ಮಡಿಕೇರಿ, ಸೆ. ೨೯: ಕಾಂಗ್ರೆಸ್ ಪಕ್ಷ ರಾಜಕೀಯ ಬೆಳವಣಿಗೆಗೆ ಭಾರತ್ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದೆ ಹೊರತು ಇದರಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಕರ್ನಾಟಕ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ‘ಪೇ.ಸಿಎಂ’ ಹೆಸರಿನ ಆಂದೋಲನ ನಿರಾಧಾರ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಪಾದಯಾತ್ರೆ ಉದ್ದೇಶ ಸ್ಪಷ್ಟವಾಗಿಲ್ಲ. ಭಾರತವನ್ನು ವಿಂಗಡಿಸಿದ ಕಾಂಗ್ರೆಸ್ ಇದೀಗ ಜೋಡಿಸುವ ಯತ್ನ ಮಾಡುತ್ತಿರುವುದು ವಿಪರ್ಯಾಸ. ಅದುವೇ ಭಾರತವನ್ನು ವಿಭಜಿಸಿ, ಹಾಗೂ ಚೈನಾ ದೇಶದ ಅತಿಕ್ರಮಣ ತಪ್ಪಿಸಲು ಅಂದಿನ ಸೇನಾ ಮುಖ್ಯಸ್ಥರುಗಳಾದ ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ನೀಡಿದ ಸಲಹೆಗಳನ್ನು ಪರಿಗಣಿಸದ ಜವಹರ್‌ಲಾಲ್ ನೆಹರು ಅವರ ಸರ್ವಾಧಿಕಾರ ಧೋರಣೆಯಿಂದ ಭಾರತಕ್ಕೆ ಸಮಸ್ಯೆಯಾಯಿತು. ಈ ಜಾಥಾ ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು. ಇವೆಲ್ಲ ಅಡೆತಡೆಗಳನ್ನು ಎದುರಿಸಿ ಇದೀಗ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಮುಂಚೂಣಿಗೆ ಬಂದಿದೆ ಎಂದರು.
ಟಿಪ್ಪು ಜಯಂತಿಯಿAದ ಉಂಟಾದ ಸಂಘರ್ಷ, ಕೇರಳದ ಕೆಲವೊಂದು ಸಮಾಜಘಾತುಕ ಶಕ್ತಿಗಳಿಂದ ಕೊಡಗಿನ ಮೂಲನಿವಾಸಿ ಗಳನ್ನು ಒಕ್ಕಲೆಬ್ಬಿಸುವ ವ್ಯವಸ್ಥಿತ ಸಂಚು ನಡೆಯುತ್ತಿರುವುದು, ಸೈನ್ಯದಲ್ಲಿ ಕೂರ್ಗ್ ರೆಜಿಮೆಂಟ್ ಪ್ರಾರಂಭ ಹಾಗೂ ಕಸ್ತೂರಿ ರಂಗನ್ ವರದಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ನಿಲುವು ಬಹಿರಂಗ ಗೊಳಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ರಾಜ್ಯ ಸರಕಾರ ನೂರಾರು ಯೋಜನೆ ರೂಪಿಸಿ ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದೆ. ಎಲ್ಲಾ ವರ್ಗದವರ ಹಿತಾಸಕ್ತಿಗೆ ಕೆಲಸ ಮಾಡಿದೆ. ಕಾಂಗ್ರೆಸ್ ನಮ್ಮ ಸರಕಾರದ ವಿರುದ್ಧ ಮಾಡುತ್ತಿರುವುದು ಆರೋಪ ಸುಳ್ಳು. ಯಾವುದಾದರು ದಾಖಲೆಗಳಿದ್ದಲ್ಲಿ ಬಹಿರಂಗಗೊಳಿಸಲಿ ಎಂದು ಸವಾಲೆಸೆದರು.
ಪಿಎಫ್‌ಐ ನಿಷೇಧ ಸ್ವಾಗತಾರ್ಹ
ಪಿಎಫ್‌ಐ ಸೇರಿದ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿರುವುದು ಸ್ವಾಗತಾರ್ಹ ಎಂದು ರಂಜನ್ ಹೇಳಿದರು. ಸಮಾಜದ್ರೋಹಿ ಸಂಘಟನೆ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಭಾರತ ಸರಕಾರ ದಿಟ್ಟ ನಡೆ ತೋರಿದೆ.
ಆರ್.ಎಸ್.ಎಸ್. ಅನ್ನು ನಿಷೇಧಿಸಬೇಕೆಂಬ ಹೇಳಿಕೆಗಳು ಖಂಡನೀಯ. ಆರ್.ಎಸ್.ಎಸ್. ದೇಶಪ್ರೇಮ, ರಾಷ್ಟç ಚಿಂತನೆ ಮೂಡಿಸುವ ಸಂಘಟನೆಯಾಗಿದೆ. ಪಿಎಫ್‌ಐ ರೀತಿ ಕೊಲೆಗಡುಕ ಸಂಘಟನೆಯಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ಪಳೆಯಂಡ ದೇವಯ್ಯ ಮಾತನಾಡಿ, ಭಾರತ್ ಜೋಡೋ ಮೊದಲು ಕಾಂಗ್ರೆಸ್ ಪಕ್ಷವನ್ನು ಜೋಡಿಸಿಕೊಳ್ಳಿ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಜಿಲ್ಲಾ ವಕ್ತಾರ ಮಹೇಶ್ ಜೈನಿ ಇದ್ದರು.