ಮಡಿಕೇರಿ, ಅ. ೩: ‘ಬನ್ನಿ ಆಂಟಿ, ಅಂಕಲ್ ನಮ್ಮಂಗಡಿಗೆ ಬಂದು ತಕೋಳಿ’ ಅಂತಾ ಕೂಗಿ ಕರೆಯುತ್ತಿರೋ ಪುಟಾಣಿಗಳು, ‘ನಮ್ಮಲ್ಲಿ ಬನ್ನಿ ಕಡಿಮೆಗೆ ಕೊಡ್ತೀವಿ’ ಅಂತಾ ಪೈಪೋಟಿಯಲ್ಲಿ ನಡೆಯುತ್ತಿರುವ ವ್ಯಾಪಾರ, ಬಾಯಲ್ಲಿ ನೀರುಣಿಸುವ ಪಾನಿಪುರಿ, ಚುರುಮುರಿ ಸೇರಿದಂತೆ ನಾನಾ ಬಗೆಯ ಆಹಾರ ಪದಾರ್ಥ, ಮತ್ತೊಂದೆಡೆ ವೇಷಧರಿಸಿ ತೊದಲು ನುಡಿಯಾಡುತ್ತ ಆಕರ್ಷಿಸಿದ ಚಿಣ್ಣರು ಇದನ್ನು ಹುರಿದುಂಬಿಸಲು ಬಂದ ಜನರು...

ಹೌದು...ಇಂದು ಮಡಿಕೇರಿಯ ಗಾಂಧಿ ಮೈದಾನ ಅಕ್ಷರಶಃ ಮಕ್ಕಳ ವಶದಲ್ಲಿತ್ತು. ಎತ್ತ ನೋಡಿದರು ಚಿಣ್ಣರದ್ದೆ ಕಲರವ. ಅವರುಗಳ ಸಂಭ್ರಮಕ್ಕೆ ಇಂದು ಪಾರವೇ ಇರಲಿಲ್ಲ. ಮಕ್ಕಳು ಒಂದೆಡೆ ವ್ಯಾಪಾರದ ಮೂಲಕ ವ್ಯವಹಾರಿಕ ಅನುಭವ ಪಡೆದರೆ, ಮತ್ತೊಂದೆಡೆ ತಮ್ಮ ಪ್ರತಿಭಾ ಸಾಮರ್ಥ್ಯವನ್ನು ವಿವಿಧ ಕಾರ್ಯಕ್ರಮಗಳಲ್ಲಿ ಅನಾವರಣ ಗೊಳಿಸಿದರು.

ಮಡಿಕೇರಿ ದಸರಾ ಸಮಿತಿ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಡೆದ ಮಕ್ಕಳ ದಸರಾ ಜನಮನಸೆಳೆಯುವಲ್ಲಿ ಯಶಸ್ವಿಯಾ ಯಿತು. ಬೆಳಿಗ್ಗಿನಿಂದಲೇ ಮಕ್ಕಳ ದಂಡು ಮೈದಾನಕ್ಕೆ ಹರಿದುಬಂತು. ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಕ್ಲೇ ಮಾಡಲಿಂಗ್, ಛದ್ಮವೇಷ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು.

ವ್ಯಾಪರಕ್ಕಿಳಿದ ಚಿಣ್ಣರು

ಗ್ರಾಮೀಣ ಭಾಗದಿಂದ ಖರೀದಿಸಿ ತಂದ ನಾನಾ ಬಗೆಯ ತಾಜಾ ತರಕಾರಿ, ಸೊಪ್ಪು, ಗಾಂಧಾರಿ ಮೆಣಸು, ಶುಂಠಿ, ಕಬ್ಬು, ಗಜನಿಂಬೆ, ಕೊಡಗಿನ ಜೇನು, ಕಾಂಚAಪುಳಿ ಹಾಗೂ ಹಣ್ಣುಗಳು ಮಕ್ಕಳ ಸಂತೆಯಲ್ಲಿ ಮಾರಾಟಗೊಂಡರೆ, ಮಕ್ಕಳ ಅಂಗಡಿಯಲ್ಲಿ ಫ್ಯಾನ್ಸಿ ವಸ್ತುಗಳು, ಲೇಖನಿಗಳು, ಆಹಾರ ಪದಾರ್ಥಗಳು, ತಂಪು ಪಾನೀಯ, ಕರಿದ ತಿಂಡಿಗಳು, ಕರಕುಶಲ ವಸ್ತುಗಳು, ಚಿಣ್ಣರ ಕೈಯಲ್ಲಿ ಮೂಡಿದ ಚಿತ್ರಕಲೆಗಳು, ಅಕ್ವೇರಿಯಂ ಮೀನುಗಳು, ಮಡಿಕೇರಿಯ ಬಾಲಮಂದಿರದ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳು, ಅಲಂಕಾರಿಕ ವಸ್ತುವಿನಲ್ಲಿ ಮಾಡಲ್ಪಟ್ಟ ಚಿತ್ರಗಳು ಸೇರಿದಂತೆ ಇನ್ನಿತರ ವಸ್ತುಗಳು ಗ್ರಾಹಕರನ್ನು ಸೆಳೆಯುವಂತೆ ಮಾಡಿತು.

