*ಗೋಣಿಕೊಪ್ಪ, ಅ. ೬: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕಾವೇರಿ ದಸರಾ ಸಮಿತಿ ಸಹಯೋಗದಲ್ಲಿ ನಡೆದ ೪೪ನೇ ವರ್ಷದ ಗೋಣಿಕೊಪ್ಪ ದಸರಾಕ್ಕೆ ಸಂಭ್ರಮದ ತೆರೆ ಎಳೆಯಲಾಯಿತು. ಶೋಭಾಯಾತ್ರೆ ಯಲ್ಲಿ ಭಗವತಿ, ಯುವ ದಸರಾ ಮತ್ತು ಶಾರದಾಂಭ ಮಂಟಪಗಳು ಅತ್ಯುತ್ತಮ ಮಂಟಪ ಪ್ರಶಸ್ತಿಗಳಿಗೆ ಭಾಜನವಾದವು. ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಸೀಗೆತೋಡಿನಲ್ಲಿ ವಿಸರ್ಜಿಸಲಾಯಿತು. ಶೋಭಾಯಾತ್ರೆಯ ಮಂಟಪಗಳಿಗೆ ನೀಡುತ್ತಿದ್ದ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳನ್ನು ರದ್ದು ಪಡಿಸಿ ‘ಬೆಸ್ಟ್ ತ್ರಿ’ ಬಹುಮಾನ ನೀಡಲಾಯಿತು.

ಕೈಕೇರಿ ಭಗವತಿ, ಯುವ ದಸರಾ ಸಮಿತಿ ಮತ್ತು ಮೈಸೂರಮ್ಮ ನಗರದ ಶಾರದಾಂಭ ಸಮಿತಿಯ ಮಂಟಪಗಳು ಅತ್ಯುತ್ತಮ ಮಂಟಪ ಪ್ರಶಸ್ತಿ ಪಡೆದುಕೊಂಡವು. ಕೈಕೇರಿ

ಭಗವತಿ ದಸರಾ ಸಮಿತಿಯು ಚಾಮುಂಡೇಶ್ವರಿಯಿAದ ಮಹಿಷಾಸುರನ ವಧೆ ಕಥಾನಕಕ್ಕೆ ಜೀವ ತುಂಬಿತು. ಮಹಿಷಾಸುರನ ವಿರುದ್ಧ ಮೊದಲು ಸೋಲು ನಡೆದ ನಂತರ, ಮತ್ತಷ್ಟು ಶಕ್ತಿಗಾಗಿ ಪ್ರಾರ್ಥಿಸಿದಾಗ ಬ್ರಹ್ಮ, ವಿಷ್ಣು, ಮಹೇಶ್ವರ ಶಕ್ತಿ ಪಡೆದುಕೊಂಡು ಚಾಮುಂಡೇಶ್ವರಿ ಸಂಹಾರ ಮಾಡುವ ಕಥಾನಕಕ್ಕೆ ೨ ಜೆಸಿಬಿ, ೧ ಟ್ರಾö್ಯಕ್ಟರ್, ಹಿಟಾಚಿ ಬಳಸಲಾಗಿತ್ತು.

ಯುವ ದಸರಾ ಸಮಿತಿಯು ವಿಷ್ಣು ಪುರಾಣದ ಕಥೆಯಲ್ಲಿ ಹಯಗ್ರೀವನಿಂದಲೇ ವಿಷ್ಣು ಅವತಾರದಲ್ಲಿ ಸಂಹಾರ ನಡೆಯುವ ಕಥೆ ಮೂಡಿ ಬಂತು. ೧ ಜೆಸಿಬಿ, ಕ್ರೇನ್, ೨ ಟ್ರಾö್ಯಕ್ಟರ್, ಆರ್ಟ್ ಇತ್ತು. ಮೈಸೂರಮ್ಮ ನಗರದ ಶಾರದಾಂಭ ದಸರಾ ಸಮಿತಿ ಯುವ ವಿಷ್ಣು ಪುರಾಣದ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿತು. ಭಕ್ತ ಪ್ರಹ್ಲಾದ ಬೇಡಿಕೆಗೆ ವಿಷ್ಣು ನರಸಿಂಹನ ಅವತಾರ ತಾಳಿ ಹಿರಣ್ಯ ಕಶ್ಯಪನ ವಧೆ ಕಥೆಗೆ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು. ೧೨ ಕ್ಕೂ ಹೆಚ್ಚು ಕಲಾಕೃತಿಗಳೊಂದಿಗೆ ಟ್ರಾö್ಯಕ್ಟರ್, ಕ್ರೇನ್, ಲಾರಿ ಸೇರಿದಂತೆ ೬ ವಾಹನಗಳನ್ನು ಬಳಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿತು.

