾಗೊಂಡಿದ್ದ ಎಂದು ದಾಳಿ ನಡೆದ ಪ್ರಾಂತ್ಯದ ಪೊಲೀಸ್ ಕರ್ನಲ್ ಜಕ್ಕಪಟ್ ವಿಜಿತ್ರೈತಯಾ ಹೇಳಿದ್ದಾರೆ.
ಗ್ಯಾಂಬಿಯಾದಲ್ಲಿ ೬೬ ಮಕ್ಕಳ ಸಾವು
ಚಂಡೀಗಢ, ಅ. ೬: ಸೋನಿಪತ್ ಮೂಲದ ಸಂಸ್ಥೆಯೊAದು ತಯಾರಿಸಿದ ನಾಲ್ಕು ಕೆಮ್ಮಿನ ಸಿರಪ್‌ಗಳ ಮಾದರಿಗಳನ್ನು ಪರೀಕ್ಷೆಗಾಗಿ ಕೋಲ್ಕತ್ತಾದ ಕೇಂದ್ರೀಯ ಔಷಧ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಗುರುವಾರ ಹೇಳಿದ್ದಾರೆ. ಗ್ಯಾಂಬಿಯಾದಲ್ಲಿ ಸಿರಫ್ ಸೇವಿಸಿದ ಬಳಿಕ ಮೃತಪಟ್ಟ ೬೬ ಮಕ್ಕಳ ಸಾವಿಗೆ ಈ ಕೆಮ್ಮಿನ ಸಿರಫ್ ಕಾರಣವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ ನಂತರ ಹರಿಯಾಣ ಸರ್ಕಾರ ಸಿರಪ್‌ಗಳ ಮಾದರಿಯನ್ನು ಕೋಲ್ಕತ್ತಾ ಲ್ಯಾಬ್‌ಗೆ ಕಳುಹಿಸಿದೆ. ಹರ್ಯಾಣದ ಸೋನೆಪತ್ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ತಯಾರಿಸಿದೆ ಎನ್ನಲಾದ ನಾಲ್ಕು "ಕಲುಷಿತ" ಮತ್ತು "ಕೆಳಮಟ್ಟದ" ಕೆಮ್ಮು ಸಿರಪ್‌ಗಳು ಪಶ್ಚಿಮ ಆಫ್ರಿಕಾದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಬುಧವಾರ ಎಚ್ಚರಿಕೆ ನೀಡಿತ್ತು. ಭಾರತದ ಔಷಧಿ ನಿಯಂತ್ರಕ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿAದ ಈಗಾಗಲೇ ತನಿಖೆಯನ್ನು ಪ್ರಾರಂಭಿಸಲಾಗಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಡಿಕೆಶಿ ಮನವಿ ತಿರಸ್ಕರಿಸಿದ ಇಡಿ
ಮೈಸೂರು, ಅ. ೬: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ತಾ. ೭ ರಂದು (ಇಂದು) ದೆಹಲಿಯಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ತಾವು ಮಾಡಿದ್ದ ಮನವಿಯನ್ನು ಜಾರಿ ನಿರ್ದೇಶನಾಲಯ (ಇಡಿ) ತಿರಸ್ಕರಿಸಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ. ತಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿದ ನಂತರ ತಾ. ೭ ರಂದು ವಿಚಾರಣೆಗೆ ಹಾಜರಾಗಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದಾಗಿ ಡಿಕೆಶಿ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಮನವಿ ತಿರಸ್ಕರಿಸಿದ ಇಡಿ ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಹೊಸ ಸಂದೇಶದಲ್ಲಿ ಸೂಚಿಸಿದೆ.
ವಿಷಾಹಾರ ಸೇವಿಸಿ ಮೂರು ಸಾವು: ೧೧ ಮಂದಿ ಆಸ್ಪತ್ರೆಗೆ
ಕೊಯಮತ್ತೂರು, ಅ. ೬: ತಿರುಪುರದ ಶಿಶುಪಾಲನಾ ಕೇಂದ್ರದಲ್ಲಿ ಇಂದು ವಿಷಾಹಾರ ಸೇವನೆಯಿಂದ ಮೂವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಅಸ್ವಸ್ಥಗೊಂಡಿರುವ ೧೧ ಬಾಲಕರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕರು ಬುಧವಾರ ರಾತ್ರಿ ಊಟಕ್ಕೆ 'ರಸ' ಮತ್ತು ಲಡ್ಡು ಮಿಶ್ರಿತ ಅನ್ನವನ್ನು ಸೇವಿಸಿದ್ದರು. ನಂತರ ಅವರಲ್ಲಿ ಕೆಲವರಿಗೆ ವಾಂತಿ ಮತ್ತು ಭೇದಿಯಾಗಿತ್ತು. ಇಂದು ಬೆಳಿಗ್ಗೆ ಸಹ ಅವರು ಉಪಹಾರ ಸೇವಿಸಿದರು. ನಂತರ ಅವರ ಸ್ಥಿತಿ ಹದಗೆಟ್ಟಿದ್ದು ಕೆಲವರು ಪ್ರಜ್ಞಾಹೀನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರೆಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ತಿರುಪುರ ಮತ್ತು ಅವಿನಾಶಿಯ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು. ಆದರೆ, ೮ ರಿಂದ ೧೩ ವರ್ಷದೊಳಗಿನ ಮೂವರು ಬಾಲಕರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇತರರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ತಿರುಪುರ ಜಿಲ್ಲಾಧಿಕಾರಿ ಎಸ್. ವಿನೀತ್ ಅವರು, ವಿಷಾಹಾರದ ಪ್ರಾಥಮಿಕ ವರದಿಗಳ ನಂತರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಐಸಿಯುನಲ್ಲಿ ಮುಲಾಯಂ ಸಿಂಗ್ ಯಾದವ್
