ಮಡಿಕೇರಿ, ಸೆ. ೨೯: ಕಾಂಗ್ರೆಸ್‌ನ ಇಬ್ಬರು ಸಕ್ರಿಯ ಕಾರ್ಯಕರ್ತರ ಮೇಲೆ ಬಿಜೆಪಿಯ ಮೂವರು ಮುಖಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಅವರನ್ನು ಭೇಟಿ ಯಾಗಿ ಮನವಿ ಪತ್ರ ಸಲ್ಲಿಸಲಾಯಿತು.

ತಾ. ೨೮ ರಂದು ಬೆಳಗ್ಗೆ ಸುಮಾರು ೮.೩೦ರ ವೇಳೆಗೆ ಅರೆಕಾಡು ಬಳಂಜಿಕೆರೆ ಬಳಿಯ ಕಾಲೋನಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಶ್ವಂತ್ ದೊಲ್ಪಾಡಿ ಹಾಗೂ ಬ್ಲಾಕ್‌ನ ಕೋಶಾಧಿಕಾರಿ ಬಲ್ಲಚಂಡ ಚಂದನ್ ಅಯ್ಯಪ್ಪ ವ್ಯಕ್ತಿಯೊಬ್ಬರ ಅಂತ್ಯಸAಸ್ಕಾರದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಬಿಜೆಪಿ ಮುಖಂಡರಾದ ಅಪ್ರು ರವೀಂದ್ರ, ಪ್ರಭುಶೇಖರ್ ಮತ್ತು ರಘು ಆನಂದ್ ಅವರುಗಳು ಮೂರು ವಾಹನಗಳಲ್ಲಿ ಮಾರಕಾಸ್ತçಗಳೊಂದಿಗೆ ಆಗಮಿಸಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇನ್ನೂ ಆರೋಪಿಗಳನ್ನು ಬಂಧಿಸದೇ ಇರುವುದು ಅನುಮಾನ ಮೂಡಿಸಿದೆ ಎಂದು ಧರ್ಮಜ ಉತ್ತಪ್ಪ ಅಸಮಾಧಾನ ಹೊರಹಾಕಿ ದರು. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಎಸ್ಪಿ ಕಚೇರಿ ಎದುರು ಅಹೋರಾತ್ರಿ ಧರಣಿ ಹಾಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಹಲ್ಲೆಕೋರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತೇವೆ. ಶೀಘ್ರವೇ ಆರೋಪಿಗಳನ್ನು ವಶಕ್ಕೆ ಪಡೆದು, ರಾಜಕೀಯ ಕಾರಣವಾ ಅಥವಾ ವೈಯಕ್ತಿಕ ದ್ವೇಷವ ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ವಿ.ಪಿ. ಶಶಿಧರ್, ಸೂರಜ್ ಹೊಸೂರು, ಅನಂತ್ ಕುಮಾರ್, ಪ್ರಭು ರೈ ಮತ್ತಿತರರು ಇದ್ದರು.