ಕಾವೇರಿ ದಸರಾ ಸಮಿತಿಯ ಚಾಮುಂಡೇಶ್ವರಿ ದೇವಿ ಹೊತ್ತ ಮಂಟಪವನ್ನು ನವಮಂಟಪಗಳು ಹಿಂಬಾಲಿಸಿದವು. ಸರ್ವರ ದಸರಾ ಸಮಿತಿಯು ಆದಿಪರಾಶಕ್ತಿಯಿಂದ ಶುಂಭ, ನಿಶುಂಭನ ಸಂಹಾರದ ಕಥೆ ಮೂಡಿ ಬಂತು. ಕ್ರೇನ್ ೩, ೧ ಟ್ರಾö್ಯಕ್ಟರ್, ಬಳಸಲಾಗಿತ್ತು. ನವಚೇತನ ದಸರಾ ಸಮಿತಿ ವತಿಯಿಂದ ದೇವಿ ಚಿತ್ರಣ,. ನಾಡಹಬ್ಬ ದಸರಾ ಸಮಿತಿ ಭಾರತಾಂಭೆ ಚಿತ್ರ ಪ್ರಸ್ತುತ ಪಡಿಸಿದವು. ೧೭ ನೇ ವರ್ಷದ ಆಚರಣೆಯಲ್ಲಿ ಅರುವತ್ತೊಕ್ಲು ಕಾಫಿ ಬೋರ್ಡ್ ಕಾಡ್ಲಯ್ಯಪ್ಪ ಸಮಿತಿ ಸಜನ್ ಅಧ್ಯಕ್ಷತೆಯಲ್ಲಿ ಗಣಪತಿಯಿಂದ ಗಜಾಸುರನ ವಧೆ

(ಮೊದಲ ಪುಟದಿಂದ) ಕಥೆಯನ್ನು ಆಯ್ದು ಕಲಾಕೃತಿಯನ್ನು ನಿರ್ಮಿಸಿ ೪ ಟ್ರಾö್ಯಕ್ಟರ್, ೧ ಹಿಟಾಚಿ, ೧ ಕ್ರೇನ್ ಬಳಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯಿತು. ೩೧ನೇ ವರ್ಷದ ಆಚರಣೆಯ ಹರಿಶ್ಚಂದ್ರಪುರ ನಮ್ಮ ದಸರಾ ಸಮಿತಿ ನರಸಿಂಹನ ಅವತಾರದಲ್ಲಿ ಹಿರಣ್ಯ ಕಶ್ಯಪನ ಅಂತ್ಯ ಕಥೆಗೆ ಕಲಾಕೃತಿಯನ್ನು ನಿರ್ಮಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿತು. ಕರ್ತಂಡ ಸೋಮಣ್ಣ ಅಧ್ಯಕ್ಷತೆಯಲ್ಲಿ ಕಲಾಕೃತಿ ನಿರ್ಮಾಣಕ್ಕೆ ಸಮಿತಿ ೩ ಟ್ರಾö್ಯಕ್ಟರ್, ೧ ಜೆಸಿಬಿ ಮತ್ತು ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆಯಿತು. ಸ್ನೇಹಿತರ ಬಳಗ ಕೊಪ್ಪ ತನ್ನ ೩೪ ವರ್ಷದ ಆಚರಣೆಯಲ್ಲಿ ಗಣಪತಿಯಿಂದ ಕಾಳಾಸುರನ ಗರ್ವ ಭಂಗ ಕಥೆಗೆ ೨ ಟ್ರಾö್ಯಕ್ಟರ್, ೧ ಹಿಟಾಚಿ, ಇನ್ನಿತರ ವಾಹನಗಳನ್ನು ಬಳಸಿ ೧೫ಕ್ಕೂ ಹೆಚ್ಚು ಕಲಾಕೃತಿಗಳೊಂದಿಗೆ ಶೋಭಾಯಾತ್ರೆಯಲ್ಲಿ ವಿಜೃಂಭಿಸಿತು. ಕಾಡ್ಯಮಾಡ ಚೇತನ್ ಅಧ್ಯಕ್ಷತೆಯಲ್ಲಿ ಶೋಭಾಯಾತ್ರೆ ಮೆರವಣಿಗೆಯನ್ನು ಪರಿಪೂರ್ಣಗೊಳಿಸಿ ಜನಮೆಚ್ಚುಗೆ ಪಡೆಯಿತು.

