ಕೂಡಿಗೆ, ಸೆ. ೨೭: ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಂ.ಎA. ಮಹಾದೇವ ಅವರ ಅಧ್ಯಕ್ಷತೆಯಲ್ಲಿ ಬನಶಂಕರಿ ಸಮುದಾಯ ಭವನದ ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ಹಿಂದಿನ ಸಾಲಿನ ವಾರ್ಷಿಕ ವರದಿಯನ್ನು ಸಂಘದ ಸಿಇಓ ಹೆಚ್.ಎನ್. ಗಿರೀಶ್ ಓದಿ ದಾಖಲು ಮಾಡಿದರು. ನಿವ್ವಳ ಲಾಭಗಳ ವಿಲೇವಾರಿ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು. ಮುಂಬರುವ ವರ್ಷಕ್ಕಾಗಿ ತಯಾರಿಸಿದ ಸಂಘದ ಚಟುವಟಿಕೆಗಳ ಅನುಮೋದನೆ ಪಡೆಯಲಾಯಿತು. ಸಭೆಯ ವರದಿಗಳನ್ನು ಸಮರ್ಪಕವಾಗಿ ದಾಖಲಿಸಲು ಸದಸ್ಯರು ಆಗ್ರಹಿಸಿದರು.

ಸಂಘದ ಮೂಲಕ ಸಮರ್ಪಕ ವಾಗಿ ರಸಗೊಬ್ಬರ ಪೂರೈಸಬೇಕು, ರಸಗೊಬ್ಬರಕ್ಕೆ ಹೆಚ್ಚಿನ ದರ ಪಡೆದು ಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಸಭೆಯಲ್ಲಿ ಕೇಳಿಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಮಹಾದೇವ, ಮಾಜಿ ಅಧ್ಯಕ್ಷ ಹೆಚ್.ಜೆ. ಪರಮೇಶ್, ಸಂಘದ ಹಿತದೃಷ್ಠಿಯಿಂದ ಸಣ್ಣ ಪ್ರಮಾಣದ ಲಾಭಾಂಶ ವಿಧಿಸಿ ಮಾರಾಟ ಮಾಡಲಾಗುತ್ತಿದೆ ಎಂದರು. ರಸಗೊಬ್ಬರ ಡೀಲರ್ ಶಿಪ್ ಪಡೆದುಕೊಳ್ಳದ ಕಾರಣ ಇತರೆ ಸಂಘಗಳಿಗೆ ದೊರಕುವ ರಿಯಾಯಿತಿ ನಮ್ಮ ಸಂಘಕ್ಕೆ ಲಭಿಸುತ್ತಿಲ್ಲ ಎಂದು ಸಿಇಓ ಗಿರೀಶ್ ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸರಿಪಡಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸಂಘದ ನೂತನ ಕಚೇರಿ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮಕ್ಕೆ ಸಂಘದ ಸದಸ್ಯರನ್ನು ಗೌರವಯುತ ವಾಗಿ ಆಹ್ವಾನಿಸಿಲ್ಲ ಎಂದು ಸದಸ್ಯ ಮಧುಸೂದನ್ ಆಕ್ರೋಷ ವ್ಯಕ್ತಪಡಿಸಿದರು. ಮರಣ ನಿಧಿ ಹೆಚ್ಚಳ, ನೂತನ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮ ಖರ್ಚು ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸಂಘದ ಸದಸ್ಯರು ಸಂಘದ ಬೆಳವಣಿಗೆಗೆ ಪೂರಕವಾದ ಅನೇಕ ವಿಷಯಗಳ ಬಗ್ಗೆ ಚರ್ಚೆಗಳು ನಡೆಸಿದರು.

ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎA. ಮಹದೇವ್, ಪ್ರಸಕ್ತ ಸಾಲಿನಲ್ಲಿ ಸಂಘ ರೂ. ೯,೩೧,೯೩೨ ನಿವ್ವಳ ಲಾಭ ಗಳಿಸಿದೆ. ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ ಎಂದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಹೆಚ್.ಆರ್. ಮಣಿಕಂಠ, ನಿರ್ದೇಶಕರಾದ ಹೆಚ್.ಸಿ. ಜಲೇಂದ್ರ, ಹೆಚ್.ಟಿ. ದಿನೇಶ್, ಹೆಚ್.ಕೆ. ಕವಿತಾ, ಹೆಚ್.ಜೆ. ಪರಮೇಶ್, ಹೆಚ್.ಟಿ. ಮೋಹನ್, ಹೆಚ್.ಎಲ್. ರವೀಂದ್ರ, ಎಂ.ಎಸ್. ಶಶಿಕಲಾ, ಹೆಚ್.ಜೆ. ಸ್ವಾಮಿ, ಹೆಚ್.ವಿ. ಸೋಮಶೇಖರ್, ಲೆಕ್ಕಿಗ ವಿನಯ್ ಮತ್ತು ಸಿಬ್ಬಂದಿಗಳು ಇದ್ದರು.