(ಮೊದಲ ಪುಟದಿಂದ) ಮಕ್ಕಳ ಉತ್ಸಾಹಕ್ಕೆ ಪೋಷಕರು ಕೂಡ ಬೆಂಬಲ ನೀಡಿ ಅವರೊಂದಿಗೆ ಸಹಕರಿಸುತ್ತಿದ್ದದ್ದು ಕಂಡು ಬಂತು.

ಬೆಳಿಗ್ಗಿನಿಂದಲೆ ಉತ್ಸಾಹದಿಂದ ಚಿಣ್ಣರು ಮಾರಾಟ ಹಾಗೂ ಖರೀದಿಯಲ್ಲಿ ತೊಡಗಿಸಿಕೊಂಡರು. ಕಿರಿಯ ವ್ಯಾಪಾರಿಗಳೊಂದಿಗೆ ಹಿರಿಯ ಖರೀದಿದಾರರು ‘ಬರ್ಗಿನ್’ ಮಾಡುವುದು ಕಂಡುಬAತು. ಅನುಭವಿ ವ್ಯಾಪಾರಿಗಳಂತೆ ಪುಟಾಣಿಗಳು ಖರೀದಿದಾರರನ್ನು ಮನವೊಲಿಸಿ ವಸ್ತುಗಳನ್ನು ಮಾರಾಟ ಮಾಡಿದರು. ಇದು ಅವರುಗಳ ಕ್ರಿಯಾಶೀಲತೆಗೆ ಕನ್ನಡಿ ಹಿಡಿದಂತಿತ್ತು. ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಬಹುತೇಕ ಎಲ್ಲಾ ತರಕಾರಿ, ಸೊಪ್ಪುಗಳು ಮಾರಾಟಗೊಂಡವು. ಆಹಾರ ಪದಾರ್ಥಗಳಂತು ಕೆಲವೇ ಸಮಯದಲ್ಲಿ ‘ಸೋಲ್ಡ್ ಔಟ್’ ಆಯಿತು. ಈ ವಿಶೇಷ ಅನುಭವದಿಂದ ಚಿಣ್ಣರು ವ್ಯಾಪಾರದ ಹಿಂದಿನ ಕಷ್ಟ, ಸವಾಲುಗಳನ್ನು ಅರಿತುಕೊಂಡರು. ಬಹುತೇಕ ಪುಟಾಣಿ ವ್ಯಾಪಾರಿಗಳು ಹೂಡಿದ್ದ ಬಂಡವಾಳದ ಎರಡುಪಟ್ಟು ಸಂಪಾದಿಸಿದರು.

ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹಾಗೂ ಸಮಿತಿ ಪ್ರಮುಖರು ಪ್ರತಿ ಮಕ್ಕಳ ಅಂಗಡಿಗೆ ತೆರಳಿ ಅವರು ಮಾರಾಟ ಮಾಡುತ್ತಿದ್ದ ವಸ್ತುಗಳನ್ನು ಖರೀದಿಸಿದರು. ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರ ಮಗಳು ಬಿ.ಎಸ್.ಹರ್ಷಿತಾ ಕೂಡ ಅಮ್ಮ ಮಾಡಿಕೊಟ್ಟ ಆಹಾರ ಪದಾರ್ಥ, ಹೇಳಿಕೊಟ್ಟ ಮಂಡಕ್ಕಿ ಮಾಡಿ ಅವುಗಳನ್ನು ಮಾರಾಟ ಮಾಡಿ ಖುಷಿ ಅನುಭವಿಸಿದರು. ಅವರ ಮಗ ಕೂಡ ಬಸವಣ್ಣ ಅವರ ಛದ್ಮವೇಷ ಧರಿಸಿ ಗಮನ ಸೆಳೆದನು.