ಕಿಕ್ಕಿರಿದ ಜನಸ್ತೋಮ ಕಂಡು ಬಂತು. ಸ್ತಬ್ದಚಿತ್ರ ಮೆರವಣಿಗೆ, ಶೋಭಾಯಾತ್ರೆ ವೀಕ್ಷಿಸಲು ೨೫-೩೦ ಸಾವಿರ ಕಲಾಭಿಮಾನಿಗಳು ಸೇರಿ ಬೆಳಕಿನ ಚಿತ್ತಾರವನ್ನು ಆನಂದಿಸಿದರು. ಇದೇ ಮೊದಲ ಬಾರಿಗೆ ಪಟ್ಟಣದ ಮುಖ್ಯರಸ್ತೆ, ಕಾವೇರಿ ಕಲಾವೇದಿಕೆ ರಸ್ತೆಯಲ್ಲಿ ರಂಗು ರಂಗಿನ ಸೀರಿಯಲ್ ಲೈಟ್‌ಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಕಟ್ಟಡ, ಅಂಗಡಿ, ಮಳಿಗೆಗಳಿಗೆ ದೀಪಾಲಂಕಾರ ಸ್ಪರ್ಧೆ ಇದ್ದ ಕಾರಣ, ಪಟ್ಟಣವಿಡೀ ದೀಪಗಳಿಂದ ಶೃಂಗಾರಗೊAಡAತಿತ್ತು.

ಪೊಲೀಸ್ ಕಣ್ಗಾವಲು ಕೇಂದ್ರ ಸ್ಥಾಪಿಸಿ ಮುಂಜಾಗೃತೆ ತೆಗೆದುಕೊಳ್ಳಲಾಗಿತ್ತು. ೫ ಕಡೆಗಳಲ್ಲಿ ೧೦ ಅಡಿ ಎತ್ತರದಲ್ಲಿ ಪೊಲೀಸರು ನಿಂತು ಪಹರೆ ನಡೆಸುತ್ತಿದ್ದರು. ಪೊಲೀಸ್ ಸಹಾಯ ಕೇಂದ್ರವನ್ನು ೩-೪ ಕಡೆಗಳಲ್ಲಿ ತೆರೆಯಲಾಗಿತ್ತು. ಹೆಚ್ಚು ಜನ ಬಂದು ಸೇರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿತ್ತು. ಸಿಬ್ಬಂದಿ ಒಂದು ಕಡೆ ಕುಳಿತು ಕ್ಯಾಮೆರಾ ಮಾನಿಟರಿಂಗ್ ಮಾಡಿ ಭದ್ರತೆಗೆ ವಿಶೇಷ ಯೋಜನೆ ರೂಪಿಸಲಾಗಿತ್ತು. ೪೦೦ ಕ್ಕೂ ಹೆಚ್ಚು ಪೊಲೀಸರು, ಕೆಎಸ್‌ಆರ್‌ಪಿ, ಹೋಂಗಾರ್ಡ್ಸ್ ಭದ್ರತೆಯಲ್ಲಿ ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮ : ಶೋಭಾಯಾತ್ರೆಗೆ ಕೊಡಗು ಉಸ್ತುವಾರಿ ಸಚಿವ ಹಾಗೂ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಶಾಸಕ ಕೆ. ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಂಬಿಕೆ ಆಧಾರದಲ್ಲಿ ಕಟ್ಟಿದ ಸಮಾಜವನ್ನು ಕೆಲ ದುಷ್ಟರು ಕೆಡುವುತ್ತಿದ್ದಾರೆ. ದಸರಾ ಆಚರಣೆಯಲ್ಲಿ ದೇವಿ ರಾಕ್ಷಸರನ್ನು ಸಂಹಾರ ಮಾಡುವಂತೆ ದುಷ್ಟರನ್ನು ಸಮಾಜದಿಂದ ದೂರ ಇಡಬೇಕಾಗಿದೆ ಎಂದು ಹೇಳಿದರು.

ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಾಧ್ಯಕ್ಷ ಸಿ.ಕೆ. ಬೋಪಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ರಾಜ್ಯ ಸಚಿವ ನಾಡೋಜ ಡಾ. ಮಹೇಶ್ ಜೋಷಿ, ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಬಿ.ಸಿ. ಸತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಕಿತ್ತಳೆ ಬೆಳೆಗಾರರ ಸಂಘದ ಅಧ್ಯಕ್ಷ ಚೆಪುö್ಪಡೀರ ಅರುಣ್ ಮಾಚಯ್ಯ, ಬಾಜಪ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್‌ಗಣಪತಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕಾಂಗ್ರೆಸ್ ಮುಖಂಡ ಮುಕ್ಕಾಟಿರ ಶಿವು ಮಾದಪ್ಪ ಉಪಸ್ಥಿತರಿದ್ದರು. ಮನೆಯಪಂಡ ಶೀಲಾ ಬೋಪಣ್ಣ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಕೊಣಿಯಂಡ ಬೋಜಮ್ಮ ಸ್ವಾಗತ ಮಾಡಿದರು. -ಎನ್.ಎನ್. ದಿನೇಶ್