ಗುರುಗ್ರಾಮ, ಅ. ೬: ಸಮಾಜವಾದಿ ಪಕ್ಷ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬAದಿಲ್ಲ. ಇಲ್ಲಿನ ಮೇದಾಂತ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಗುರುವಾರ ಹೇಳಿದೆ. ೮೨ ವರ್ಷದ ಮುಲಾಯಂ ಸಿಂಗ್ ಯಾದವ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದ್ದು, ಅವರಿಗೆ ಸಮಗ್ರ ತಜ್ಞರ ತಂಡದಿAದ ಜೀವ ರಕ್ಷಕ ಔಷಧಗಳನ್ನು ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ಮುಲಾಯಂ ಸಿಂಗ್ ಯಾದವ್ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಿಸಿಸಿಗಳಿಂದ ಮಲ್ಲಿಕಾರ್ಜುನ ಖರ್ಗೆಗೆ ಬಹಿರಂಗ ಬೆಂಬಲ
ನವದೆಹಲಿ, ಅ. ೬: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಹಲವು ಪ್ರದೇಶ ಕಾಂಗ್ರೆಸ್ ಸಮಿತಿಗಳು (ಪಿಸಿಸಿ) ಶಶಿ ತರೂರ್ ಅವರ ವಿರುದ್ಧ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ಘೋಷಿಸಿವೆ. ತಿರುವನಂತಪುರA ಸಂಸದ ಶಶಿ ತರೂರ್ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಹಿರಿಯ ನಾಯಕರ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಕಣಕ್ಕಿಳಿದಿದ್ದು, ತಾ. ೧೭ ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ತಾ. ೮ ಕೊನೆಯ ದಿನವಾಗಿದೆ. ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರವು, ಪಕ್ಷದ ಯಾವುದೇ ಪದಾಧಿಕಾರಿಗಳು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರ ಪ್ರಚಾರ ಮಾಡದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ, ತೆಲಂಗಾಣ ಮತ್ತು ಕೇರಳದ ಪಿಸಿಸಿಗಳು ಖರ್ಗೆ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿವೆ.
ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
ನವದೆಹಲಿ, ಅ. ೬: ೨೦೨೨ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಫ್ರೆಂಚ್‌ನ ಬರಹಗಾರ್ತಿ ಅನ್ನಿ ಎರ್ನಾಕ್ಸ್ ಭಾಜನರಾಗಿದ್ದಾರೆ. ೮೨ ವರ್ಷದ ಅನ್ನಿ ಎರ್ನಾಕ್ಸ್, ೩೦ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಎರ್ನಾಕ್ಸ್ ಲಿಂಗ, ಭಾಷೆ ಮತ್ತು ವರ್ಗಕ್ಕೆ ಸಂಬAಧಿಸಿದAತೆ ಬಲವಾದ ಅಸಮಾನತೆಗಳಿಂದ ಗುರುತಿಸಲಾದ ಜೀವನವನ್ನು ಸ್ಥಿರವಾಗಿ ಮತ್ತು ವಿವಿಧ ಕೋನಗಳಿಂದ ಶೋಧಿಸುತ್ತಾರೆ ಎಂದು ನೊಬೆಲ್ ಸಮಿತಿ ಹೇಳಿದೆ. ಸ್ವೀಡಿಷ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ನೊಬೆಲ್ ಸಾಹಿತ್ಯ ವಿಭಾಗದ ವಿಜೇತರನ್ನು ತಾ. ೬ ರಂದು ಸ್ವೀಡನ್‌ನ ಸ್ಟಾಕ್ ಹೋಮ್‌ನಲ್ಲಿ ಘೋಷಿಸಿದರು. ಎರ್ನಾಕ್ಸ್ ತಮ್ಮ ಬರವಣಿಗೆ ಮೂಲಕ ಸಾಮಾಜಿಕ ಅಸಮಾನತೆಯ ಬಗ್ಗೆ ನಮ್ಮ ಕಣ್ಣುಗಳನ್ನು ತೆರೆಸುತ್ತಾರೆ ಎಂದು ನೋಬೆಲ್ ಸಮಿತಿ ಪ್ರಶಂಸೆ ವ್ಯಕ್ತಪಡಿಸಿದೆ. ಸ್ವೀಡಿಷ್ ಅಕಾಡೆಮಿಯಿಂದ ನೀಡಲಾಗುವ ಈ ಪ್ರಶಸ್ತಿ ೧೦ ಮಿಲಿಯನ್ ಸ್ವೀಡಿಷ್ ಕ್ರೌನ್ಸ್ ($೯೧೪,೭೦೪) ಮೌಲ್ಯ ಹೊಂದಿದೆ.