ಆಕರ್ಷಿಸಿದ ಛದ್ಮವೇಷ

ಛದ್ಮವೇಷದ ಮೂಲಕ ಅನೇಕ ಸಾಮಾಜಿಕ ಸಂದೇಶವನ್ನು ಚಿಣ್ಣರು ಸಾರಿದರು. ಸೈನಿಕರು, ಸ್ವಾತಂತ್ರö್ಯ ಹೋರಾಟಗಾರರು, ರೈತರು, ವೀರ ಮಹಿಳೆಯರು, ಪ್ರಾಣಿ, ಪಕ್ಷಿ, ಕೀಟ, ದೇವರ ವೇಷಗಳನ್ನು ಧರಿಸಿ ವೇದಿಕೆಯಲ್ಲಿ ಕಮಾಲ್ ಮಾಡಿದರು. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮಹತ್ವ ಅದರಿಂದಾಗುವ ಪ್ರಯೋಜನದ

ಬಗ್ಗೆ ಬಾಲಕಿಯೋರ್ವಳು ಛದ್ಮವೇಷದ ಮೂಲಕ ಮಾಹಿತಿ ನೀಡಿದ್ದು ವಿಶೇಷವಾಗಿತ್ತು. ಇದರೊಂದಿಗೆ ವಿವಿಧ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವ ಛದ್ಮವೇಷವು ಪ್ರೇಕ್ಷಕರ

ಮೆಚ್ಚುಗೆಗೆ ಪಾತ್ರವಾಯಿತು. ೧೩೪ ಪುಟಾಣಿಗಳು ಛದ್ಮವೇಷದಲ್ಲಿ ಭಾಗವಹಿಸಿದ್ದರು.

ಗಮನ ಸೆಳೆದ ಮಕ್ಕಳ ಮಂಟಪ

ವಿವಿಧ ಪೌರಾಣಿಕ ಕಥಾ ಸಾರಂಶ ಸಾರುವ ಮಂಟಪಗಳನ್ನು ಮಕ್ಕಳೇ ತಯಾರಿಸಿ ಜನರಿಗೆ ವಿಶೇಷ ಅನುಭವ ನೀಡಿದರು. ಥರ್ಮೋಕಲ್, ಕಾರ್ಡ್ಬೋರ್ಡ್, ಸ್ಪಾಂಜ್, ಕಲರ್ ಪೇಪರ್, ದೇವರ ಹಾಗೂ ರಾಕ್ಷಸರ ಕಲಾಕೃತಿಗಳು, ಫೋಟೋಗಳನ್ನು ಬಳಸಿಕೊಂಡು ಚೆಂದದ ಮಂಟಪಗಳನ್ನು ಅನಾವರಣ ಮಾಡಿದರು.

ಶತಮಹಿಷಿಯ ಮರ್ದನ, ಗಜಸುರನ ವಧೆ, ಪರಶುರಾಮನಿಂದ ಗಣಪತಿಯ ದಂತ ಭಗ್ನ, ಗಜಾಸುರನ ವಧೆ, ಶಂಬುನಿಶುAಭ, ಕಾಳಸುರನ ಸಂಹಾರ, ಗಣಪತಿಯಿಂದ ತಾಳಸುರನ ವಧೆ ಎಂಬ ಕಥಾ ಹಂದರದಲ್ಲಿ ಮಂಟಪಗಳು ರೂಪುಗೊಂಡಿದ್ದವು.

ಮಂಟಪಕ್ಕೆ ಹೊಂದುವ ಅಲಂಕಾರ ಮಾಡಿದ್ದ ಪುಟಾಣಿಗಳು ಪೌರಾಣಿಕ ಹಿನ್ನೆಲೆಯನ್ನು ಧ್ವನಿವರ್ದಕದ ಮೂಲಕ ಸಾದರಪಡಿಸಿದರು. ಮಡಿಕೇರಿ ಹಾಗೂ ಸುತ್ತಮುತ್ತಲಿನ ಮಕ್ಕಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ದಸರಾ ರಂಗಿಗೆ ಕಳೆ ತುಂಬಿದರು.

- ಹೆಚ್.ಜೆ. ರಾಕೇಶ್